‘ಹಿಂದೂ ರಾಷ್ಟ್ರ’ ಪಂಚಾಯತ್ ಸಂಘಟಕರ ವಿರುದ್ಧ ಮೊಕದ್ದಮೆ ದಾಖಲು
ಹೊಸದಿಲ್ಲಿ, ಎ. 10: ಈಶಾನ್ಯ ದಿಲ್ಲಿಯಲ್ಲಿ ಅನುಮತಿ ಪಡೆಯದೆ ‘ಹಿಂದೂ ರಾಷ್ಟ್ರ’ ಪಂಚಾಯತ್ ನಡೆಸಿರುವುದಕ್ಕಾಗಿ ದಿಲ್ಲಿ ಪೊಲೀಸರು ಸೋಮವಾರ ಸಂಘಟಕರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಯುನೈಟೆಡ್ ಹಿಂದೂ ಫ್ರಂಟ್ ಎಂಬ ಹಿಂದುತ್ವ ಸಂಘಟನೆಯೊಂದು ರವಿವಾರ ಈ ಪಂಚಾಯತ್ ಏರ್ಪಡಿಸಿದೆ. ಹಿಂದೂ ರಾಷ್ಟ್ರ ಸ್ಥಾಪಿಸಬೇಕು ಮತ್ತು ‘ಲವ್ ಜಿಹಾದ್’ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಈ ಪಂಚಾಯತ್ನಲ್ಲಿ ಯುನೈಟೆಡ್ ಹಿಂದೂ ಫ್ರಂಟ್ ನ ಸದಸ್ಯರು ಒತ್ತಾಯಿಸಿದರು.
2020ರಲ್ಲಿ ಕೋಮುಗಲಭೆಗಳು ನಡೆದ ವಲಯದಲ್ಲೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೋಮುಗಲಭೆಯಲ್ಲಿ 53 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಯುನೈಟೆಡ್ ಹಿಂದೂ ಫ್ರಂಟ್ ಮುಖ್ಯಸ್ಥ ಜೈ ಭಗವಾನ್ ಗೋಯಲ್ ಸಂಘಟಕರಲ್ಲಿ ಒಬ್ಬರಾಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ಸತ್ಯನಾರಾಯಣ ಜತಿಯ ಮತ್ತು ಉತ್ತರ ದಿಲ್ಲಿಯ ಮಾಜಿ ಮೇಯರ್ ಅವತಾರ್ ಸಿಂಗ್ ಉಪಸ್ಥಿತರಿದ್ದರು.
ಯಾವುದೇ ಹಿಂದೂ ತನ್ನ ಮನೆಗಳು ಅಥವಾ ಅಂಗಡಿಗಳನ್ನು ಬೇರೆ ಧರ್ಮಗಳ ಸದಸ್ಯರಿಗೆ ಮಾರಾಟ ಮಾಡಬಾರದು ಅಥವಾ ಬಾಡಿಗೆಗೆ ಕೊಡಬಾರದು ಎಂದು ಹಿಂದೂ ರಾಷ್ಟ್ರ ಪಂಚಾಯತ್ನಲ್ಲಿ ಗೋಯಲ್ ಸಭಿಕರನ್ನು ಒತ್ತಾಯಿಸಿದರು.
‘‘ನಾವು ಮೊದಲು ಈಶಾನ್ಯ ದಿಲ್ಲಿಯನ್ನು ಹಿಂದೂ ರಾಷ್ಟ್ರ ಜಿಲ್ಲೆಯನ್ನಾಗಿ ಮಾಡುತ್ತೇವೆ ಹಾಗೂ ಬಳಿಕ, ಇಡೀ ದೇಶವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ’’ ಎಂದು ಗೋಯಲ್ ಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ‘‘ಹಿಂದೂಗಳನ್ನು ರಕ್ಷಿಸಲು ನಾವು ಪಂಚಾಯತ್ ಮತ್ತು ವಿಧಾನಸಭಾ ಮಟ್ಟಗಳಲ್ಲಿ ಘಟಕಗಳನ್ನು ಸ್ಥಾಪಿಸುತ್ತೇವೆ’’ ಎಂದರು.
ಸಭೆ ನಡೆಸಲು ಅನುಮತಿ ಪಡೆಯದಿರುವುದಕ್ಕಾಗಿ ದಿಲ್ಲಿ ಪೊಲೀಸರು ಸೋಮವಾರ ಸಂಘಟಕರ ವಿರುದ್ಧ ಮೊಕದ್ದೆ ದಾಖಲಿಸಿದರು. ಆದರೆ, ಅಲ್ಲಿ ಮಾಡಲಾಗಿರುವ ದ್ವೇಷ ಭಾಷಣಗಳಿಗಾಗಿ ಪೊಲೀಸರು ಸಂಘಟಕರ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಲಿಲ್ಲ.