ಗಣಿ ಕಂಪೆನಿ ಪರವಾಗಿ ಅರಣ್ಯ ಇಲಾಖೆಗೆ ಕಾಗೇರಿ ಒತ್ತಡ: ಮುಖ್ಯಮಂತ್ರಿಗೆ ಬರೆದ ಪತ್ರದಿಂದ ಬಹಿರಂಗ

Update: 2023-04-10 03:01 GMT

ಬೆಂಗಳೂರು: ಪರಿಹಾರಾತ್ಮಕ ಅರಣ್ಯ ಜಮೀನು ನೀಡುವ ಸಂಬಂಧ  ಒತ್ತಾಯ ಮಾಡದಂತೆ ಅರಣ್ಯ ಇಲಾಖೆಗೆ  ನಿರ್ದೇಶನ ನೀಡಬೇಕು ಎಂದು ಗಣಿ ಕಂಪೆನಿ ಪರವಾಗಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.

 ಕಾಗೇರಿ ಅವರು ರೌಡಿ ಶೀಟರ್ ಒಬ್ಬರ ಜತೆ ಗುಪ್ತವಾಗಿ ಸಭೆ ನಡೆಸಿದ್ದಾರೆ ಎಂಬ ಫೋಟೊಗಳು ವೈರಲ್ ಆಗಿರುವ ಬೆನ್ನಲ್ಲೇ ಗಣಿ ಕಂಪೆನಿ ಪರವಾಗಿ ನಿರ್ದೆಶನ ನೀಡಬೇಕು ಎಂದು ಬರೆದಿರುವ ಪತ್ರವೂ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಅರಣ್ಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಕಂದಾಯ ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿಗೆ  ಬರೆದಿರುವ ಪತ್ರದಲ್ಲಿ ಸಭಾಧ್ಯಕ್ಷರು ಬರೆದಿರುವ ಪತ್ರವನ್ನು ಉಲ್ಲೇಖಿಸಿದ್ದಾರೆ. ಈ ಪತ್ರದ ಪ್ರತಿಯು ’ದಿ ಫೈಲ್’ಗೆ ಲಭ್ಯವಾಗಿದೆ.

 ತಮ್ಮ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಪತ್ರ ಮತ್ತು ಶಿಫಾರಸು ಮಾಡಲು ಅವಕಾಶವಿದೆ. ಇದನ್ನು  ಹೊರತುಪಡಿಸಿ ಗಣಿ ಕಂಪೆನಿಯೂ ಸೇರಿದಂತೆ ಮತ್ತಿತರ ವಿಚಾರಗಳಿಗೆ ಸಂಬಂಧಪಟ್ಟಂತೆ  ನಿರ್ದೇಶನ ನೀಡಬೇಕು ಎಂದು ಪತ್ರ ಬರೆಯುವುದು ವಿಧಾನಸಭಾಧ್ಯಕ್ಷರ ಪೀಠದ ಗೌರವಕ್ಕೆ ಕುಂದು ತಂದಂತಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

 ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಲು ಅರ್ಜಿ ಸಲ್ಲಿಸುವ ಕಂಪೆನಿಗಳು ಅರಣ್ಯ ವಿಮೋಚನೆ ಪಡೆಯುವ ಸಂದರ್ಭದಲ್ಲಿ ಪರಿಹಾರಾತ್ಮಕ ಅರಣ್ಯ ಜಮೀನು ಅಥವಾ ಇದಕ್ಕೆ ಸಮಾನಾಂತರವಾದ ಹಣವನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಲ್ಲಿ ಠೇವಣಿ ಇರಿಸಲು ಅವಕಾಶವಿದೆ. ಆದರೆ ಸಭಾಧ್ಯಕ್ಷರು ಬರೆದಿರುವ ಪತ್ರದಲ್ಲಿ ಉಪಯೋಗಿ ಸಂಸ್ಥೆಗೆ ಯಾವುದೇ ರೀತಿಯಲ್ಲಿ ಪರಿಹಾರಾತ್ಮಕ ಅರಣ್ಯ ಜಮೀನು ನೀಡಲು ಒತ್ತಾಯ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ. ಸ್ಪೀಕರ್ ಕಾಗೇರಿ ಅವರು ಬರೆದಿರುವ ಪತ್ರದ ಬಗ್ಗೆ ವಿಧಾನಸಭೆಯ ನಿವೃತ್ತ ಕಾರ್ಯದರ್ಶಿಗಳು ಆಕ್ಷೇಪಿಸಿದ್ದಾರೆ.

ಅರಣ್ಯ ಇಲಾಖೆ ಎಸಿಎಸ್ ಬರೆದಿರುವ ಪತ್ರದಲ್ಲೇನಿದೆ?

ಗವಿ ಸಿದ್ದೇಶ್ವರ ಮಿನರಲ್ಸ್ (ಗಣಿ ಗುತ್ತಿಗೆ ಸಂಖ್ಯೆ 2552)ಗೆ ಸಂಬಂಧಿಸಿದಂತೆ ಅರಣ್ಯ (ಸಂರಕ್ಷಣೆ) ಕಾಯ್ದೆ 1980 ರಡಿ ಅರಣ್ಯ ವಿಮೋಚನೆ ನೀಡುವ ಸಂದರ್ಭದಲ್ಲಿ ಪರಿಹಾರಾತ್ಮಕ ಅರಣ್ಯ ಜಮೀನನ್ನು ನೀಡುವ ವಿಷಯವಾಗಿ ಈ ಹಿಂದೆ ಕೇಂದ್ರ ಸರಕಾರವು ವಿಧಿಸಿದ್ದ ಷರತ್ತುಗಳನ್ನು ಪಾಲಿಸಿದ್ದು, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವ ಹಿನ್ನೆಲೆಯಲ್ಲಿ ಇವರಿಗೆ ತೊಂದರೆ ಉಂಟಾಗುತ್ತಿದೆ.

