ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ
ಬೆಂಗಳೂರು: ಅದ್ಭುತ ಫಾರ್ಮ್‌ನಲ್ಲಿರುವಂತೆ ಕಂಡುಬಂದಿರುವ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕವನ್ನು ಗಳಿಸುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರವಿವಾರ ಆಡಿದ ಮೊದಲ ಪಂದ್ಯದಲ್ಲಿ 8 ವಿಕೆಟ್ ನಿಂದ ಗೆಲುವು ದಾಖಲಿಸಲು ನೆರವಾಗಿದ್ದಾರೆ.
ಕೊಹ್ಲಿ ಕೇವಲ 49 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ ಔಟಾಗದೆ 82 ರನ್ ಗಳಿಸಿದರು. ಇದು ಐಪಿಎಲ್‌ನಲ್ಲಿ ಕೊಹ್ಲಿ ಗಳಿಸಿರುವ 50ನೇ 50 ಪ್ಲಸ್ ಸ್ಕೋರ್ ಆಗಿದೆ. ಅವರು ಈ ಮಹತ್ವದ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದರು
ಒಟ್ಟಾರೆ, ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಡೇವಿಡ್ ವಾರ್ನರ್ 60 ಬಾರಿ 50 ಪ್ಲಸ್ ಸ್ಕೋರ್ ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ (49) ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಪ್ರಸ್ತುತ 45 ಅರ್ಧಶತಕಗಳು ಹಾಗೂ 5 ಶತಕಗಳನ್ನು ಗಳಿಸಿದ್ದಾರೆ.
ಕೊಹ್ಲಿ ಹಾಗೂ ಎಫ್ ಡು ಪ್ಲೆಸಿಸ್ ಅವರು ಮೊದಲ ವಿಕೆಟ್ ಗೆ 148 ರನ್ ಪಾಲುದಾರಿಕೆಯೊಂದಿಗೆ ರನ್ ಚೇಸಿಂಗ್ ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಆರ್‌ಸಿಬಿ ಎಂಟು ವಿಕೆಟ್‌ಗಳ ಜಯದೊಂದಿಗೆ ಐಪಿಎಲ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ.
ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ತಂಡ ತಿಲಕ್ ವರ್ಮಾ (46 ಎಸೆತಗಳಲ್ಲಿ 84 ರನ್) ಏಕಾಂಗಿ ಹೋರಾಟದ ನೆರವಿನಿಂದ ಏಳು ವಿಕೆಟ್‌ಗೆ 171 ರನ್ ಗಳಿಸಿತು. ಆದರೆ ಕೊಹ್ಲಿ ಹಾಗೂ ಪ್ಲೆಸಿಸ್ ಅರ್ಧಶತಕಗಳನ್ನು ಸಿಡಿಸಿ ಆರ್‌ಸಿಬಿ ಇನ್ನೂ 22 ಎಸೆತಗಳು ಬಾಕಿ ಉಳಿದಿರುವಂತೆಯೇ ಗೆಲುವು ದಾಖಲಿಸಲು ನೆರವಾದರು.