×
Ad

ರಾಜಕಾರಣಿಗಳ ಭಾಷೆಯ ಅಗತ್ಯವಿಲ್ಲ: ಬೆಳಗೋಡು ರಮೇಶ್ ಭಟ್

Update: 2023-04-09 20:36 IST

ಮಣಿಪಾಲ: ಸಂವಹನಕ್ಕಾಗಿಯೇ ಭಾಷೆ ಇರುವುದು. ಯಾವ ಭಾಷೆಯು ಇನ್ನೊಂದು ಭಾಷೆಯನ್ನು ದ್ವೇಷಿಸುವು ದಿಲ್ಲ. ಕೊಳ್ಳು -ಕೊಡುವುದ ರಿಂದ ಭಾಷೆ ಮತ್ತು ಮನುಷ್ಯ ಬೆಳೆಯುತ್ತಾರೆ. ಭಾಷೆಯ ವಿಷಯದಲ್ಲಿ ರಾಜಕಾರಣಿ ಗಳ ಭಾಷೆಯ ಅಗತ್ಯವಿಲ್ಲ ಎಂದು ಹಿರಿಯ ಕಥೆಗಾರರು, ವಿಮರ್ಶಕರಾದ ಬೆಳಗೋಡು ರಮೇಶ್ ಭಟ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ ಉಡುಪಿ ಜಂಟಿ ಆಶ್ರಯದಲ್ಲಿ ರವಿವಾರ ಮಣಿಪಾಲದ ಸೋನಿಯಾ ಕ್ಲಿನಿಕ್‌ನ ಸಭಾಂಗಣದಲ್ಲಿ ನಡೆದ ಕನ್ನಡ ಮಾತನಾಡು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸುಮಾರು ಎರಡು ತಿಂಗಳ ಕಾಲ ನಡೆದ ಕನ್ನಡ ಮಾತನಾಡು ಕಾರ್ಯ ಕ್ರಮದ 30 ತರಗತಿಗಳಲ್ಲಿ ಭಾಗವಹಿಸಿದ್ದ ೨೫ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಮಾತನಾಡು ಕಾರ್ಯಕ್ರಮದ ಮುಖ್ಯ ತರಬೇತುದಾರರಾದ ಡಾ.ಗಣನಾಥ್ ಎಕ್ಕಾರು ಅವರನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಣಿಪಾಲ ಸೋನಿಯಾ ಕ್ಲಿನಿಕ್ ವೈದ್ಯೆ ಡಾ.ಗಿರಿಜಾ, ಕೇರಳ ಸೋಶಿಯಲ್ ಮತ್ತು ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ಬಿನೇಶ್ ವಿ.ಸಿ., ಉಡುಪಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮನೋಹರ್ ವಿ. ಉಪಸ್ಥಿತರಿದ್ದರು.

ಕಸಾಪ ಉಡುಪಿ ತಾಲೂಕಿನ ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

Similar News