ಜನಮನದ ಸಮೀಪಕ್ಕೆ ಇತಿಹಾಸವನ್ನು ಮುಟ್ಟಿಸುವ ಕೆಲಸ
1887ರಲ್ಲಿ ಶಿಲಾಶಾಸನ ವಿಭಾಗವನ್ನು ಆರಂಭಿಸಿದಾಗಿನಿಂದಲೂ ಎಸ್ಟೆಂಪೇಜ್ಗಳ ದಾಖಲಾತಿಯನ್ನು ಅದು ತನ್ನ ಪ್ರಮುಖ ಜವಾಬ್ದಾರಿಯಾಗಿ ನಿರ್ವಹಿಸಿಕೊಂಡು ಬಂದಿದೆ. ಪತ್ತೆಯಾದ ಐತಿಹಾಸಿಕ ಸತ್ಯಗಳನ್ನು ಪತ್ತೆಹಚ್ಚಲು ಪ್ರಮುಖ ಆಕರವಾಗುವ ಯಾವುದೇ ಶಾಸನದ ಎಸ್ಟೆಂಪೇಜ್‌ಗಳನ್ನು ಮಾಡಲು ಈ ಕೇಂದ್ರ ಶಿಲಾಶಾಸನಕಾರರನ್ನು ಕಳುಹಿಸುತ್ತಿತ್ತು.
ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಮೈಸೂರು ಪ್ರಾದೇಶಿಕ ಕೇಂದ್ರದಲ್ಲಿ ಮಹತ್ವದ ಕೆಲಸ ವೊಂದು ನಡೆಯುತ್ತಿದೆ. ಶಾಸನಗಳ ಪ್ರತಿಕೃತಿಗಳಿಂದ ಇತಿಹಾಸವನ್ನು ಸಂರಕ್ಷಿಸುವ ಕೆಲಸದಲ್ಲಿ ಅದು ತೊಡಗಿದೆ. ದಕ್ಷಿಣ ಭಾರತದಲ್ಲಿ ಶಾಸನ ಶಾಸ್ತ್ರದ ರಾಷ್ಟ್ರೀಯ ಮ್ಯೂಸಿಯಂ ಸ್ಥಾಪಿಸುವುದಕ್ಕೂ ಸಂಸ್ಥೆ ಉದ್ದೇಶಿಸಿದೆ.
ಶಾಸನಗಳ ಪ್ರತಿಕೃತಿಗಳ (Estampages) ದೊಡ್ಡ ಸಂಗ್ರಹವೇ ಇಲ್ಲಿದೆ. ಈ ಕೇಂದ್ರದ ಹಲವಾರು ಕೊಠಡಿಗಳು ಅದಕ್ಕೇ ಮೀಸಲು. ಹಲವಾರು ಭಾರತೀಯ ಭಾಷೆಗಳ ಮತ್ತು ಲಿಪಿಗಳಲ್ಲಿರುವ ಸುಮಾರು ಒಂದು ಲಕ್ಷದಷ್ಟು ಎಸ್ಟೆಂಪೇಜ್ಗಳು ಇಲ್ಲಿವೆ. ಭಾರತದ ಇತಿಹಾಸದ ಪ್ರಾಚೀನ ಮತ್ತು ಮಧ್ಯಕಾಲೀನ ಅವಧಿಯ ನಿಜವಾದ ಶಾಸನಗಳ ದಾಖಲೆಗಳಾಗಿವೆ ಇವು. ಇಲ್ಲಿನ ಪ್ರತಿಕೃತಿಗಳಲ್ಲಿ ಭದ್ರವಾಗಿರುವ ಅತ್ಯಂತ ಹಳೆಯ ಶಾಸನಗಳು ಕ್ರಿ.ಪೂ. 3ನೇ ಶತಮಾನದಷ್ಟು ಹಿಂದಿನವು. ಮೌರ್ಯ ಚಕ್ರವರ್ತಿ ಅಶೋಕನ ಶಾಸನಗಳ ನಕಲನ್ನೂ ಇಲ್ಲಿ ಕಾಣಬಹುದು. ಪಾಂಡ್ಯ ದೊರೆ ಜಾತವರ್ಮನ್ ಸುಂದರ ಪಾಂಡ್ಯನ ಕಾಲದಲ್ಲಿ 13ನೇ ಶತಮಾನದಲ್ಲಿ ದೇವಸ್ಥಾನಕ್ಕೆ ಭೂಮಿ ಉಡುಗೊರೆಯಾಗಿ ಕೊಟ್ಟಿದ್ದನ್ನು ಹೇಳುವ ಶಾಸನದ ಪ್ರತಿಯೂ ಇಲ್ಲಿರುವುದನ್ನು ವಿವರಿಸುತ್ತಾರೆ ಎಎಸ್ಐ ಪ್ರಾದೇಶಿಕ ಕೇಂದ್ರದಲ್ಲಿ ರುವ ತಮಿಳು ವಿದ್ವಾಂಸರು ಮತ್ತು ಶಿಲಾಶಾಸನಕಾರರಾದ ಪಿ.ಟಿ. ನಾಗರಾಜನ್ ಮತ್ತು ಪಿ.ಬಾಲಮುರುಗನ್.
