ಅಥಣಿ ವಿಧಾನಸಭಾ ಕ್ಷೇತ್ರ: ಬಿಜೆಪಿಗೆ ಬಿಜೆಪಿಯೆ ಎದುರಾಳಿ?
ಭದ್ರಕೋಟೆಯೊಳಗೆ ಟಿಕೆಟ್ ಕಿತ್ತಾಟದಲ್ಲಿ ಬಿಜೆಪಿಗೆ ಬಿಜೆಪಿಯೇ ಎದುರಾಳಿಯೆ? | ಸಾಹುಕಾರ್ ಬ್ಲ್ಯಾಕ್ ಮೇಲ್ಗೆ ಸವದಿ ಪುತ್ರ ಹಾಕಿರುವ ಸವಾಲೇನು ಗೊತ್ತಾ? | ಕಾಂಗ್ರೆಸ್ ನಿಂದ ಬಂದು ಶಾಸಕರಾಗಿರುವ ಕುಮಟಳ್ಳಿಗೆ ಸಿಕ್ಕೀತೆ ಅವಕಾಶ? ಎದುರಾಳಿಯ ವಿರುದ್ಧ ಗೆಲ್ಲಲು ಕಾಂಗ್ರೆಸ್ ಬಳಿ ಇದೆಯೇ ಪ್ರಬಲ ರಣತಂತ್ರ?
►► ಕುತೂಹಲ ಕೆರಳಿಸಿದ ಅಖಾಡ
1967ರಲ್ಲಿ ಅಸ್ತಿತ್ವಕ್ಕೆ ಬಂದ ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ 7 ಬಾರಿ ಕಾಂಗ್ರೆಸ್, 2 ಬಾರಿ ಜನತಾದಳ, 4 ಬಾರಿ ಬಿಜೆಪಿ ಗೆಲುವು ಸಾಧಿಸಿವೆ. ಸದ್ಯ ಇದು ಬಿಜೆಪಿಯ ಭದ್ರಕೋಟೆ. 2004ರಿಂದ ಸತತ ಮೂರು ಬಾರಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಲ್ಲಿ ಆಯ್ಕೆಯಾಗಿದ್ದರು. ಆದರೆ, 2018ರಲ್ಲಿ ಕಾಂಗ್ರೆಸ್ನ ಮಹೇಶ ಕುಮಟಳ್ಳಿ ಗೆಲುವು ಸಾಧಿಸಿದರಾದರೂ, ಬಳಿಕ ಕಾಂಗ್ರೆಸ್ಗೆ ರಾಜೀನಾಮೆ ನೀಡಿ, 2019ರಲ್ಲಿ ನಡೆದ ಉಪ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಅಂತೂ ಬಿಜೆಪಿ ವಶದಲ್ಲಿಯೇ ಇರುವ ಕ್ಷೇತ್ರ ಅಥಣಿ.
ಮತದಾರರು ಮತ್ತು ಜಾತಿ ಲೆಕ್ಕಾಚಾರವನ್ನು ನೋಡುವು ದಾದರೆ, ಲಿಂಗಾಯತರ ಸಂಖ್ಯೆ ಹೆಚ್ಚಿದೆ. ಜೈನರು, ಕುರುಬರು, ಮಸ್ಲಿಮರು ಕೂಡ ನಿರ್ಣಾಯಕ ಸ್ಥಾನದಲ್ಲಿದ್ದಾರೆ.
►► ಬಿಜೆಪಿಗೆ ಬಿಜೆಪಿಯೇ ಎದುರಾಳಿ?
ಬಿಜೆಪಿಯ ಭದ್ರಕೋಟೆಯಾಗಿದ್ದರೂ, ಕಳೆದ ಎರಡು ದಶಕಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪ್ರಬಲ ಪೈಪೋಟಿ ಯನ್ನು ಎದುರಿಸಿದೆ. ಈ ಸಲದ ಚುನಾವಣೆಯಲ್ಲಿಯೂ ಬಿಜೆಪಿ ಪಾಳಯಕ್ಕೆ ಅಂಥದೇ ಪೈಪೋಟಿ ಎದುರಾಗುವ ಸಾಧ್ಯತೆ ಯಿದೆ.
ಆದರೆ ಈಗ ಟಿಕೆಟ್ ಯಾರಿಗೆ ಎಂಬುದೇ ಬಿಜೆಪಿಯಲ್ಲಿ ಬಗೆಹರಿಯದ ಪ್ರಶ್ನೆಯಾಗಿದೆ. ಮುಖ್ಯವಾಗಿ ಎಂಎಲ್ಸಿ ಲಕ್ಷ್ಮಣ ಸವದಿ ಮತ್ತು ಹಾಲಿ ಶಾಸಕ ಮಹೇಶ ಕುಮಟಳ್ಳಿ ಜೊತೆಯಾಗಿ ಕೆಲಸ ಮಾಡಿ ಕಾಂಗ್ರೆಸನ್ನು ಎದುರಿಸಬೇಕಾದ ಸ್ಥಿತಿಯಿದೆ. ಇಬ್ಬರೂ ಬಹಿರಂಗವಾಗಿ ಪರಸ್ಪರ ಹೊಂದಿಕೊಂಡು ಪಕ್ಷಕ್ಕೆ ಕೆಲಸ ಮಾಡುವ ಮಾತನಾಡುತ್ತಿದ್ದರೂ, ಒಳಗೊಳಗೇ ಟಿಕೆಟ್ ಆಕಾಂಕ್ಷಿಗಳು ಎಂಬುದು ನಿಜ.
