ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ತಮಿಳು ಸಹಿತ ಪ್ರಾದೇಶಿಕ ಭಾಷೆ ಸೇರಿಸಲು ಅಮಿತ್ ಶಾ ಗೆ ಸ್ಟಾಲಿನ್ ಪತ್ರ
ಚೆನ್ನೈ, ಎ. 9: ಸಿಆರ್‌ಪಿಎಫ್(CRPF) ನೇಮಕಾತಿಯ ಕಂಪ್ಯೂಟರ್ ಪರೀಕ್ಷೆಯಲ್ಲಿ ತಮಿಳನ್ನು ಸೇರಿಸದೇ ಇರುವುದನ್ನು ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಇಂಗ್ಲೀಷ್ ಹಾಗೂ ಹಿಂದಿ ಬಳಕೆಯನ್ನು ಕಡ್ಡಾಯಗೊಳಿಸುವ ಅಧಿಸೂಚನೆ ತಾರತಮ್ಯ ಹಾಗೂ ಏಕಪಕ್ಷೀಯವಾಗಿದೆ ಎಂದಿದ್ದಾರೆ. ಪರೀಕ್ಷೆಯನ್ನು ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಬರೆಯಬಹುದು ಎಂದು ಕೇಂದ್ರ ಸರಕಾರದ ಅಧಿಸೂಚನೆ ಹೇಳಿದೆ.
ಇದರಿಂದ ತಮಿಳುನಾಡಿನ ಅಭ್ಯರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ ಎಂದು ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ ಇದಲ್ಲದೆ 100 ಅಂಕಗಳಲ್ಲಿ 25 ಅಂಕಗಳನ್ನು ಹಿಂದಿಯಲ್ಲಿ ಪ್ರಬಂಧ ಬರೆಯುವುದಕ್ಕೆ ನೀಡಲಾಗಿದೆ. ಇದು ಹಿಂದಿ ಮಾತನಾಡುವ ಅಭ್ಯರ್ಥಿಗಳಿಗೆ ಮಾತ್ರ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ. ‘‘ಸಿಆರ್‌ಪಿಎಫ್ ಈ ಅಧಿಸೂಚನೆ ತಮಿಳುನಾಡಿನಿಂದ ಅರ್ಜಿ ಸಲ್ಲಿಸುತ್ತಿರುವ ಆಕಾಂಕ್ಷಿಗಳಿಗೆ ವಿರುದ್ಧವಾಗಿದೆ. ಇದು ಏಕಪಕ್ಷೀಯ ಮಾತ್ರವಲ್ಲ ತಾರತಮ್ಯದಿಂದ ಕೂಡಿದೆ’’ ಎಂದು ಅವರು ಹೇಳಿದ್ದಾರೆ.
ಈ ಅಧಿಸೂಚನೆ ಆಕಾಂಕ್ಷಿಗಳು ಸರಕಾರಿ ಉದ್ಯೋಗವನ್ನು ಪಡೆಯುವುದಕ್ಕೆ ಅಡ್ಡಿ ಉಂಟು ಮಾಡುತ್ತದೆ. ಅಲ್ಲದೆ, ಆಕಾಂಕ್ಷಿಗಳ ಸಾಂವಿಧಾನಿಕ ಹಕ್ಕಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ ಹಿಂದಿಯೇತರ ಆಕಾಂಕ್ಷಿಗಳು ಈ ಪರೀಕ್ಷೆಯನ್ನು ತಮಿಳು ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಬರೆಯಲು ಅವಕಾಶ ನೀಡಲು ಅಮಿತ್ ಶಾ ಅವರು ಶೀಘ್ರ ಮಧ್ಯಪ್ರವೇಶಿಸಬೇಕು ಎಂದು ಸ್ಟಾಲಿನ್ ತಿಳಿಸಿದ್ದಾರೆ.