ಆದಿವಾಸಿ ಯುವಕ ಮಧು ಹತ್ಯೆ ಪ್ರಕರಣ: ಸಂತ್ರಸ್ತ ಕುಟುಂಬಕ್ಕೆ ಕಾನೂನು ಸಹಾಯ ಒದಗಿಸಿದ್ದ ನಟ ಮಮ್ಮುಟ್ಟಿ

Update: 2023-04-05 09:32 GMT

ತಿರುವನಂತಪುರಂ: ಕೇರಳದಲ್ಲಿ (Kerala) ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಆದಿವಾಸಿ ಯುವಕ ಮಧು ಹತ್ಯೆ ಪ್ರಕರಣದಲ್ಲಿ ಕೊನೆಗೂ ನ್ಯಾಯಾಲಯ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಗುರುತಿಸಿದೆ.

ಈ ಪ್ರಕರಣ ಬೆಳಕಿಗೆ ಬಂದಾಗ ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ (Mammootty) ಅವರು ಮಧು ಕುಟುಂಬದ ಸಹಾಯಕ್ಕೆ ನಿಂತಿದ್ದರು. "ಗುಂಪು ನನ್ನ ಕಿರಿಯ ಸಹೋದರನನ್ನು ಸಾಯಿಸಿದೆ," ಎಂದು ದುಃಖ ವ್ಯಕ್ತಪಡಿಸಿದ್ದ ನಟ ತಮ್ಮ ವಕೀಲ ವಿ ನಂದಕುಮಾರ್‌ ಅವರನ್ನು ಮಧು ನಿವಾಸಕ್ಕೆ ಕಳುಹಿಸಿ ಅವರಿಗೆ ಕಾನೂನು ಸಹಾಯ ಒದಗಿಸಲು ಮುಂದಾಗಿದ್ದರು.

ನ್ಯಾಯಾಲಯದ ತೀರ್ಪಿನ ಬೆನ್ನಲ್ಲೇ ಮಮ್ಮುಟ್ಟಿ ಅವರ ಪಿಆರ್‌ಒ ರಾಬರ್ಟ್‌ ಕುರಿಯಾಕೋಸ್‌ ಅವರು  ಮಧು ಕುಟುಂಬಕ್ಕೆ ಮಮ್ಮುಟ್ಟಿ ಮಾಡಿದ ಸಹಾಯದ ಬಗ್ಗೆ ಫೇಸ್ಬುಕ್‌ ಪೋಸ್ಟ್‌ ಒಂದರಲ್ಲಿ ಬರೆದಿದ್ದಾರೆ.

"ಪ್ರಕರಣವನ್ನು ತಿರುಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಾಗ ಮಮ್ಮುಟ್ಟಿ ಒಬ್ಬ ವಕೀಲರನ್ನು ನೇಮಿಸಿ ಮಧು ಕುಟುಂಬಕ್ಕೆ ಕಾನೂನು ಸಹಾಯ ಒದಗಿಸಿದ್ದರು. ಇದು ಅವರ ಮಾನವೀಯ ಅಂತಃಕರಣದ ಉದಾಹರಣೆಯಾಗಿದೆ. ಈ ತೀರ್ಪು ಕೂಡ ಮಮ್ಮುಟ್ಟಿ ಅವರು ಸಮಯಕ್ಕೆ ಸರಿಯಾಗಿ ಒದಗಿಸಿದ ಸಹಾಯದ ಯಶಸ್ಸನ್ನು ತೋರಿಸಿದೆ," ಎಂದು ಅವರು ಬರೆದಿದ್ದಾರೆ.

ಈ ಕಾನೂನು ಹೋರಾಟದಲ್ಲಿ ಅವಿರತವಾಗಿ ತೊಡಗಿಸಿಕೊಂಡ ಮಧು ತಾಯಿ ಮತ್ತು ಸಹೋದರಿಯನ್ನೂ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಇನ್ನೊಂದೆಡೆ ಈ ಪ್ರಕರಣದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಕಳೆದ 13 ತಿಂಗಳುಗಳಿಂದ ಸೇವೆ ಸಲ್ಲಿಸಿದ್ದ ರಾಜೇಶ್‌ ಎಂ ಮೆನನ್‌ ಅವರು 147 ಬಾರಿ ಕೋರ್ಟಿಗೆ ಹಾಜರಾಗಿದ್ದರಲ್ಲದೆ ಹಲವಾರು ದಾಖಲೆಗಳನ್ನು ಸಂಗ್ರಹಿಸಲು ಬಹಳಷ್ಟು ಪ್ರಯಾಣ ಮಾಡಿದ್ದರು. ತಮ್ಮ ವೆಚ್ಚಗಳ ಬಿಲ್‌ ಆಗಿ ರೂ. 1.88 ಲಕ್ಷವನ್ನು ಅವರು ಸರ್ಕಾರಕ್ಕೆ ಸಲ್ಲಿಸಿದ್ದರೂ ರೂ. 47,000 ಮೊದಲ ಕಂತಿನಲ್ಲಿ ಪಾವತಿಸಿ ನಂತರ ಉಳಿದ ಮೊತ್ತ ನೀಡಲಾಗಿತ್ತು. ಆದರೆ ವೆಚ್ಚಗಳನ್ನು ಮರುಪಾವತಿಸುವ ಅವಕಾಶವಿಲ್ಲದೇ ಇರುವುದರಿಂದ ಶುಲ್ಕದ ರೂಪದಲ್ಲಿ ಈ ಹಣ ನೀಡಲಾಗಿತ್ತು. ತಾವು ಈ ಪ್ರಕರಣಕ್ಕಾಗಿ ವ್ಯಯಿಸಿದ ವೆಚ್ಚವನ್ನಷ್ಟೇ ತನಗೆ ನೀಡಲಾಗಿದೆ ಆದರೆ ತಾನು ಪಟ್ಟ ಶ್ರಮಕ್ಕೆ ಒಂದು ರೂಪಾಯಿ ಕೂಡ ಸಿಕ್ಕಿಲ್ಲ, ತಮ್ಮ ಫೀ ಮೊತ್ತವನ್ನೂ ನಿಗದಿಪಡಿಸಲಾಗಿಲ್ಲ ಎಂದು ರಾಜೇಶ್‌ ಹೇಳುತ್ತಾರೆ.

ಇದನ್ನೂ ಓದಿ: ನಮ್ಮ ಕಿಚ್ಚ ತಮ್ಮನ್ನು ಮಾರಿಕೊಳ್ಳುವವರಲ್ಲ: ಸುದೀಪ್ ಬಿಜೆಪಿ ಸೇರ್ಪಡೆ ವದಂತಿ ನಡುವೆ ಪ್ರಕಾಶ್ ರಾಜ್ ಟ್ವೀಟ್

Similar News