ಐಪಿಎಲ್: ಗುಜರಾತ್ ಟೈಟಾನ್ಸ್ ಶುಭಾರಂಭ

ಋತುರಾಜ್ ಗಾಯಕ್ವಾಡ್ ಅರ್ಧಶತಕ ವ್ಯರ್ಥ, ಗಿಲ್ 63 ರನ್

Update: 2023-03-31 18:13 GMT

    ಅಹಮದಾಬಾದ್, ಮಾ.31: ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (63 ರನ್, 36 ಎಸೆತ, 6 ಬೌಂಡರಿ, 3 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ವಿಕೆಟ್ ಅಂತರದಿಂದ ಮಣಿಸಿ ಶುಭಾರಂಭ ಮಾಡಿದೆ.

ಶುಕ್ರವಾರ ಟಾಸ್ ಜಯಿಸಿದ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಚೆನ್ನೈ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತು.

ಗೆಲ್ಲಲು 179 ರನ್ ಗುರಿ ಪಡೆದ ಗುಜರಾತ್ 19.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.

ವಿಜಯ ಶಂಕರ್(27 ರನ್), ವೃದ್ದಿಮಾನ್ ಸಹಾ(25 ರನ್), ಸಾಯಿ ಸುದರ್ಶನ್(22 ರನ್), ರಾಹುಲ್ ಟೆವಾಟಿಯ(ಔಟಾಗದೆ 15 ರನ್) ಎರಡಂಕೆಯ ಸ್ಕೋರ್ ಗಳಿಸಿದರು.

ಚೆನ್ನೈ ಪರ ರಾಜ್ಯವರ್ಧನ್(3-36)ಯಶಸ್ವಿ ಬೌಲರ್ ಎನಿಸಿಕೊಂಡರು. ಒಂದಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ಚೆನ್ನೈ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಕೇವಲ 23 ಎಸೆತಗಳಲ್ಲಿ 50 ರನ್(3 ಬೌಂಡರಿ, 5 ಸಿಕ್ಸರ್)ಪೂರೈಸಿದರು.

ಔಟಾಗದೆ 92 ರನ್(50 ಎಸೆತ, 4 ಬೌಂಡರಿ, 9 ಸಿಕ್ಸರ್) ಗಳಿಸಿದ ಗಾಯಕ್ವಾಡ್ ಅವರು ಅಂಬಟಿ ರಾಯುಡು ಜೊತೆಗೆ 4ನೇ ವಿಕೆಟಿಗೆ 51 ರನ್ ಸೇರಿಸಿ ಚೆನ್ನೈ ಸ್ಕೋರನ್ನು ಹೆಚ್ಚಿಸಿದರು. ಗಾಯಕ್ವಾಡ್ ಹೊರತುಪಡಿಸಿ ಮೊಯಿನ್ ಅಲಿ(23 ರನ್), ಶಿವಂ ದುಬೆ(19 ರನ್),ಎಂ.ಎಸ್. ಧೋನಿ (ಔಟಾಗದೆ 14 ರನ್)ಹಾಗೂ ಅಂಬಟಿ ರಾಯುಡು(12 ರನ್) ಎರಡಂಕೆಯ ಸ್ಕೋರ್ ಗಳಿಸಿದರು.

ಗುಜರಾತ್ ಪರ ಸ್ಪಿನ್ನರ್ ರಶೀದ್ ಖಾನ್(2-26), ವೇಗಿಗಳಾದ ಮುಹಮ್ಮದ್ ಶಮಿ(2-29) ಹಾಗೂ ಅಲ್ಜಾರಿ ಜೋಸೆಫ್(2-33)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
 

Similar News