ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ಶೇ.100ರಷ್ಟು ದರ ವಿಧಿಸಿ 15 ಎಕರೆ ಗೋಮಾಳ ಮಂಜೂರು

Update: 2023-04-06 04:26 GMT

ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹತ್ತಾರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿರುವ ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ಮಾರುಕಟ್ಟೆ ಮೌಲ್ಯದ ಶೇ.100ರಷ್ಟು ದರವನ್ನು ವಿಧಿಸಿರುವುದು ತಾರತಮ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ ಜನಸೇವಾ ಟ್ರಸ್ಟ್‌ಗೆ ಮಾರುಕಟ್ಟೆ ಮೌಲ್ಯದ ಕೇವಲ ಶೇ.5ರಷ್ಟು ದರ ನಿಗದಿಗೊಳಿಸಿ 139.21 ಕೋಟಿ ರೂ. ಬೊಕ್ಕಸಕ್ಕೆ ನಷ್ಟಕ್ಕೆ ಕಾರಣವಾಗಿತ್ತು. ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ 15 ಎಕರೆ ಮಂಜೂರು ಮಾಡಿ 2023ರ ಮಾರ್ಚ್ 27ರಂದು ಹೊರಡಿಸಿರುವ ಆದೇಶದ ಪ್ರತಿಯು "the-file.in"ಗೆ ಲಭ್ಯವಾಗಿದೆ.

ಬೆಂಗಳೂರು: ಸಂಘಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಾರ್ಗಸೂಚಿ ಬೆಲೆಯ ಶೇ.5ರಷ್ಟು ದರ ನಿಗದಿಗೊಳಿಸಿ 35 ಎಕರೆ ಗೋಮಾಳವನ್ನು ಮಂಜೂರು ಮಾಡಿ ರುವ ರಾಜ್ಯ ಬಿಜೆಪಿ ಸರಕಾರವು ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ಕಲಬುರಗಿಯಲ್ಲಿ ಮಾರುಕಟ್ಟೆ ಮೌಲ್ಯದ ಶೇ.100ರಷ್ಟು ದರ ವಿಧಿಸಿ 15 ಎಕರೆ ಗೋಮಾಳವನ್ನು ಮಂಜೂರು ಮಾಡಿರುವುದು ಇದೀಗ ಬಹಿರಂಗವಾಗಿದೆ.

ಅಲ್ಲದೇ ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ಗೋಮಾಳ ಮಂಜೂರಾಗಿರುವ ಕಲಬುರಗಿಯ ಸಿಂದಗಿ (ಬಿ) ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಗೋಮಾಳ ಇರದೇ ಕೊರತೆ ಎದುರಿಸುತ್ತಿದೆ. ಆದರೂ 15 ಎಕರೆ ಗೋಮಾಳವನ್ನು ಮಂಜೂರು ಮಾಡಿ ಗೋವುಗಳಿಗೆ ಮೇವಿನ ತಾಣವನ್ನೇ ಕಸಿದುಕೊಂಡಂತಾಗಿದೆ.

ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್‌ಗೆ ಈಗಾಗಲೇ ಕಾನೂನು, ನಿಯಮಗಳನ್ನು ಉಲ್ಲಂಘಿಸಿ ಮಾರುಕಟ್ಟೆ ಮೌಲ್ಯದ ಶೇ.25 ಮತ್ತು ಪ್ರಚಲಿತ ಮಾರ್ಗಸೂಚಿಗಳ ದರಗಳನ್ವಯ ಗೋಮಾಳವನ್ನು ಮಂಜೂರು ಮಾಡಲಾಗಿತ್ತಾದರೂ ಆ ನಂತರ ಈ ಎರಡೂ ಸಂಸ್ಥೆಗಳು ಸರಕಾರಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ ಶೇ.5ರಷ್ಟು ದರವನ್ನು ಮರು ನಿಗದಿಗೊಳಿಸಿದೆ. ಕಲಬುರಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದ ಸರ್ವೇ ನಂಬರ್ 73/1 ರಲ್ಲಿನ 15 ಎಕರೆ ಗೋಮಾಳ ಜಮೀನ ನ್ನು ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ಮಂಜೂರು ಮಾಡುವ ಸಂಬಂಧ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವವನ್ನು ಪುರಸ್ಕರಿಸಿರುವ ಸರಕಾರವು 2023ರ ಮಾರ್ಚ್ 27ರಂದು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರ ಪ್ರಸ್ತಾವ ಪ್ರಕಾರ ಸಿಂದಗಿ (ಬಿ) ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಇರಬೇಕಿದ್ದ ಜಮೀನಿನ ಪೈಕಿ 33.72 ಎಕರೆ

