×
Ad

ಭಾರತದಲ್ಲಿ ರಸ್ತೆ ಸುಂಕದ ಚರಿತ್ರೆ

ಟೋಲ್ಗತೆ ನೀಳ್ಗತೆ

Update: 2023-04-08 10:20 IST

►► ಸರಣಿ - 2

ಭಾರತದಾದ್ಯಂತ ಟೋಲ್ ಗೇಟ್‌ಗಳು ಮತ್ತು ಅಲ್ಲಿನ ಲೂಟಿಗಳು ಸದ್ದು ಮಾಡುತ್ತಿವೆ. ಮಂಗಳೂರಿನಲ್ಲಿ ತಿಂಗಳುಗಳ ತನಕ ನಡೆದ ಸುರತ್ಕಲ್ ಅಕ್ರಮ ಟೋಲ್‌ಗೇಟ್ ವಿರುದ್ಧ ಹೋರಾಟ, ಮೈಸೂರಿನಲ್ಲಿ ಮನಸೋಇಚ್ಛೆ ಟೋಲ್ ದರದ ವಿರುದ್ಧ ಹೋರಾಟ ಹೀಗೆ ಜನಸಾಮಾನ್ಯರು ನಿಧಾನವಾಗಿ ಟೋಲ್ ಲೂಟಿಯ ಬಗ್ಗೆ ಎಚ್ಚೆತ್ತುಕೊಳ್ಳತೊಡಗಿದ್ದಾರೆ. ಆದರೆ ಹೆಚ್ಚಿನವರಿಗೆ ಯಾಕೆ ಹೀಗೆ ರಸ್ತೆ ಸುಂಕ ಹಠಾತ್ತಾಗಿ ಮೈಮೇಲೆ ಬಂದು ಎರಗಿದೆ ಎಂಬುದು ಅರ್ಥವಾಗಿಲ್ಲ. ಈ ಮಹಾಖಾಸಗೀಕರಣ ಹಲವು ಚುಕ್ಕಿಗಳ ಚಿತ್ರ. ಪ್ರಭುತ್ವ ಅಲ್ಲಲ್ಲಿ ಹಾಕುತ್ತಾ ಬಂದಿರುವ ಹಲವು ಚುಕ್ಕಿಗಳನ್ನು ಜೋಡಿಸಿದಾಗ ಪೂರ್ಣ ಚಿತ್ರ ಅರ್ಥಾತ್ ಮಹಾಖಾಸಗೀಕರಣದ ವಿಶ್ವರೂಪ ಕಾಣಿಸುವ ಕಥೆ.

ಭಾರತದಲ್ಲಿ ರಸ್ತೆ ಸುಂಕ ಯಾವಾಗ ಶುರು ವಾಯಿತು ಎಂಬ ಕಲ್ಪನೆ ಇದೆಯೆ?