1887ರಲ್ಲಿ ಶಿಲಾಶಾಸನ ವಿಭಾಗವನ್ನು ಆರಂಭಿಸಿದಾಗಿನಿಂದಲೂ ಎಸ್ಟೆಂಪೇಜ್ಗಳ ದಾಖಲಾತಿಯನ್ನು ಅದು ತನ್ನ ಪ್ರಮುಖ ಜವಾಬ್ದಾರಿಯಾಗಿ ನಿರ್ವಹಿಸಿಕೊಂಡು ಬಂದಿದೆ. ಪತ್ತೆಯಾದ ಐತಿಹಾಸಿಕ ಸತ್ಯಗಳನ್ನು ಪತ್ತೆಹಚ್ಚಲು ಪ್ರಮುಖ ಆಕರವಾಗುವ ಯಾವುದೇ ಶಾಸನದ ಎಸ್ಟೆಂಪೇಜ್‌ಗಳನ್ನು ಮಾಡಲು ಈ ಕೇಂದ್ರ ಶಿಲಾಶಾಸನಕಾರರನ್ನು ಕಳುಹಿಸುತ್ತಿತ್ತು. ನಂತರ ಭಾಷಾ ವಿದ್ವಾಂಸರು ಎಸ್ಟೆಂಪೇಜ್‌ಗಳ ಮೇಲಿನ ಶಾಸನಗಳನ್ನು ಸೂಕ್ಷ್ಮವಾಗಿ ಗಮನಿಸಿ, ಭಾರತೀಯ ಎಪಿಗ್ರಫಿಯ ವಾರ್ಷಿಕ ವರದಿಯಲ್ಲಿ (ಎಆರ್‌ಐಇ) ಸಾರಾಂಶವನ್ನು ದಾಖಲಿಸುತ್ತಿದ್ದರು. ಅದೇ ವೇಳೆ ಸಂಪೂರ್ಣ ಶಾಸನದ ಆಧುನಿಕ ಪ್ರತಿಲೇಖನವನ್ನು South Indian Inscriptions ಮತ್ತು Corpus Inscriptionum Indicarum ಅಂತಹ ಸರಣಿ ಸಂಪುಟಗಳಲ್ಲಿ ಸೇರಿಸುತ್ತಿದ್ದರು. ಈ ಕಾರ್ಯವು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಮುಂದುವರಿದಿದೆ ಮತ್ತು ವಸಾಹತುಶಾಹಿ ಭಾರತದಲ್ಲಿ ಶಾಸನದ ಮೊದಲ ಎಸ್ಟೆಂಪೇಜ್ ರಚಿಸಿದ ೧೩೫ ವರ್ಷಗಳ ನಂತರವೂ ಇಂದಿಗೂ ಇದು ನಡೆಯುತ್ತಿದೆ.