ಜಮೀನು ಕೊರತೆ ಇದ್ದರೂ 15 ಎಕರೆಯನ್ನು ಮಂಜೂರು ಮಾಡಿ ಗೋವುಗಳಿಗಿದ್ದ ಮೇವಿನ ತಾಣವನ್ನೇ ಕಸಿದುಕೊಂಡಂತಾಗಿದೆ.

‘ಸರಕಾರಿ ಗಾಯರಾಣ ಸರ್ವೇ ನಂಬರ್ 73/1ರಲ್ಲಿ 15.00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ಅನ್ವಯ ಗಾಯರಾಣ ಶೀರ್ಷಿಕೆ

ಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1079ರ ನಿಯಮ 27ರಲ್ಲಿ ಸರಕಾರಕ್ಕೆ ಪ್ರದತ್ತವಾದ ಅಧಿಕಾರ ಚಲಾಯಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(3)(1)()(2) ಅನ್ವಯ ಪ್ರಚಲಿತ ಕೃಷಿಯೇತರ ಮಾರುಕಟ್ಟೆ ಮೌಲ್ಯದ ಶೆ.100ರಷ್ಟು ಹಾಗೂ ಇನ್ನಿತರ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ ಶೈಕ್ಷಣಿಕ ಉದ್ದೇಶಕ್ಕಾಗಿ ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ 15 ಎಕರೆ ಮಂಜೂರು ಮಾಡಿದೆ’ ಎಂದು ಆದೇಶದಲ್ಲಿ ವಿವರಿಸಿದೆ.

ರಾಜ್ಯ ಸರಕಾರವು ರಾಷ್ಟ್ರೋತ್ಥಾನ ಪರಿಷತ್ ಸೇರಿದಂತೆ ಖಾಸಗಿ ಸಂಘ, ಸಂಸ್ಥೆಗಳಿಗೆ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಹತ್ತಾರು ಎಕರೆ ಗೋಮಾಳವನ್ನು ಮಂಜೂರು ಮಾಡುತ್ತಿದೆ. ಈ ಕುರಿತು "the-file.in" ಮತ್ತು ‘ವಾರ್ತಾಭಾರತಿ’ ಸರಣಿ ರೂಪದಲ್ಲಿ 13 ವರದಿಗಳನ್ನು ಪ್ರಕಟಿಸಿತ್ತು.

ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದ ಪ್ರಾದೇಶಿಕ ಆಯುಕ್ತರು

ವಿಶೇಷವೆಂದರೆ ಕಲಬುರಗಿ ತಾಲೂಕಿನ ಸಿಂದಗಿ (ಬಿ) ಗ್ರಾಮದಲ್ಲಿ ಗಾಯರಾಣ ಜಮೀನು ಕಡಿಮೆ ಇದೆ. ‘ಸಿಂದಗಿ (ಬಿ) ಗ್ರಾಮದಲ್ಲಿ ಒಟ್ಟು 892 ಜಾನುವಾರುಗಳಿದ್ದು, ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ 267 ಎಕರೆ ಗೊಮಾಳ ಜಮೀನಿನ ಅವಶ್ಯಕತೆ ಇದೆ. ಆದರೆ ಈ ಗ್ರಾಮದಲ್ಲಿ 233.28 ಎಕರೆ ಗೋಮಾಳ ಜಮೀನು ಮಾತ್ರ ಲಭ್ಯವಿದೆ.

ಗಾಯರಾಣ ಜಮೀನು ಕಡಿಮೆ ಇರುವುದರಿಂದ ಗಾಯರಾಣ/ಗೋಮಾಳ ಲೆಕ್ಕ ಶೀರ್ಷಿಕೆಯಿಂದ ತಗ್ಗಿಸಿ ಮಂಜೂರು ಮಾಡಬೇಕಾದರೆ ಸರಕಾರಕ್ಕೆ ಮಾತ್ರ ಅಧಿಕಾರ ಇದೆ’ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

Similar News