ರಾಷ್ಟ್ರೀಯ ಹೆದ್ದಾರಿ ಕಾಯ್ದೆ1956ರಲ್ಲಿ ಕೆಲವು ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳೆಂದು ಘೋಷಿಸಲು, ಅವುಗಳನ್ನು ಕೇಂದ್ರ ಸರಕಾರದ ಸುಪರ್ದಿಗೆ ಕೊಡಲು ಕಾನೂನು ರಚಿಸಲಾಗಿತ್ತು. ಆ ಕಾನೂನಿನ ಸೆಕ್ಷನ್ ಏಳರಲ್ಲಿ, ಅಂದಿನ ಸನ್ನಿವೇಶಕ್ಕೆ ತಕ್ಕಂತೆ, ಸೇತುವೆಗಳಿಲ್ಲದಿರುವಲ್ಲಿ, ಫೆರಿಗಳ ಮೂಲಕ ವಾಹನವನ್ನು ನದಿ ದಾಟಿಸಲು, ತಾತ್ಕಾಲಿಕ ಸೇತುವೆಗಳಿಗೆ ಮತ್ತು ಹೆದ್ದಾರಿಯಲ್ಲಿರುವ ಸುರಂಗಮಾರ್ಗಗಳಿಗೆ ಕೇಂದ್ರ ಸರಕಾರವು ಹೆಚ್ಚುವರಿ ಸುಂಕ ವಿಧಿಸಬಹುದು ಎಂದು ಹೇಳಲಾಗಿದೆ. ದೇಶವು ಅಭಿವೃದ್ಧಿಯಾಗುತ್ತಾ ಬಂದಂತೆ, 1977ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು Act 30 oಜಿ 1977), ಅದರಲ್ಲಿ 25 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಖರ್ಚು ಮಾಡಿ, 1976ರ ಎಪ್ರಿಲ್ ತಿಂಗಳಿನಿಂದ ಈಚೆ ನಿರ್ಮಾಣ ಮಾಡಿದ ಯಾವುದೇ ಸೇತುವೆಗಳಿಗೆ ಸುಂಕ ವಿಧಿಸಬಹುದು ಎಂದು ತೀರ್ಮಾನವಾಯಿತು. ಅದಾದ ಬಳಿಕ 1993ರಲ್ಲಿ ಈ ಕಾಯ್ದೆಗೆ ಮತ್ತೊಂದು ತಿದ್ದುಪಡಿ ಮಾಡಿ, Act 1 oಜಿ 1993) ಯಾವುದೇ ರಾಷ್ಟ್ರೀಯ ಹೆದ್ದಾರಿಗಳ ನಿರ್ದಿಷ್ಟ ಭಾಗಗಳ ಬಳಕೆಗೆ ಸುಂಕ ವಿಧಿಸಬಹುದು ಎಂದು ತೀರ್ಮಾನಿಸಲಾಯಿತು.

