×
Ad

ಲಂಡನ್ ಗೆ ಹೋಗುತ್ತಿದ್ದ ವಿಮಾನದಲ್ಲಿ ಸಿಬ್ಬಂದಿ ಮೇಲೆ ಪ್ರಯಾಣಿಕನಿಂದ ಹಲ್ಲೆ: ದಿಲ್ಲಿಗೆ ವಾಪಸಾದ ಏರ್ ಇಂಡಿಯಾ ವಿಮಾನ

Update: 2023-04-10 22:13 IST

ಹೊಸದಿಲ್ಲಿ, ಎ. 10: ಓರ್ವ ಪ್ರಯಾಣಿಕನು ಇಬ್ಬರು ಸಿಬ್ಬಂದಿಗೆ ಹಲ್ಲೆ ಮಾಡಿದ ಬಳಿಕ, ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಸೋಮವಾರ ದಿಲ್ಲಿಗೆ ವಾಪಸಾಗಿದೆ. ಆ ಪ್ರಯಾಣಿಕನನ್ನು ಕೆಳಗಿಳಿಸಲಾಯಿತು ಹಾಗೂ ಪೊಲೀಸರು ಆತನ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಲಂಡನ್ನ ಹೀತ್ರೂ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ವಿಮಾನವು ಪ್ರಯಾಣಿಕನೊಬ್ಬನು ದಾಂಧಲೆಗಿಳಿದ ಹಿನ್ನೆಲೆಯಲ್ಲಿ ಹಾರಾಟ ಆರಂಭಿಸಿದ ಗಂಟೆಗಳ ಬಳಿಕ ವಾಪಸಾಯಿತು ಎಂದು ಏರ್ ಇಂಡಿಯಾವು ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಮಾತು ಮತ್ತು ಲಿಖಿತ ಎಚ್ಚರಿಕೆಗಳನ್ನು ನೀಡಿದ ಬಳಿಕವೂ ಪ್ರಯಾಣಿಕನು ತನ್ನ ದಾಂಧಲೆಯನ್ನು ಮುಂದುವರಿಸಿದನು. ಅವನ ದಾಂಧಲೆಯಿಂದಾಗಿ ಇಬ್ಬರು ಸಿಬ್ಬಂದಿ ದೈಹಿಕವಾಗಿ ಗಾಯಗೊಂಡರು. ಆಗ ವಿಮಾನವನ್ನು ದಿಲ್ಲಿಗೆ ಹಿಂದಿರುಗಿಸಲು ಪೈಲಟ್ ನಿರ್ಧರಿಸಿದರು. ವಿಮಾನ ಇಳಿದ ಬಳಿಕ, ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು. ಅವನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ’’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಏರ್ ಇಂಡಿಯಾ ಬೋಯಿಂಗ್ 787 ವಿಮಾನವು ಬೆಳಗ್ಗೆ ದಿಲ್ಲಿ ವಿಮಾನ ನಿಲ್ದಾಣದಿಂದ 6:35ಕ್ಕೆ ಹಾರಾಟ ಆರಂಭಿಸಿತು ಹಾಗೂ 9:42ಕ್ಕೆ ವಾಪಸಾಯಿತು ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ತಿಳಿಸಿದೆ. ಅದು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ವಿಮಾನವು ಪಾಕಿಸ್ತಾನ ಪೇಶಾವರದ ಸಮೀಪದ ಹಾರುತ್ತಿದ್ದಾಗ ಅದು ಹಿಮ್ಮುಖ ಪ್ರಯಾಣವನ್ನು ಕೈಗೊಂಡಿತು.

Similar News