×
Ad

ತಮಿಳುನಾಡು: ‘ಎಲಿಫೆಂಟ್ ವಿಸ್ಪರ್ಸ್’ಗೆ ಪ್ರೇರಣೆಯಾದ ಬೊಮ್ಮನ್, ಬೆಳ್ಳಿಯೊಂದಿಗೆ ಪ್ರಧಾನಿ ಮಾತುಕತೆ

Update: 2023-04-09 22:02 IST

ಚೆನ್ನೈ, ಎ. 9: ಆಸ್ಕರ್ ಪ್ರಶಸ್ತಿ ಪುರಸ್ಕೃತ ಕಿರು ಸಾಕ್ಷಚಿತ್ರಕ್ಕೆ ಪ್ರೇರಣೆಯಾಗಿದ್ದ ಬೊಮ್ಮನ್ ಹಾಗೂ ಬೆಳ್ಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧುಮಲೈ ಹುಲಿ ರಕ್ಷಿತಾರಣ್ಯ (ಎಂಟಿಆರ್)ದ ತೆಪ್ಪಕಾಡು ಆನೆ ಶಿಬಿರದಲ್ಲಿ ರವಿವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ಶಿಬಿರದಲ್ಲಿದ್ದ ಸೆರೆ ಹಿಡಿದ ಆನೆಗಳಿಗೆ ಕಬ್ಬು ತಿನ್ನಿಸಿದ ಪ್ರಧಾನಿ ಅವರೊಂದಿಗೆ ಬೊಮ್ಮನ್, ಬೆಳ್ಳಿ ಹಾಗೂ ಮಾವುತರು ಸಂಕ್ಷಿಪ್ತ ಮಾತುಕತೆ ನಡೆಸಿದರು. ಬೊಮ್ಮನ್ ಹಾಗೂ ಬೆಳ್ಳಿ ತಾವು ಬೆಳೆಸಿದ ಎರಡು ಆನೆ ಮರಿಗಳಾದ ರಘು ಹಾಗೂ ಬೊಮ್ಮಿಯನ್ನು ಪ್ರಧಾನಿ ಅವರಿಗೆ ಪರಿಚಯಿಸಿದರು. ಶಿಬಿರದಲ್ಲಿ ಪ್ರವಾಸದ ವೇಳೆ ಜೊತೆಗಿದ್ದ ದಂಪತಿ ಜೊತೆಗೆ ಪ್ರಧಾನಿ ಅವರು ಫೋಟೊಗೆ ಫೋಸ್ ನೀಡಿದರು. ಪ್ರಧಾನಿ ಅವರೊಂದಿಗೆ ಭದ್ರತಾ ಸಿಬ್ಬಂದಿ ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ)ದ ಅಧಿಕಾರಿಗಳು ಇದ್ದರು.

ಬುಡಕಟ್ಟು ದಂಪತಿಯಾದ ಬೊಮ್ಮನ್ ಹಾಗೂ ಬೆಳ್ಳಿ ಅನಾಥ ಆನೆ ಮರಿಗಳನ್ನು ಸಲಹಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಇವರ ಜೀವನ ಆಸ್ಕರ್ ಪುರಸ್ಕೃತ ಕಿರು ಸಾಕ್ಷಚಿತ್ರ ‘ದಿ ಎಲಿಫೆಂಟ್ ವಿಸ್ಪರ್ಸ್’ಗೆ ಪ್ರೇರಣೆಯಾಗಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಬೆಳ್ಳಿ, ‘‘ಪ್ರಧಾನಿ ಅವರು ಆನೆಗಳಿಗೆ ಕಬ್ಬು ತಿನ್ನಿಸಿದರು ಹಾಗೂ ಆನೆ ಮರಿಗಳ ಬಗ್ಗೆ ನಮ್ಮಲ್ಲಿ ಕೇಳಿದರು. ನಾವು ಆನೆ ಮರಿಗಳನ್ನು ಮಕ್ಕಳಂತೆ ಬೆಳೆಸಿದ್ದೇವೆ ಎಂದು ತಿಳಿಸಿದೆವು. ಅದಕ್ಕೆ ಅವರು ಯಾರೊಬ್ಬರೂ ಆನೆ ಮರಿಗಳನ್ನು ಪ್ರೀತಿ, ವಾತ್ಸಲ್ಯದಿಂದ ಬೆಳೆಸಲಾರರು ಎಂದರು. ಅವರು ನಮ್ಮದೊಂದಿಗೆ ಫೋಟೊ ತೆಗೆದರು. ನಿಮಗೆ ಏನಾದರೂ ನೆರವಿನ ಅಗತ್ಯತೆ ಇದೆಯೇ ಎಂದು ಕೇಳಿದರು. ನೆರವು ನೀಡುವ ಭರವಸೆ ನೀಡಿದರು. ನಾವು ಅವರಿಂದ ಪೋಟೊ ಹಾಗೂ ಶಾಲು ಪಡೆದೆವು. ದಿಲ್ಲಿಗೆ ಬರುವಂತೆ ಅವರು ನಮ್ಮನ್ನು ಕರೆದರು’’ ಎಂದಿದ್ದಾರೆ.

Similar News