ಕಳೆದ 10 ತಿಂಗಳುಗಳಿಂದ ಸುಮಾರು 60 ಶಿಲಾಶಾಸನಕಾರರು ಮೈಸೂರಿನಲ್ಲಿರುವ ಎಎಸ್ಐನ ಶಿಲಾಶಾಸನ (ಎಪಿಗ್ರಫಿ) ವಿಭಾಗದ ಪ್ರಧಾನ ಕಛೇರಿಯಲ್ಲಿ ಎಸ್ಟೆಂಪೇಜ್‌ಗಳನ್ನು ವರ್ಗೀಕರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ದ್ರಾವಿಡ ಭಾಷೆಯ (ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ) ಎಸ್ಟೆಂಪೇಜ್‌ಗಳು ಮೈಸೂರಿನ ಕೇಂದ್ರದಲ್ಲಿದ್ದರೆ, ದೇವನಾಗರಿ ಲಿಪಿಯಲ್ಲಿ (ಪ್ರಾಥಮಿಕ ವಾಗಿ ಸಂಸ್ಕೃತದಲ್ಲಿ) ಮತ್ತು ಅರೇಬಿಕ್, ಪರ್ಷಿಯನ್ ಭಾಷೆಗಳಲ್ಲಿನ ಎಸ್ಟೆಂಪೇಜ್‌ಗಳನ್ನು ಲಕ್ನೋ ಮತ್ತು ನಾಗ್ಪುರದಲ್ಲಿರುವ ಎಎಸ್‌ಐ ಪ್ರಾದೇಶಿಕ ಕಚೇರಿಗಳಿಂದ ಈ ಉದ್ದೇಶಕ್ಕಾಗಿ ಮೈಸೂರಿಗೆ ತರಲಾಗಿದೆ.
ಪ್ರಪಂಚದಾದ್ಯಂತದ ವಿದ್ವಾಂಸರಿಗೆ ಲಭ್ಯವಾಗುವಂತೆ ಎಸ್ಟೆಂಪೇಜ್‌ಗಳನ್ನು ಡಿಜಿಟಲೀಕರಿಸುವ ಉದ್ದೇಶದಿಂದ ಈ ಮಹತ್ವದ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ‘‘ಇತಿಹಾಸವನ್ನು ಬರೆಯು ವಾಗ, ಇತಿಹಾಸಕಾರರು ಪ್ರಾಥಮಿಕ ಆಕರಗಳ ಮೇಲೆ ಅವಲಂಬಿತರಾಗಿರುತ್ತಾರೆ ಮತ್ತು ಈ ಎಸ್ಟೆಂಪೇಜ್‌ಗಳ ನಕಲುಗಳು ಪ್ರಾಥಮಿಕ ಮೂಲಗಳಾಗಿ ಒದಗುತ್ತವೆ’’ ಎನ್ನುತ್ತಾರೆ ನಾಗರಾಜನ್.
ಹಳೆಗನ್ನಡದಲ್ಲಿ ಪರಿಣತರಾಗಿರುವ ಮೈಸೂರು ಎಎಸ್‌ಐನ ಸಹಾಯಕ ಅಧೀಕ್ಷಕ, ಎಪಿಗ್ರಾಫಿಸ್ಟ್ ಎಸ್.ನಾಗರಾಜಪ್ಪ ಅವರ ಪ್ರಕಾರ, ನಗರೀಕರಣದಿಂದಾಗಿ ಅನೇಕ ತಾಣಗಳು, ಅವುಗಳ ಶಾಸನ
ಗಳು ನಾಶವಾಗಿವೆ. ಇಲ್ಲಿ ಸಂರಕ್ಷಿಸಿದ ಎಸ್ಟೆಂಪೇಜ್‌ಗಳು ಉಪಯುಕ್ತ ವಾಗುತ್ತವೆ. ಉದಾಹರಣೆಗೆ, ಕರ್ನಾಟಕದ ದಾವಣಗೆರೆ ಜಿಲ್ಲೆಯ ಅಣಜಿ ಗ್ರಾಮದ ಬಳಿ ಕದಂಬರು ಮತ್ತು ಪಲ್ಲವರ ನಡುವಿನ ಯುದ್ಧ ವನ್ನು ಉಲ್ಲೇಖಿಸುವ ಐತಿಹಾಸಿಕ ಮಹತ್ವದ ಶಾಸನ ಕಳೆದುಹೋಗಿದೆ. ಅದೃಷ್ಟವಶಾತ್ ಇಲ್ಲಿನ ಸಂಗ್ರಹಣೆಯಲ್ಲಿ ಆ ಶಾಸನದ ಪ್ರತಿಕೃತಿಯಿದೆ.