ಮೇಲೆ ಹೇಳಿದ್ದು ಶುರುವಾತಿನ ಕಾನೂನು ಬದಲಾವಣೆಗಳಾದರೆ, 90ರ ದಶಕದ ಆರ್ಥಿಕ ಅನಿವಾರ್ಯತೆಗಳು ಮತ್ತು ರಾಜಕೀಯ ಸ್ಥಿತ್ಯಂತರಗಳು ಭಾರತದಲ್ಲಿ ಉದಾರೀಕರಣದ ಗೇಟನ್ನು ತೆರೆದದ್ದು ಮತ್ತು ಭಾರತವು ಆರ್ಥಿಕ ಜಾಗತೀಕರಣದ ಭಾಗವಾಗುವತ್ತ ಸಾಗಿದ್ದು ಮತ್ತೊಂದೇ ಕಥೆ. 1985-89ರ ಅವಧಿಯಲ್ಲಿ ದೇಶದ ಪ್ರಧಾನಮಂತ್ರಿಗಳಾಗಿದ್ದ ರಾಜೀವ್ ಗಾಂಧಿ ಅವರು ಕಂಪ್ಯೂಟರ್ ಕ್ರಾಂತಿ, ಟೆಲಿಕಾಂ ಕ್ರಾಂತಿಗಳ ಹರಿಕಾರರಾಗಿ ಉದಾರೀಕರಣದ ಕನಸುಗಳನ್ನು ಭಾರತದಲ್ಲಿ ಮೊದಲ ಬಾರಿಗೆ ಬಿತ್ತಿದ್ದರು. ಅವರ ಹತ್ಯೆಯ ಬಳಿಕ ವಿ.ಪಿ. ಸಿಂಗ್ ಮತ್ತು ಚಂದ್ರಶೇಖರ್ ಅವರ ಪ್ರಧಾನಮಂತ್ರಿತ್ವ ಕಾಲದಲ್ಲಿ ದೇಶ ಬಲುದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು ಮತ್ತು ದೇಶದ ಮೀಸಲು ಚಿನ್ನವನ್ನು ಅಡವಿಟ್ಟು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಎದುರು ಸಹಾಯಕ್ಕಾಗಿ ಕೈಚಾಚಬೇಕಾಯಿತು. ಆ ಹಂತದಲ್ಲಿ, (1991-96ರ ನಡುವೆ) ದೇಶದ ಚುಕ್ಕಾಣಿ ಹಿಡಿದ ಪಿ.ವಿ. ನರಸಿಂಹ ರಾವ್ ಅವರು ಪ್ರಧಾನಮಂತ್ರಿಗಳಾಗಿ ಮತ್ತು ಡಾ. ಮನಮೋಹನ್ ಸಿಂಗ್ ಅವರು ದೇಶದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಅಲ್ಲಿಯ ತನಕ ‘‘ಕಂಟ್ರೋಲ್ ರಾಜ್’’ ಆಗಿದ್ದ ಭಾರತವನ್ನು ಉದಾರೀಕರಣಕ್ಕೆ ತೆರೆದಿಟ್ಟರು. ಇದರ ಬೆನ್ನಿಗೇ ದೇಶದಲ್ಲಿ ಧರ್ಮ ರಾಜಕೀಯ ವಿಕೋಪಕ್ಕೆ ಹೋಗಿ ಮತ್ತೆ ಅಸ್ಥಿರತೆ ಮೂಡಿತು. ಅಟಲ್ ಬಿಹಾರಿ ವಾಜಪೇಯಿ, ದೇವೇಗೌಡ ಮತ್ತು ಇಂದರ್ ಕುಮಾರ್ ಗುಜ್ರಾಲ್ ಅವರೂ ಅಲ್ಪಾವಧಿಗಳಿಗೆ ದೇಶದ ಚುಕ್ಕಾಣಿ ಹಿಡಿಯಬೇಕಾಯಿತು. ಇವರೆಲ್ಲರೂ ರಾವ್-ಡಾ.ಸಿಂಗ್ ಜೋಡಿ ಆರಂಭಿಸಿದ್ದ ಉದಾರೀಕರಣದ ಸೂತ್ರವನ್ನು ತಮ್ಮ ಯಥಾನುಶಕ್ತಿ ಮುಂದುವರಿಸಿಕೊಂಡೇ ಬಂದರು.

ಈ ಪುಟ್ಟ ಚರಿತ್ರೆ ಇಲ್ಲಿ ಯಾಕೆ ಬಂತೆಂದರೆ, ದೇಶದ ಮೂಲಸೌಕರ್ಯ ರಂಗಗಳಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಮಾಡಿಕೊಡುವುದು ಉದಾರೀಕರಣ ಪ್ರಕ್ರಿಯೆಯ ಭಾಗವಾಗಿತ್ತು. ಹೀಗೆ ರಾಷ್ಟ್ರೀಯ ಹೆದ್ದಾರಿಗಳಿಗೆ ಖಾಸಗಿ ಹೂಡಿಕೆ ಮಾಡಲು ಮೂಲ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಆ ಕಾರಣಕ್ಕಾಗಿ, 1995ರಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಸೆಕ್ಷನ್ 8ನ್ನು ಕಿತ್ತುಹಾಕಿ, ಸೆಕ್ಷನ್ 8ಎ ಅಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿಗಳನ್ನು ಇಡಿಯಾಗಿ ಅಥವಾ ಭಾಗಗಳಲ್ಲಿ ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಭಾರತ ಸರಕಾರವು ಯಾವುದೇ ವ್ಯಕ್ತಿಯ ಜೊತೆ ಒಪ್ಪಂದ ಮಾಡಿಕೊಳ್ಳಬಹುದು ಮತ್ತು ಅಂತಹ ವ್ಯಕ್ತಿಗಳು, ಭಾರತ ಸರಕಾರವು ನಿಗದಿಪಡಿಸಿದ ದರದಲ್ಲಿ ತಮ್ಮ ಸೇವೆಗಾಗಿ ಫೀಸು (ಸುಂಕ) ಸಂಗ್ರಹಿಸಬಹುದು ಎಂದು ತಿದ್ದುಪಡಿ ಮಾಡಲಾಯಿತು. ಭಾರತ ಸರಕಾರವು ಈ ಸುಂಕವನ್ನು ನಿಗದಿಪಡಿಸುವಾಗ, ರಸ್ತೆ ನಿರ್ಮಾಣದ ವೆಚ್ಚ, ಅದರ ನಿರ್ವಹಣೆ, ಕಾರ್ಯಾಚರಣೆ, ಹೂಡಿದ ಬಂಡವಾಳದ ಮೇಲಿನ ಬಡ್ಡಿ ಹೊರೆ, ಸಕಾರಣ ಲಾಭಾಂಶ, ಆ ರಸ್ತೆಯಲ್ಲಿ ಸಂಚರಿಸುವ ವಾಹನ ದಟ್ಟಣೆ ಮತ್ತು ಒಪ್ಪಂದದ ಅವಧಿಗಳನ್ನು ಗಮನದಲ್ಲಿ ಇರಿಸಿಕೊಂಡು ನಿಗದಿ ಮಾಡಬೇಕು ಎಂದು ಕಾನೂನು ಹೇಳಿತ್ತು.

