ರಾಜಕಾರಣಿಗಳ ಕುರಿತು ಅವಹೇಳನಕಾರಿ ಹಾಡು ಹಾಡಿದ ಆರೋಪ: ಇನ್ನೋರ್ವ ರ್‍ಯಾಪರ್ ವಿರುದ್ಧ ಪ್ರಕರಣ ದಾಖಲು
ಮುಂಬೈ, ಎ. 9: ರಾಜಕಾರಣಿಗಳ ಬಗ್ಗೆ ಅವಹೇಳನಕಾರಿ ಹಾಡು ಹಾಡಿದ ಆರೋಪದಲ್ಲಿ ರ್‍ಯಾಪರ್ ಕಲಾವಿದ ಉಮೇಶ್ ಖಾಡೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರ ‘‘ಭೋಂಗ್ಲಿ ಕೇಲಿ ಜನತಾ’’ (ನೀವು ಪ್ರಜೆಗಳನ್ನು ನಗ್ನಗೊಳಿಸಿದ್ದೀರಿ) ಹಾಡಿನ ವಿರುದ್ಧ ಖಾಡೆ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಹಾಡು ರಾಜಕಾರಣಿಗಳ ಸ್ವಾರ್ಥಪರತೆ ಹಾಗೂ ಇದರಿಂದ ಸಾಮಾನ್ಯ ಜನರು ಉಂಟಾಗುವ ತೊಂದರೆ ಕುರಿತದ್ದಾಗಿದೆ. ಆದರೆ, ಈ ಹಾಡು ಮಹಾರಾಷ್ಟ್ರ ಸರಕಾರ ಪ್ರಕರಣ ದಾಖಲಿಸಿದ ಇನ್ನೋರ್ವ ರ್‍ಯಾಪರ್ ಕಲಾವಿದ ರಾಜ್ ಮುಂಗಾಸೆ ಅವರ ಹಾಡಿನಂತೆ ಪ್ರಸಕ್ತ ರಾಜಕೀಯ ಸನ್ನಿವೇಶ ಅಥವಾ ರಾಜಕಾರಣಿಗಳನ್ನು ಉಲ್ಲೇಖಿಸುವುದಿಲ್ಲ ಎಂದು ಹೇಳಲಾಗಿದೆ.
ರಾಜ್ಯದಲ್ಲಿರುವ ಬಿಜೆಪಿ ಹಾಗೂ ಶಿವಸೇನೆ ಸರಕಾರದ ಕುರಿತು ಅವಹೇಳನಕಾರಿ ಹಾಡಿನ ಆರೋಪದಲ್ಲಿ ಮುಂಗಾಸೆ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿತ್ತು.
‘‘ಖಾಡೆಯನ್ನು ಗುರುವಾರ ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಅನಂತರ ತೆರಳಲು ಅವಕಾಶ ನೀಡಲಾಗಿತ್ತು. ಅಗತ್ಯ ಇರುವಾಗ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನಿರ್ದೇಶಿಸಿ ಖಾಡೆ ಅವರಿಗೆ ನೋಟಿಸು ನೀಡಲಾಗಿದೆ’’ ಎಂದು ಪೊಲೀಸ್ (ಬಂದರು ವಲಯ) ಉಪ ಆಯುಕ್ತ ಸಂಜಯ್ ಲಾಠ್ಕರ್ ಅವರು ಶನಿವಾರ ಹೇಳಿದ್ದಾರೆ. ಈ ನಡುವೆ ಎನ್ಸಿಪಿ ಶಾಸಕ ಜಿತೇಂದ್ರ ಅವ್ಹಡ್ ಅವರು, ಖಾಡೆ ಅವರ ಹೆತ್ತವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಖಾಡೆ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಟೀಕಿಸಿರುವ ಅವರು, ಇದರಲ್ಲಿ ಯಾವುದೇ ಆಕ್ಷೇಪಾರ್ಹವಾದುದು ಇಲ್ಲ ಎಂದಿದ್ದಾರೆ. ‘‘ಖಾಡೆ ಅವರು ಯಾರೊಬ್ಬರ ಹೆಸರನ್ನು ಉಲ್ಲೇಖಿಸಿಲ್ಲ. ಅವರು ಈ ಹಾಡಿನಲ್ಲಿ ಬಡತನದ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಕುಂದು ಕೊರತೆಗಳನ್ನು ವ್ಯಕ್ತಪಡಿಸುವುದು ಅಪರಾಧವಾಗಿದ್ದರೆ, ಕೆಲಸಕ್ಕೆ ಹೋಗುವ ಹಾಗೂ ಪ್ರಯಾಣಿಸುವಾಗ ತಮ್ಮ ಸಂಕಷ್ಟವನ್ನು ಹೊರ ಹಾಕುವ ಪ್ರತಿಯೊಬ್ಬರನ್ನೂ ಬಂಧಿಸಿ’’ ಎಂದು ಅವರು ಹೇಳಿದ್ದಾರೆ.