ಇತ್ತೀಚೆಗೆ ಹೇಳಿಕೆ ನೀಡಿದ್ದ ಲಕ್ಷ್ಮಣ ಸವದಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬ ಮಾತನ್ನಾಡಿದ್ದರು. ಇದು ಮತ್ತೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇನ್ನಷ್ಟು ರಾಜಕೀಯ ಕುತೂಹಲ ಕೆರಳಿಸಿದೆ. ‘‘ಪಕ್ಷ ನನ್ನನ್ನು ಕೈಬಿಡ ಲಾರದು’’ ಎಂದೂ ಅವರು ಹೇಳಿದ್ದಾರೆ. ಅಲ್ಲದೆ ಅಥಣಿ ಅಭಿವೃದ್ಧಿ ವಿಚಾರ ಮಾತನಾಡುವಾಗ ಧರಂಸಿಂಗ್ ಅವರ ಕೊಡುಗೆಯನ್ನೂ ಅವರು ಸ್ಮರಿಸಿದರು ಎಂಬುದು ವಿಶೇಷ. ಧರಂಸಿಂಗ್ ಹಾಗೂ ಇತರ ಹಲವು ನಾಯಕರಿಂದ ಅಥಣಿ ಅಭಿವೃದ್ಧಿ ಹೊಂದಿದೆ ಎಂದಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ರಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಈ ಬಾರಿ ಮಹೇಶ್ ಕುಮಟಳ್ಳಿಯ ವರಿಗೇ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಅವರಿಗೆ ಟಿಕೆಟ್ ನೀಡದಿದ್ದರೆ ತಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೈಕಮಾಂಡಿಗೆ ಬಹಿರಂಗ ಸವಾಲು ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
►► ಸವದಿ ಪುತ್ರನ ಸವಾಲು
ಆದರೆ ರಮೇಶ್ ಜಾರಕಿಹೊಳಿಯ ಈ ತಂತ್ರಕ್ಕೆ ಸವದಿ ಕಡೆಯಿಂದ ಖಡಕ್ ಉತ್ತರವೇ ಬಂದಿದೆ. ನೇರವಾಗಿ ಲಕ್ಷ್ಮಣ್ ಸವದಿ ಮಾತಾಡಿಲ್ಲವಾದರೂ, ಅವರ ಪುತ್ರ ಚಿದಾನಂದ ಸವದಿ, ಯಾವುದೇ ಕಾರಣಕ್ಕೂ ಅಥಣಿ ಕ್ಷೇತ್ರವನ್ನು ಬಿಟ್ಟುಕೊ ಡುವ ಮಾತೇ ಇಲ್ಲ. ಲಕ್ಷ್ಮಣ ಸವದಿ ಇಲ್ಲಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದಿದ್ದಾರೆ.
ಕುಮಟಳ್ಳಿ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಜಾರಕಿ ಹೊಳಿಯೇ ಅವರಿಗೆ ಗೋಕಾಕ್ ಕ್ಷೇತ್ರವನ್ನು ಬಿಟ್ಟುಕೊಡಲಿ ಎಂದೂ ಚಿದಾನಂದ ಸವದಿ ಸವಾಲು ಹಾಕಿರುವುದು, ಬಿಜೆಪಿ ಯೊಳಗೇ ಇರಿಸುಮುರಿಸಿನ ವಾತಾವರಣ ಸೃಷ್ಟಿಸಿದೆ. ಇವನ್ನೆಲ್ಲ ನಾಯಕರು ಹೇಗೆ ಬಗೆಹರಿಸಲಿದ್ದಾರೆ ಎಂಬುದನ್ನು ನೋಡಬೇಕಿದೆ.
►► ಕಾಂಗ್ರೆಸ್ ತಂತ್ರವೇನು?
ಕಾಂಗ್ರೆಸ್ಗೆ ಈ ಚುನಾವಣೆ ಬಹಳ ಮುಖ್ಯವಾಗಿದೆ. ತನ್ನ ಹಿಡಿತದಲ್ಲಿದ್ದ ಕ್ಷೇತ್ರವನ್ನು ಆಪರೇಷನ್ ಕಮಲದ ಕಾರಣ ದಿಂದ ಕಳೆದುಕೊಂಡ ಸಂಕಟ ಅದರದು. ಹಾಗಾಗಿ, ಹೇಗಾದರೂ ಈ ಬಾರಿ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯುವ ಹಠವಂತೂ ಅದಕ್ಕಿದೆ. ಆದರೆ ಸವದಿ ಇಲ್ಲವೆ ಕುಮಟಳ್ಳಿಯ ವಿರುದ್ಧ ಪ್ರಬಲ ಅಭ್ಯರ್ಥಿ ಯಾರು ಎಂಬುದೇ ಅದಕ್ಕೆ ಬಗೆಹರಿಯದ ಪ್ರಶ್ನೆ.
ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಗಜಾನನ ಮಂಗಸೂಳಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿ. ಜೊತೆಗೆ ಎಸ್.ಕೆ.ಬುಟಾಳಿ, ಗುತ್ತಿಗೆದಾರ ಧರೆಪ್ಪಠಕ್ಕನ್ನವರ, ಉದ್ಯಮಿ ಬಸವರಾಜ ಬುಟಾಳಿ, ಶ್ರೀಕಾಂತ ಪೂಜಾರಿ, ಶಿವು ಗುಡ್ಡಾಪುರ, ಪೊಲೀಸ್ ಅಧಿಕಾರಿಯಾಗಿದ್ದ ಬಸವರಾಜ ಬಿಸನಕೊಪ್ಪಕೂಡ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್ನಿಂದ ಮಾಜಿ ಶಾಸಕ ಶಹಜಹಾನ್ ಡೊಂಗರ ಗಾಂವ ಸ್ಪರ್ಧಿಸುವ ಸಾಧ್ಯತೆಯಿದೆ.