ನಾಗರಾಜಪ್ಪಅವರು ಎಸ್ಟೆಂಪೇಜ್ ಮಾಡುವ ಸಾಂಪ್ರದಾಯಿಕ ಪ್ರಕ್ರಿಯೆಯನ್ನು ವಿವರಿಸುವಂತೆ, ಈ ವಿಧಾನ ಸರಳವಾಗಿದ್ದರೂ, ಶಾಯಿಯ ಕಾಗದವನ್ನು ಶಾಸನಕ್ಕೆ ಅಂಟಿಸಿ ನಂತರ ಅದನ್ನು ನಿಧಾನ
ವಾಗಿ ಎಳೆಯುವುದರಿಂದ ಅದರ ನಿಖರವಾದ ಚಿತ್ರವನ್ನು ಉಳಿಸಿಕೊ ಳ್ಳುತ್ತದೆ. ಇದಕ್ಕೆ ವಿಶೇಷ ಪರಿಕರಗಳಾದ ಮ್ಯಾಪ್ಲಿಥೋ ಕಾಗದ, ಬಾಗಿದ ಬ್ರಷ್, ಕಾಯಿರ್ ಬ್ರಷ್, ವಿಶೇಷ ಶಾಯಿ (ಎಎಸ್‌ಐನ ಲ್ಲಿಯೇ ತಯಾರಿಸಲಾಗುತ್ತದೆ) ಮತ್ತು ಡ್ಯಾಬರ್ ಬೇಕಾಗುತ್ತವೆ.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ತೀರ್ಪಿನ ಹಿನ್ನೆಲೆ
ಯಲ್ಲಿ ಈ ಎಸ್ಟೆಂಪೇಜ್‌ಗಳ ಡಿಜಿಟಲೀಕರಣಗೊಳಿಸುವ ಆಲೋಚನೆ ಹುಟ್ಟಿಕೊಂಡಿತು ಎಂದು ಎಎಸ್‌ಐನ ಪ್ರಾದೇಶಿಕ ನಿರ್ದೇಶಕಿ (ದಕ್ಷಿಣ) ಮತ್ತು ಎಪಿಗ್ರಫಿಯ ಉಸ್ತುವಾರಿ ಜಿ.ಮಹೇಶ್ವರಿ ಹೇಳುತ್ತಾರೆ. ಮಾರ್ಚ್ ೨೦೨೨ರಲ್ಲಿ ಎಸ್ಟೆಂಪೇಜ್ ಡಿಜಿಟಲೀಕರಣ ಯೋಜನೆಯ ನೇತೃತ್ವ ವಹಿಸಲೆಂದೇ ಅವರನ್ನು ಕರೆಸಿಕೊಳ್ಳಲಾಯಿತು. ‘‘ಮಧುರೈ ಪೀಠ ಆಗಸ್ಟ್ ೧೯, ೨೦೨೧ರಂದು ತಮಿಳು ಎಸ್ಟೆಂಪೇಜ್‌ಗಳನ್ನು ಚೆನ್ನೈನಲ್ಲಿರುವ ಎಎಸ್‌ಐ ಕಚೇರಿಗೆ ಸ್ಥಳಾಂತರಿಸಬೇಕೆಂದು ತೀರ್ಪು ನೀಡಿತ್ತು. ಅದಕ್ಕಾಗಿ ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು’’ ಎಂದು ಮಹೇಶ್ವರಿ ಮಾಹಿತಿ ನೀಡುತ್ತಾರೆ.