ಇದನ್ನು ಅರಣ್ಯ ಇಲಾಖೆಯು ತನ್ನ ಹಂತದಲ್ಲಿಯೇ ಪರಿಹರಿಸಿಕೊಳ್ಳುವಂತೆ ಹಾಗೂ ಉಪಯೋಗಿ ಸಂಸ್ಥೆಗೆ ಯಾವುದೇ ರೀತಿಯಲ್ಲಿ ಪರಿಹಾರಾತ್ಮಕ ಅರಣ್ಯ ಜಮೀನನ್ನು ನೀಡಲು ಒತ್ತಾಯ ಮಾಡದಂತೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಯವರನ್ನು ಸಭಾಧ್ಯಕ್ಷರು ಕೋರಿರುತ್ತಾರೆ ಎಂದು ಅರಣ್ಯ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಜಯರಾಮ್ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 ‘ಒಂದು ವೇಳೆ ಪರಿಹಾರಾತ್ಮಕ ಅರಣ್ಯ ಜಮೀನು ಸಿಗದೇ ಇದ್ದಲ್ಲಿ ಅವರು ಇದಕ್ಕೆ ಸಮಾನಾಂತರವಾದ ಹಣವನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಠೇವಣಿ ಇರಿಸಬಹುದು. ಆನಂತರ ಅರಣ್ಯ ವಿಮೋಚನೆ ನೀಡಲು ಅವಕಾಶವಿದೆ,’ ಎಂದು ಗಣಿ ಉದ್ಯಮಿಯೊಬ್ಬರು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯ ವಿಮೋಚನೆ ನೀಡುವ ಸಂಬಂಧಪಟ್ಟಂತೆ 3,000 ಅರ್ಜಿಗಳು ಬಾಕಿ ಇವೆ. ಇದರಲ್ಲಿ ಅರಣ್ಯ ಪ್ರದೇಶಕ್ಕೆ ಒಳಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಶೇ.90ರಷ್ಟು ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ.  ಕಾರಣಾಂತರಗಳಿಂದ ಅವೆಲ್ಲ ಬಾಕಿ ಇವೆ ಎಂದು ತಿಳಿದು ಬಂದಿದೆ. ಒಂದು ವೇಳೆ ಪರಿಹಾರಾತ್ಮಕ ಅರಣ್ಯ ಜಮೀನು ಪಡೆದುಕೊಳ್ಳದಿದ್ದರೆ ಇದನ್ನೇ ಮಾದರಿಯಾಗಿಟ್ಟುಕೊಂಡು ಬೇರೆ ಕಂಪೆನಿಗಳು ಹಕ್ಕು ಸಾಧಿಸಬಹುದು. ಇದು ಅರಣ್ಯ ಹಕ್ಕು ಉಲ್ಲಂಘನೆ ಮಾಡಲು ದಾರಿಮಾಡಿಕೊಡಲಿದೆ. ಹೀಗಾಗಿ ಯಾವುದೇ ಕಾರಣಕ್ಕೆ ಅರಣ್ಯ ವಿಮೋಚನೆಗಾಗಿ ಅರಣ್ಯ ಜಮೀನು ನೀಡಲು ಒತ್ತಾಯ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಸ್ಪೀಕರ್ ಮಾಡಿರುವ ಮನವಿಯು ಕಾನೂನು ಬಾಹಿರವಾಗುತ್ತದೆ. ಪ್ರಧಾನಿಗೂ ಇಂತಹ ಯಾವುದೇ ಅಧಿಕಾರವಿಲ್ಲ ಎನ್ನುತ್ತಾರೆ ಗಣಿ ಉದ್ಯಮಿಯೊಬ್ಬರು.

‘ಸಭಾಧ್ಯಕ್ಷರ ಸ್ಥಾನ ಗೌರವಯುತವಾದದ್ದು. ತಮ್ಮ ಮತಕ್ಷೇತ್ರದ ಪರವಾಗಿ ಕೆಲಸ ಮಾಡಲು ಪತ್ರ ಬರೆಯಬಹುದು. ಅದನ್ನು ಬಿಟ್ಟು ಬೇರೆ ಏನನ್ನೂ  ಮಾಡಬಾರದು. ಸಭಾಧ್ಯಕ್ಷರ  ಹುದ್ದೆಯನ್ನು ಬಳಸಿಕೊಂಡು ಗಣಿ  ಕಂಪೆನಿಗಳ ಪರವಾಗಿ ನಿರ್ದೇಶನ ನೀಡಿ ಎಂದು ಮನವಿ ಮಾಡುವುದು ಮತ್ತು ಶಿಫಾರಸು ಮಾಡಿದರೆ ಅದು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತಂದಂತಾಗುತ್ತದೆ ಮತ್ತು ಕ್ರಮಬಾಹಿರವಾಗುತ್ತದೆ,’ ಎನ್ನುತ್ತಾರೆ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಯಾಗಿದ್ದ ಟಿ.ಎನ್. ದ್ರುವಕುಮಾರ್.

Similar News