ಮಹಿಳಾ ಮತದಾರರಲ್ಲಿ ಭಾರೀ ಏರಿಕೆ; ರಾಜಕೀಯ ಪ್ರಾತಿನಿಧ್ಯ ತೀವ್ರ ಕುಸಿತ
ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೂ, ವಿವಿಧ ಪಕ್ಷಗಳಿಂದ ಸ್ಪರ್ಧಿಸಿರುವ ಮಹಿಳೆಯರ ಸಂಖ್ಯೆ ಮಹಿಳಾ ಮತದಾರರ ಸಂಖ್ಯೆಯಲ್ಲಿನ ಏರಿಕೆಗೆ ಅನುಗುಣವಾಗಿಲ್ಲ. ಮಹಿಳಾ ಮತದಾರರ ಸಂಖ್ಯೆಗೆ ಹೋಲಿಸಿಕೊಂಡರೆ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಕಣಕ್ಕಿಳಿಸುತ್ತಿರುವ ಮಹಿಳೆಯರ ಪ್ರಮಾಣ ತೀರಾ ಕಡಿಮೆ. ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ಎಂಬುದೆಲ್ಲ ಮಾತಿನಲ್ಲೇ ಉಳಿದಿದೆ.
ಮಹಿಳಾ ಮತದಾರರು ಹೆಚ್ಚುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಅವರ ಪ್ರಾತಿನಿಧ್ಯ ಮಾತ್ರ ತೀರಾ ಕಡಿಮೆಯಾಗುತ್ತಲೇ ಇದೆ.
ಕರ್ನಾಟಕದಲ್ಲೂ ಈ ಸ್ಥಿತಿ ಬೇರೆಯಿಲ್ಲ. ಈಗಾಗಲೇ ರಾಜ್ಯದ ಪ್ರಮುಖ ವಿಪಕ್ಷ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 166 ಅಭ್ಯರ್ಥಿಗಳನ್ನು ಅದು ಅಂತಿಮಗೊಳಿಸಿದೆ. ಆದರೆ ಅದರಲ್ಲಿರುವ ಒಟ್ಟು ಮಹಿಳಾ ಅಭ್ಯರ್ಥಿಗಳು ಕೇವಲ 6 ಮಂದಿ. ಇನ್ನುಳಿದ 58 ಅಭ್ಯರ್ಥಿಗಳ ಪಟ್ಟಿಯಲ್ಲಿ ಅದೆಷ್ಟು ಮಹಿಳೆಯರಿಗೆ ಸ್ಥಾನ ಸಿಗುತ್ತದೆಯೊ ನೋಡಬೇಕು. ಬಿಜೆಪಿ ಪಟ್ಟಿ ಪ್ರಕಟವಾಗಿಲ್ಲ. ಆದರೆ ಅಲ್ಲಿಯೂ ಗಮನಾರ್ಹ ಪ್ರಾತಿನಿಧ್ಯ ಮಹಿಳೆಯರಿಗೆ ಸಿಗುವುದು ಅನುಮಾನವೇ.
1962ರಲ್ಲಿ 55.13 ಲಕ್ಷ ಮಾತ್ರ ಇದ್ದ ಮಹಿಳಾ ಮತದಾರರ ಸಂಖ್ಯೆ ಈ ವರ್ಷ 2.5 ಕೋಟಿ ತಲುಪಿದೆ. ಕೆಲ ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಪುರುಷರಿಗಿಂತ ಹೆಚ್ಚಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಮಹಿಳಾ ಮತದಾರರ ಸಂಖ್ಯೆ ಏರಿಕೆಯಾಗಿದ್ದರೂ, ರಾಜಕೀಯ ಪ್ರಾತಿನಿಧ್ಯದ ವಿಚಾರದಲ್ಲಿ ಅಷ್ಟೇ ಹಿಂದಿರುವುದೇಕೆ?
ರಾಜ್ಯ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಸ್ಥಿತಿಯೇನು ಎಂದು ನೋಡಿಕೊಂಡರೆ, ಅದು 1967ರಿಂದ ಒಂದು ಅಂಕೆ ದಾಟಿಲ್ಲ. 1989ರಲ್ಲಿ ಮಾತ್ರ 10 ಮಹಿಳೆಯರು ಚುನಾಯಿತರಾಗಿದ್ದರು.