ತಮಿಳಿನಲ್ಲಿ 26,000ಕ್ಕೂ ಹೆಚ್ಚು ಎಸ್ಟೆಂಪೇಜ್‌ಗಳನ್ನು ಹೊಂದಿರುವ ಎಎಸ್‌ಐ ಅಧಿಕಾರಿಗಳು, ಅವುಗಳನ್ನು ಚೆನ್ನೈಗೆ ಸ್ಥಳಾಂತರಿಸುವ ಮೊದಲು ಡಿಜಿಟಲೀಕರಣಗೊಳಿಸಲು ಉತ್ಸುಕರಾಗಿದ್ದರು. ನಂತರ ಸಂಪೂರ್ಣ ಸಂಗ್ರಹವನ್ನು ಡಿಜಿಟಲೀಕರಣ ಗೊಳಿಸಲು ನಿರ್ಧರಿಸಲಾಯಿತು. ಮಹಾನಿರ್ದೇಶಕರಾದ ವಿ.ವಿದ್ಯಾವತಿ ಅವರು ತಮಿಳು ಎಸ್ಟೆಂಪೇಜ್‌ಗಳನ್ನು ಮಾತ್ರ ಡಿಜಿಟಲೀಕರಣ ಗೊಳಿಸುವುದಕ್ಕಿಂತ ಹೆಚ್ಚಾಗಿ, ಎಎಸ್‌ಐ ಸಂಗ್ರಹದಲ್ಲಿರುವ ಎಲ್ಲಾ ಎಸ್ಟೆಂಪೇಜ್‌ಗಳನ್ನು ಡಿಜಿಟಲೀಕರಣಗೊಳಿಸಬಹುದೆಂಬ ನಿರ್ಧಾರಕ್ಕೆ ಬಂದರು.
ಮಹೇಶ್ವರಿ ಅಧಿಕಾರ ವಹಿಸಿಕೊಂಡ ನಂತರ, ಶಿಥಿಲವಾದ ಎಸ್ಟೆಂಪೇಜ್‌ಗಳನ್ನು ಸ್ಕ್ಯಾನ್ ಮಾಡಲು ಅಗತ್ಯವಾದ ತಾಂತ್ರಿಕ ಪರಿಣತಿ ಹೊಂದಿರುವ ನಾರ್ವೇಜಿಯನ್ ಸಹಯೋಗಿತ್ವದ ಕಂಪೆನಿಯನ್ನು ಎಎಸ್‌ಐ ಗುರುತಿಸಿತು. ಅದರ ತಂತ್ರಜ್ಞಾನವು ಎಸ್ಟೆಂಪೇಜ್‌ಗಳನ್ನು ಸ್ಪರ್ಶಿಸದೆ ಸ್ಕ್ಯಾನ್ ಮಾಡಬಲ್ಲದು. ಹಲವಾರು ಅಡಿಗಳಷ್ಟು ವ್ಯಾಪಿಸಿರುವ ಎಸ್ಟೆಂಪೇಜ್‌ಗಳನ್ನು ಗೋಡೆಯ ಮೇಲೆ ಅಳವಡಿಸಿದ ನಂತರ, ಕಂಪೆನಿಯ ತಾಂತ್ರಿಕ ತಜ್ಞರು ಎಎಸ್‌ಐ ಶಿಲಾಶಾಸನಕಾರರ ಸೂಚನೆಯಂತೆ ಅವುಗಳನ್ನು ಸ್ಕ್ಯಾನ್ ಮಾಡುತ್ತಾರೆ.