ಕಾನೂನು ಜಾರಿಗೆ ಬಂತಾದರೂ, ರಾಜಕೀಯ ಅಸ್ಥಿರತೆ ಮತ್ತಿತರ ಕಾರಣಗಳಿಂದಾಗಿ ಸರಕಾರಗಳು ಈ ಬಗ್ಗೆ ದೊಡ್ಡ ಆಸಕ್ತಿ ತೋರಿಸಿರಲಿಲ್ಲ. ಒಂದು ಪ್ರಯೋಗವಾಗಿ ದೇಶದಲ್ಲಿ ಮೊತ್ತ ಮೊದಲ ಟೋಲ್ ರಸ್ತೆ ನಿರ್ಮಾಣ ಆದದ್ದು 1995ರಲ್ಲಿ, ಮಧ್ಯಪ್ರದೇಶದಲ್ಲಿ. ಅದು ಅಲ್ಲಿನ ಇಂದೋರ್‌ನಿಂದ ಪಿತಾಂಪುರ ಕೈಗಾರಿಕಾ ವಸಾಹತುವಿಗೆ ತೆರಳುವ ಕೇವಲ 12ಕಿ.ಮೀ.ಗಳ ಉದ್ದದ ರಸ್ತೆ. ಇದಕ್ಕೆ ಏಳು ಕೋಟಿ ರೂ. ಅಗತ್ಯ ಇದೆಯೆಂದು ಅಂದಾಜು ಮಾಡಲಾಗಿತ್ತು. ಇದನ್ನು ಅಲ್ಲಿನ ಅರೆಸರಕಾರಿ ಸಂಸ್ಥೆಯಾದ ಮಧ್ಯಪ್ರದೇಶ ಔದ್ಯೋಗಿಕ ವಿಕಾಸ ನಿಗಮವು ಮುಂಬೈಯ Iಐ&ಈS ಸಂಸ್ಥೆಯಿಂದ ಆರ್ಥಿಕ ಸಹಾಯ ಪಡೆದು ನಿರ್ಮಾಣ ಮಾಡಿತು ಮತ್ತು ಅಲ್ಲಿ ಹಾದು ಹೋಗುವ ವಾಹನಗಳಿಗೆ ಟೋಲ್ ವಿಧಿಸಿತು. ಹೆಚ್ಚಿನಂಶ ಇದು, ದೇಶದ ಮೊದಲ ಟೋಲ್ ರಸ್ತೆ.

Similar News