ಮೊದಲ ಎರಡು ಚುನಾವಣೆಗಳಲ್ಲಿ ಮಾತ್ರವೇ ಮಹಿಳಾ ಪ್ರಾತಿನಿಧ್ಯ ಉತ್ತಮ ಮಟ್ಟದಲ್ಲಿತ್ತು. 1957 ಮತ್ತು 1962ರಲ್ಲಿನ ಮೊದಲ ಎರಡು ಚುನಾವಣೆಗಳಲ್ಲಿ ಕ್ರಮವಾಗಿ 13 ಮತ್ತು 18 ಮಹಿಳೆಯರು ವಿಧಾನಸಭೆ ಪ್ರವೇಶಿಸಿದ್ದರು.
ಇಲ್ಲಿ ಇನ್ನೂ ಒಂದು ವಿಚಾರ ಗಮನಿಸಬೇಕಾಗಿರುವುದಿದೆ.
1967ರಿಂದ 2018ರವರೆಗೆ ಒಟ್ಟು 1,112 ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ ಗೆದ್ದಿರುವವರು ಎಷ್ಟು ಎಂದು ನೋಡಿಕೊಂಡರೆ ಅದು ಕೂಡ ನಿರಾಶಾದಾಯಕ. ಗೆದ್ದಿರುವ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ. 8.9ರಷ್ಟು ಮಾತ್ರ. ಇವರಲ್ಲಿ ಕಾಂಗ್ರೆಸ್‌ನಿಂದ ಗೆದ್ದವರೇ ಹೆಚ್ಚು. ಈವರೆಗೆ 70 ಮಹಿಳೆಯರು ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಇನ್ನು ಜನತಾ ಪಕ್ಷ, ಜನತಾ ದಳ, ಜೆಡಿಎಸ್, ಜೆಡಿಯು ಹೀಗೆ ಜನತಾ ಪರಿವಾರದಿಂದ ಗೆದ್ದವರು 17 ಮಹಿಳೆಯರು. ಬಿಜೆಪಿಯಿಂದ ಗೆದ್ದವರು 10 ಮಹಿಳೆಯರು. ಪ್ರಸಕ್ತ ವಿಧಾನಸಭೆಯಲ್ಲಿ ಎಂಟು ಶಾಸಕಿಯರು ಮಾತ್ರ ಇದ್ದಾರೆ. ಅವರಲ್ಲಿ ನಾಲ್ವರು ಕಾಂಗ್ರೆಸ್ ಶಾಸಕಿಯರಾದರೆ, ಮೂವರು ಬಿಜೆಪಿ ಮತ್ತು ಒಬ್ಬರು ಜೆಡಿಎಸ್ ಪ್ರತಿನಿಧಿ.
ಚುನಾವಣೆಯಲ್ಲಿ ಸ್ಪರ್ಧಿಸಬಯಸುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೂ, ವಿವಿಧ ಪಕ್ಷಗಳಿಂದ ಸ್ಪರ್ಧಿಸಿರುವ ಮಹಿಳೆಯರ ಸಂಖ್ಯೆ ಮಹಿಳಾ ಮತದಾರರ ಸಂಖ್ಯೆಯಲ್ಲಿನ ಏರಿಕೆಗೆ ಅನುಗುಣವಾಗಿಲ್ಲ. ಮಹಿಳಾ ಮತದಾರರ ಸಂಖ್ಯೆಗೆ ಹೋಲಿಸಿಕೊಂಡರೆ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಕಣಕ್ಕಿಳಿಸುತ್ತಿರುವ ಮಹಿಳೆಯರ ಪ್ರಮಾಣ ತೀರಾ ಕಡಿಮೆ. ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ಎಂಬುದೆಲ್ಲ ಬಹಳ ಸಲ ಮಾತಿನಲ್ಲೇ ಉಳಿದಿದೆ.
ಕಳೆದ ಬಾರಿಯ ಅಂದರೆ 2018ರ ಚುನಾವಣೆಯಲ್ಲಿ, 219 ಮಹಿಳೆಯರು ಚುನಾವಣಾ ಕಣದಲ್ಲಿದ್ದರು. ಆದರೆ ಪ್ರಮುಖ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದಿದ್ದವರು 36 ಮಹಿಳೆಯರು ಮಾತ್ರ. ಕಾಂಗ್ರೆಸ್ 15 ಮಹಿಳೆಯರನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ 5 ಮತ್ತು 6 ಮಹಿಳೆಯರಿಗೆ ಟಿಕೆಟ್ ನೀಡಿದ್ದವು. ಕಣದಲ್ಲಿದ್ದ ಉಳಿದವರೆಲ್ಲ ಸಣ್ಣ ಪಕ್ಷಗಳ ಇಲ್ಲವೇ ಸ್ವತಂತ್ರ ಅಭ್ಯರ್ಥಿಗಳಾಗಿದ್ದರು. ಈ ಸಲ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 6 ಮಹಿಳೆಯರಿಗೆ ಟಿಕೆಟ್ ಕೊಟ್ಟಿದೆ. 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಒಂದೇ ಒಂದು ಮಹಿಳೆಗೆ ಟಿಕೆಟ್ ಸಿಕ್ಕಿಲ್ಲ.