ಕಳೆದ ವರ್ಷ ಜುಲೈನಲ್ಲಿ ಡಿಜಿಟಲೀಕರಣ ಕಾರ್ಯ ಪ್ರಾರಂಭ ವಾಯಿತು. ಆದರೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಪ್ರಾರಂಭಿಸಲಾದ ಪ್ರಕ್ರಿಯೆಯು ತೆಲಂಗಾಣ ಹೈಕೋರ್ಟ್‌ನ ಆದೇಶ ದಿಂದಾಗಿ ಸ್ಥಗಿತಗೊಂಡಿದೆ. ಟೆಂಡರ್ ಹಂಚಿಕೆ ಪ್ರಕ್ರಿಯೆಯನ್ನು ಒಪ್ಪದ ಬಿಡ್‌ದಾರರಲ್ಲಿ ಒಬ್ಬರ ಅರ್ಜಿಯ ಹಿನ್ನೆಲೆಯಲ್ಲಿ ಈ ಆದೇಶ ಬಂದಿದೆ. ಹಂಚಿಕೆ ಕಾರ್ಯವಿಧಾನ ನಿಯಮಗಳಿಗೆ ಅನುಗುಣವಾ ಗಿರುವುದರಿಂದ ತೀರ್ಪು ಎಎಸ್‌ಐ ಪರವಾಗಿ ಬರಲಿದೆ ಎಂಬ ವಿಶ್ವಾಸ ಮಹೇಶ್ವರಿ ಅವರದು. ಉಳಿದ ಎಸ್ಟೆಂಪೇಜ್‌ಗಳಲ್ಲಿ ಸುಮಾರು ಶೇ. ೭೦ರಷ್ಟನ್ನು ತಕ್ಷಣವೇ ಡಿಜಿಟಲೀಕರಣಗೊಳಿಸಲಾಗುವುದು ಎನ್ನುತ್ತಾರೆ ಅವರು. ಎಆರ್‌ಐಇ ಸಂಪುಟಗಳನ್ನೂ ಡಿಜಿಟಲೀಕರಣಗೊಳಿಸುವ ಯೋಜನೆಗಳಿವೆ. ಇದರಿಂದಾಗಿ ಸಂಪೂರ್ಣ ಮಾಹಿತಿಯು ಸಂಶೋಧಕರಿಗೆ ಲಭ್ಯವಿರುತ್ತದೆ.
ಕೆಲವು ಶತಮಾನಗಳಷ್ಟು ಹಳೆಯದಾದ ಪುರಾವೆಗಳಿಂದಾಗಿ ಐತಿಹಾಸಿಕ ದಾಖಲೆಗಳಾಗಿರುವ ಅನೇಕ ಎಸ್ಟೆಂಪೇಜ್ಗಳು ಕಳಪೆ ಸಂರಕ್ಷಣೆ ಮತ್ತು ವರ್ಗಾವಣೆಯ ಸಮಯದಲ್ಲಿನ ಹಾನಿಯಿಂದಾಗಿ ಕಳೆದುಹೋಗಿವೆ ಎಂಬುದನ್ನು ಎಎಸ್ಐ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ಎಆರ್ಐಇ ದಾಖಲೆಗಳ ಪ್ರಕಾರ 26,000ಕ್ಕಿಂತ ಹೆಚ್ಚು ತಮಿಳು ಎಸ್ಟೆಂಪೇಜ್ಗಳು ಇರಬೇಕಾಗಿದ್ದಲ್ಲಿ, ಸುಮಾರು 24,000 ಪೂರ್ಣ ಎಸ್ಟೆಂಪೇಜ್ಗಳು ಮಾತ್ರ ಇರುವುದು ಇತ್ತೀಚಿನ ವರ್ಗೀಕರಣ ಪ್ರಕ್ರಿಯೆಯಲ್ಲಿ ಗೊತ್ತಾಗಿದೆ. ಇವುಗಳಲ್ಲಿ ಸುಮಾರು 13,000 ಈಗಾಗಲೇ ಡಿಜಿಟಲೀಕರಣಗೊಂಡು ಚೆನ್ನೈಗೆ ಸ್ಥಳಾಂತರಗೊಂಡಿವೆ.
