ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಆರ್ ಸಿಬಿಯನ್ನು ಕಂಗೆಡಿಸಿ ಎಲ್ಲರ ಗಮನ ಸೆಳೆದ ಕೋಲ್ಕತಾ ಸ್ಪಿನ್ನರ್ ಸುಯಶ್ ಶರ್ಮಾ
ಕೋಲ್ಕತಾ: ಕೋಲ್ಕತ್ತಾ ನೈಟ್ ರೈಡರ್ಸ್ ಗುರುವಾರ ರಾತ್ರಿ ನಡೆದ ಐಪಿಎಲ್ 2023 ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 81 ರನ್‌ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೆಕೆಆರ್ ತಂಡ ಶಾರ್ದೂಲ್ ಠಾಕೂರ್ (68 ರನ್ ) ಹಾಗೂ ರಿಂಕು ಸಿಂಗ್ (46) ಉತ್ತಮ ಜೊತೆಯಾಟದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ನಂತರ, ವರುಣ್ ಚಕ್ರವರ್ತಿ ನಾಲ್ಕು ವಿಕೆಟ್ ಕಬಳಿಸಿ ಆರ್ ಸಿಬಿ ತಂಡವನ್ನು 123 ಕ್ಕೆ ಆಲೌಟ್ ಮಾಡಿದರು.
ಚಕ್ರವರ್ತಿ ಅವರನ್ನು ಹೊರತುಪಡಿಸಿ, ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಕೊಡುಗೆಯನ್ನು ನೀಡಿದವರು ಸುಯಶ್ ಶರ್ಮಾ. ತಾನಾಡಿದ ಚೊಚ್ಚಲ ಪಂದ್ಯದಲ್ಲಿಯೇ ಸುಯಶ್ ಅವರು ಮೂರು ವಿಕೆಟ್‌ಗಳನ್ನು ಉರುಳಿಸಿದರು. ಆರ್ ಸಿಬಿಯ ಬ್ಯಾಟಿಂಗ್ ಸರದಿಯ ಬೆನ್ನೆಲುಬು ಮುರಿದರು.
ಉಭಯ ತಂಡಗಳ ನಡುವಿನ ಪಂದ್ಯ ಮುಗಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳೆಲ್ಲ ಕೆಕೆಆರ್‌ನ 19ರ ಹರೆಯದ ಸ್ಪಿನ್ನರ್ ಬಗ್ಗೆ ತಿಳಿದುಕೊಳ್ಳಲು ಕಾತರರಾಗಿದ್ದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ ದಿಲ್ಲಿಯ ಯುವಕ ಸುಯಶ್ ಶರ್ಮಾ ಅವರನ್ನು 20 ಲಕ್ಷ ರೂ.ಗೆ ಕೆಕೆಆರ್ ಖರೀದಿಸಿತ್ತು., ಸ್ಪಿನ್ನರ್ ಅನ್ನು RCB ವಿರುದ್ಧ ಆಡುವ 11ರ ಬಳಗದಲ್ಲಿ ಹೆಸರಿಸಲಾಗಿಲ್ಲ. ವೆಂಕಟೇಶ್ ಅಯ್ಯರ್ ಅವರ ಬದಲಿಗೆ ಇಂಪ್ಯಾಕ್ಟ್ ಆಟಗಾರನಾಗಿ ಸುಯಶ್ ರನ್ನು ಕಣಕ್ಕಿಳಿಸಲಾಗಿತ್ತು.
ಸುಯಶ್ ದಿಲ್ಲಿಯ ಅಂಡರ್-20 ತಂಡಕ್ಕಾಗಿ ಆಡುತ್ತಾರೆ. ಆದರೆ ಅವರು ಐಪಿಎಲ್ ಪಂದ್ಯಕ್ಕಿಂತ ಮೊದಲು ಯಾವುದೇ ಲಿಸ್ಟ್ ಎ, ಎಫ್ ಸಿ ಅಥವಾ ಟಿ-20 ಪಂದ್ಯಗಳನ್ನು ಆಡಿಲ್ಲ.
ಪಂದ್ಯದ ನಂತರ ಸುಯಶ್ ಬಗ್ಗೆ ಮಾತನಾಡಿದ ಕೆಕೆಆರ್ ನಾಯಕ ನಿತೀಶ್ ರಾಣಾ, "ಸುಯಶ್ ಆತ್ಮವಿಶ್ವಾಸದ ಯುವಕ ಹಾಗೂ ಅವರು ತಮ್ಮ ಮೇಲೆ ನಂಬಿಕೆ ಹೊಂದಿದ್ದಾರೆ. ಅವರು ತಮಗೆ ಲಭಿಸಿದ ಅವಕಾಶವನ್ನು ಬಳಸಿಕೊಂಡಿದ್ದಾರೆ ಹಾಗೂ ಅವರು ಆ ರೀತಿ ಬೌಲ್ ಮಾಡುವುದನ್ನು ನೋಡುವುದು ಅದ್ಭುತವಾಗಿದೆ" ಎಂದು ಹೇಳಿದರು.
"ವರುಣ್ ಹಾಗೂ ಸನ್ನಿ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದರು. ಹೊಸ ಬೌಲರ್ ಸುಯಶ್, ವರುಣ್ ಗೆ ಬೆಂಬಲ ನೀಡಿದರು. ನಾವು ಸುಯಶ್ ರನ್ನು ಟ್ರಯಲ್ ಮ್ಯಾಚ್‌ಗಳಲ್ಲಿ ನೋಡಿದ್ದೇವೆ ಮತ್ತು ಅವರು ಬೌಲಿಂಗ್ ಮಾಡುವ ವಿಧಾನದಿಂದ ತುಂಬಾ ಸಂತೋಷಪಟ್ಟಿದ್ದೇವೆ. ಅವರು ಗಾಳಿಯ ಮೂಲಕ ವೇಗವಾಗಿ, ಎಸೆಯುವ ಚೆಂಡನ್ನು ಎದುರಿಸುವುದು ಕಷ್ಟಕರ. ಅವರು ಅನನುಭವಿ, ಆದರೆ ಉತ್ತಮ ಬೌಲರ್'' ಎಂದು ಕೆಕೆಆರ್ ಕೋಚ್ ಚಂದ್ರಕಾಂತ್ ಪಂಡಿತ್ ಹೇಳಿದ್ದಾರೆ.