2013ರಲ್ಲಿಯೂ ಚುನಾವಣಾ ಕಣದಲ್ಲಿದ್ದ ಒಟ್ಟು ಮಹಿಳಾ ಅಭ್ಯರ್ಥಿಗಳ ಸಂಖ್ಯೆ 170. ಈ ಪ್ರಮಾಣ ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳ ಸುಮಾರು ಶೇ. 6ರಷ್ಟು ಮಾತ್ರ. ಅವರಲ್ಲಿ 10 ಮಹಿಳೆಯರು ಮಾತ್ರವೇ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ 7 ಮಂದಿ ಕಣದಲ್ಲಿದ್ದರು. ಜೆಡಿಎಸ್ 6 ಮಹಿಳೆಯರಿಗೆ ಮಾತ್ರವೇ ಟಿಕೆಟ್ ನೀಡಿತ್ತು. ಉಳಿದವರು ಇತರ ಸಣ್ಣ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳಾಗಿದ್ದರು.
ಗೆಲ್ಲುವುದೇ ಹೇಗೆ ಮಾನದಂಡವಾಗಿದೆ ಎಂಬುದು ಮತ್ತು ಆ ಕಾರಣದಿಂದಾಗಿಯೇ ರಾಜಕೀಯ ಪಕ್ಷಗಳು ಮಹಿಳೆಯರನ್ನು ಕಣಕ್ಕಿಳಿಸುವಲ್ಲಿ ಹಿಂದೇಟು ಹಾಕುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಎಂಬ ರಾಜಕೀಯ ಪಕ್ಷಗಳ ಧೋರಣೆ, ಮಹಿಳಾ ಆಕಾಂಕ್ಷಿಗಳನ್ನು ಕಡೆಗಣಿಸುತ್ತಿದೆ.
ಚುನಾವಣೆ ಎಂಬುದು ಹಣ ಮತ್ತು ತೋಳ್ಬಲದ ಆಟವಾಗಿ ಮಾರ್ಪಟ್ಟಿರುವ ಸಮಯದಲ್ಲಿ ಪಕ್ಷಗಳು ಕೇವಲ ನಂಬರ್ ಗೇಮ್‌ಗಳ ಬಗ್ಗೆ ತಲೆಕೆಡಿಸಿಕೊಂಡಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಗೆಲ್ಲಬೇಕು ಮತ್ತು ಆ ಮೂಲಕ ಪಕ್ಷದ ಭವಿಷ್ಯ ಕಾಪಾಡಿಕೊಳ್ಳಬೇಕು ಎಂಬ ರಾಜಕೀಯ ಧಾವಂತದಲ್ಲಿ ತತ್ವಗಳು ಗೌಣವಾಗತೊಡಗಿರುವುದನ್ನೂ ಕಾಣಬಹುದು. ಯಾವ ಪಕ್ಷವೂ ಈ ದಿನಗಳಲ್ಲಿ ಸಾಮಾಜಿಕ ಹಿತ ಕಾಯುವ ತತ್ವಕ್ಕೆ ಅಂಟಿಕೊಂಡಿಲ್ಲ ಎಂಬುದು ಸ್ಪಷ್ಟ.