ಎಸ್ಟೆಂಪೇಜ್‌ಗಳ ಯೋಜನೆಯನ್ನು ಟೀಕಿಸುವವರೂ ಇದ್ದಾರೆ. ಬೆಂಗಳೂರಿನ ಮಿಥಿಕ್ ಸೊಸೈಟಿಯಿಂದ ಬೆಂಬಲಿತವಾಗಿರುವ ಅತ್ಯಾಧುನಿಕ ಇನ್‌ಸ್ಕ್ರಿಪ್ಷನ್ಸ್ ೩ಡಿ ಡಿಜಿಟಲ್ ಕನ್ಸರ್ವೇಶನ್ ಪ್ರಾಜೆಕ್ಟ್ ನ ಗೌರವ ಯೋಜನಾ ನಿರ್ದೇಶಕ ಪಿ.ಎಲ್.ಉದಯ ಕುಮಾರ್ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಶಾಸನಗಳ ೩ಡಿ ಸ್ಕ್ಯಾನಿಂಗ್ ಮತ್ತು ಅವುಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಾಗುವಂತೆ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ‘‘ಎಎಸ್‌ಐ ಮೊದಲು ಕ್ಷೇತ್ರದಲ್ಲಿ ಶಾಸನಗಳ ಭೌತಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು, ನನ್ನ ಸಮೀಕ್ಷೆಗಳ ಪ್ರಕಾರ, ೨೦ನೇ ಶತಮಾನದ ಆರಂಭದಲ್ಲಿ ಮೊದಲ ಬಾರಿಗೆ ದಾಖಲಾದ ಶೇ. ೪೦ರಷ್ಟು ಶಾಸನಗಳು ಈಗ ಪತ್ತೆಯಾಗಿಲ್ಲ. ಅವರು ತಮ್ಮ ನಕಲು ವಿಧಾನಗಳನ್ನು ನವೀಕರಿಸಬೇಕು ಮತ್ತು ಒಂದು ಶತಮಾನಕ್ಕೂ ಹೆಚ್ಚು ಹಳೆಯದಾದ ನಕಲು ವಿಧಾನಗಳನ್ನು ಅವಲಂಬಿಸಿರುವುದರಿಂದ ಆಧುನಿಕ ತಾಂತ್ರಿಕ ಪರಿಹಾರಗಳನ್ನು ಬಳಸಬೇಕು’’ ಎಂಬುದು ಅವರ ಒತ್ತಾಯ.
ದೀರ್ಘಕಾಲದವರೆಗೆ ಈ ಎಸ್ಟೆಂಪೇಜ್‌ಗಳ ಮಹತ್ವವನ್ನು ನಿರ್ಲ ಕ್ಷಿಸಿದ್ದ ಎಎಸ್‌ಐ, ಡಿಜಿಟಲೀಕರಣಕ್ಕಿಂತಲೂ ಹೆಚ್ಚಿನ ಮಹತ್ವಾ ಕಾಂಕ್ಷೆಯ ಯೋಜನೆಗಳನ್ನು ಹೊಂದಿದೆ ಎನ್ನುತ್ತಾರೆ ಮಹೇಶ್ವರಿ. ‘‘ದಕ್ಷಿಣ ಭಾರತದಲ್ಲಿನ ಶಾಸನಗಳ ಮ್ಯೂಸಿಯಂನಲ್ಲಿ ಎಲ್ಲಾ ಎಸ್ಟೆಂಪೇಜ್‌ಗಳನ್ನು ಇರಿಸಲು ಬಯಸಿದ್ದೇವೆ ಮತ್ತು ಅದನ್ನು ನ್ಯಾಷನಲ್ ಮ್ಯೂಸಿಯಂ ಆಫ್ ಎಪಿಗ್ರಫಿ ಎಂದು ಕರೆಯಬೇಕೆಂಬ ಪ್ರಸ್ತಾಪ ಇಡಲಿದ್ದೇವೆ. ಇದನ್ನು ಸಂವಾದಾತ್ಮಕ ರೀತಿಯಲ್ಲಿ ಪ್ರದರ್ಶಿಸಬೇಕೆಂಬ ಯೋಜನೆಗಳಿವೆ’’ ಎನ್ನುತ್ತಾರೆ ಅವರು.
(ಕೃಪೆ: ಫ್ರಂಟ್‌ಲೈನ್)