×
Ad

ಅಕ್ರಮ ಮದ್ಯ ಮಾರಾಟ ವಿರುದ್ಧ ಕಠಿಣ ಕ್ರಮ: ಉಡುಪಿ ಜಿಲ್ಲಾಧಿಕಾರಿ ​ಕೂರ್ಮಾರಾವ್

Update: 2023-04-06 21:15 IST

ಉಡುಪಿ:  ಜಿಲ್ಲೆಯಲ್ಲಿ ಸುಗಮ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಸನ್ನದುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾ ಗುವುದು ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಎಚ್ಚರಿಕೆ ನೀಡಿದ್ದಾರೆ. 

ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ವೈನ್ ಮರ್ಚೆಂಟ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಹಾಗೂ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯಲ್‌ನ  ಅಧ್ಯಕ್ಷರು ಮತ್ತು  ಪದಾಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲಾ ಮದ್ಯ ಮಾರಾಟಗಾರರು ಪ್ರತಿ ದಿನದ ದಾಸ್ತಾನು ಮತ್ತು ಮಾರಾಟದ ವಿವರಗಳ ದಾಖಲೆಗಳನ್ನು ನಿರ್ವಹಿಸುವುದರ ಜೊತೆಗೆ ಅಬಕಾರಿ ಇಲಾಖೆಗೆ ನಿಗದಿತ ಮಾಹಿತಿಗಳನ್ನು ಒದಗಿಸಬೇಕು. ಇದರಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಮತ್ತು ನಿಗದಿತ ಸ್ಥಳವನ್ನು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಲ್ಲಿ ಅಂತಹ ಸನ್ನದುದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಎಲ್ಲಾ ಉದ್ದಿಮೆದಾರರು ತಮ್ಮ ಗೋಡೌನ್‌ಗಳನ್ನು ಇತರರಿಗೆ ಅನ್ಯ ಉದ್ದೇಶಕ್ಕೆ ನೀಡದಂತೆ ಮತ್ತು ಗೋಡೌನ್‌ಗಳಲ್ಲಿ ಯಾವುದೇ ಅಕ್ರಮ ದಾಸ್ತಾನುಗಳು ಶೇಖರವಾಗದಂತೆ ಎಚ್ಚರವಹಿಸಬೇಕು. ತಮ್ಮ ದೈನಂದಿನ ಸಗಟು ವ್ಯವಹಾರದ ಬಗ್ಗೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳುವಂತೆ ಹಾಗೂ ಅಗತ್ಯ ಬಿದ್ದಲ್ಲಿ ಪರಿಶೀಲನೆಗೆ ನೀಡುವಂತೆ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯಲ್‌ನ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.   

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಚುನಾವಣಾ ವೆಚ್ಚ ಮೇಲ್ವಿಚಾರಣೆ ಸಮಿತಿಯ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪ್ರಸನ್ನ ಭಕ್ತ ಉಪಸ್ಥಿತರಿದ್ದರು.

ಮಾಸ್ಟರ್ ಟ್ರೈನರ್ ಡಾ.ಅಶೋಕ್ ಕಾಮತ್, ಚುನಾವಣಾ ಆಯೋಗವು ಸೂಚಿಸಿರುವ ಮಾನದಂಡಗಳ ಕುರಿತಂತೆ ಮಾಹಿತಿ ನೀಡಿದರು. 

ಸಭೆಯಲ್ಲಿ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ರೂಪಾ, ಕೈಗಾರಿಕ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ ನಾಯಕ್, ಜಿಲ್ಲೆಯ ವೈನ್ ಮರ್ಚೆಂಟ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯಲ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Similar News