ಸ್ಥಿತಿ ಹೀಗಿರುವಾಗ ಮಹಿಳೆಯರಿಗೆ ಶೇ. 33ರ ಮೀಸಲಾತಿ ಮಾತು ದೂರವೇ ಉಳಿಯಿತು. ಕಡೇ ಪಕ್ಷ ಶೇ. 10ರಷ್ಟು ಸ್ಥಾನಗಳನ್ನಾದರೂ ಮಹಿಳೆಯರಿಗೆ ಮೀಸಲಿಡುವ ನಿಟ್ಟಿನಲ್ಲಿ ಪಕ್ಷಗಳು ಸಾಮಾನ್ಯ ಧೋರಣೆಯೊಂದನ್ನು ತಳೆಯಬೇಕಿದೆ ಎಂದು ಮಹಿಳಾ ಮೀಸಲಾತಿಯ ಅಗತ್ಯವನ್ನು ಪ್ರತಿಪಾದಿಸುವವರು ಹೇಳುತ್ತಾರೆ. ಆದರೆ ಪಕ್ಷಗಳು ಅಂಥ ಅಭಿಪ್ರಾಯಗಳನ್ನು ಪರಿಗಣಿಸುತ್ತವೆಯೇ?
ಇನ್ನೊಂದು ವಾದವೂ ಇದೆ. ಗೆಲ್ಲುವ ಮಾನದಂಡವೆಂದೇ ಇಟ್ಟುಕೊಂಡರೂ ರಾಜಕೀಯ ಪಕ್ಷಗಳಿಗೆ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಹೆಚ್ಚು ಆಸಕ್ತಿಯಾಗಲೀ ಕಾಳಜಿಯಾಗಲೀ ಇಲ್ಲ. ಗೆಲ್ಲುವ ಮಹಿಳಾ ಅಭ್ಯರ್ಥಿಗಳೇ ಸಾಕಷ್ಟು ಸಂಖ್ಯೆಯಲ್ಲಿದ್ದರೂ ರಾಜಕೀಯ ಪಕ್ಷಗಳ ಅನಾಸಕ್ತಿಯ ಕಾರಣದಿಂದಾಗಿ ಅವರಿಗೆ ಟಿಕೆಟ್ ಸಿಗುತ್ತಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಮಹಿಳಾ ಮೀಸಲಾತಿಯ ಧೋರಣೆ ಅನುಸರಿಸುತ್ತೇವೆಂಬ ಮಾತನ್ನು ರಾಜಕೀಯ ನಾಯಕರು ಉಳಿಸಿಕೊಳ್ಳುತ್ತಿಲ್ಲ ಎಂಬುದು ಆ ವಾದ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಭಿನ್ನವಾಗಿದ್ದಾರೆ. 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸಿದ 291 ಸ್ಥಾನಗಳಲ್ಲಿ 50 ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ದರು. ಆ ಪೈಕಿ 33 ಮಂದಿ ಗೆದ್ದಿದ್ದರು.
ರಾಜಕೀಯ ಪಕ್ಷಗಳಿಗೆ ಮಹಿಳಾ ಮತದಾರರು ಬೇಕು, ಅವರ ವೋಟುಗಳು ಬೇಕು. ಮಹಿಳಾ ಮತದಾರರನ್ನು ಓಲೈಸಲು ಮೂರೂ ಪ್ರಮುಖ ಪಕ್ಷಗಳು ಮಹಿಳಾ ಕಲ್ಯಾಣ ಯೋಜನೆಗಳನ್ನು ಘೋಷಿಸಿವೆ. ಬಿಜೆಪಿ ‘ಗೃಹಿಣಿ ಶಕ್ತಿ’ ಘೋಷಣೆ ಮಾಡಿದರೆ, ಕಾಂಗ್ರೆಸ್ ‘ಗೃಹಲಕ್ಷ್ಮಿ’ ಭರವಸೆ ನೀಡಿದೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮಹಿಳಾ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.
ಆದರೆ, ಮಹಿಳೆಯರಿಗೆ ಟಿಕೆಟ್ ನೀಡುವಲ್ಲಿ ಇದೇ ಮೂರೂ ಪಕ್ಷಗಳು ಎಷ್ಟು ಉದಾರತೆ ತೋರುತ್ತಿವೆ? ಈ ಪ್ರಶ್ನೆಗೆ ಮಾತ್ರ ಇಲ್ಲ ಎಂಬುದೇ ಉತ್ತರವಾಗುವ ಸ್ಥಿತಿಯಿದೆ. ಈ ಸಲವಾದರೂ ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಮಣೆ ಹಾಕುವವೆ? ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಈ ಬಗ್ಗೆ ದೊಡ್ಡ ಭರವಸೆ ಕಾಣುತ್ತಿಲ್ಲ. ಕಾದು ನೋಡೋಣ.
(ಮಾಹಿತಿ ಕೃಪೆ: ಅಫ್ಶಾನ್ ಯಾಸ್ಮೀನ್, thehindu)