×
Ad

ದಲಿತರು ಕುಡಿಯುವ ನೀರಿನ ಟ್ಯಾಂಕ್‌ಗೆ ಮಲ ಹಾಕಿದ ಪ್ರಕರಣ: ಸಿಬಿಐ ತನಿಖೆಗೆ ದಲಿತ ಸಂಘಟನೆಗಳ ಒತ್ತಾಯ

Update: 2023-04-10 22:47 IST

ಚೆನ್ನೈ, ಎ. 10: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ವೆಂಗೈವಯಾಲ್ ನಲ್ಲಿ ಇತ್ತೀಚೆಗೆ ನಡೆದಿರುವ ಭಯಾನಕ ಜಾತಿ ದೌರ್ಜನ್ಯದ ಬಗ್ಗೆ ಸಿಬಿಐ ತನಿಕೆ ನಡೆಸುವಂತೆ ರಾಜ್ಯದ ದಲಿತ ಸಂಘಟನೆಗಳು ಒತ್ತಾಯಿಸಿವೆ.

ಗ್ರಾಮದ ದಲಿತ ಕುಟುಂಬಗಳಿಗೆ ಕುಡಿಯುವ ನೀರು ಪೂರೈಸುವ ಓವರ್ಹೆಡ್ ಟ್ಯಾಂಕ್ ಗೆ ಮಾನವ ಮಲವನ್ನು ಹಾಕಿದ ಪ್ರಕರಣ ಇದಾಗಿದೆ. ಘಟನೆಯು ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದಿತ್ತು.

‘‘ಮೇಲ್ಜಾತಿಯ ಜನರು ತಮ್ಮ ವಿರುದ್ಧ ದೌರ್ಜನ್ಯ ನಡೆಸಿರುವ ಸ್ಪಷ್ಟ ಪ್ರಕರಣ ಇದಾಗಿದೆ’’ ಎಂದು ದಲಿತರು ಹೇಳಿದ್ದಾರೆ.

‘‘ಕುಡಿಯುವ ನೀರಿನಲ್ಲಿ ಮಾನವ ಮಲವನ್ನು ಬೆರೆಸಿರುವುದು ದಲಿತ ಸಮುದಾಯಕ್ಕೆ ನೀಡಿದ ಸ್ಪಷ್ಟ ಸಂದೇಶವಾಗಿದೆ. ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಮೇಲ್ಜಾತಿ ಮತ್ತು ಮಧ್ಯಮ ಜಾತಿಗಳ ಸಮುದಾಯಗಳಿಗೆ ಹೋಲಿಸಿದರೆ ದಲಿತರು ತುಂಬಾ ತುಂಬಾ ಕೆಳಗಿದ್ದಾರೆ, ಹಾಗಾಗಿ, ಅವರು ಜೀವನದಲ್ಲಿ ಮೇಲೆ ಬರುವ ಅಥವಾ ಮೇಲೆ ಬರಲು ಪ್ರಯತ್ನ ನಡೆಸುವುದು ಬೇಡ ಎನ್ನುವುದೇ ಆ ಸಂದೇಶವಾಗಿದೆ’’ ಎಂದು ತಿರುಚಿಯಲ್ಲಿರುವ ಅಂಬೇಡ್ಕರ್ ಸ್ಟಡಿ ಫೋರಮ್ ಅಧ್ಯಕ್ಷ ಆರ್. ಸೆಲ್ವನಾಥನ್ ಐಎಎನ್ಎಸ್ನೊಂದಿಗೆ ಮಾತನಾಡುತ್ತಾ ಹೇಳಿದರು.

ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸ್ಟಡಿ ಫಾರಮ್ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳು ಪುದುಕೊಟ್ಟೈನಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸುವುದು ಎಂದು ಅವರು ಹೇಳಿದರು.

ತಮಿಳುನಾಡಿನ ಕೆಲವು ಸ್ಥಳಗಳಲ್ಲಿ ದಲಿತರನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ವೆಂಗವಯಾಲ್ ಘಟನೆಯು ಅದಕ್ಕೆ ಸರಿಯಾದ ಉದಾಹರಣೆಯಾಗಿದೆ ಎಂದು ಚೆನ್ನೈಯಲ್ಲಿರುವ ಸೆಂಟರ್ ಫಾರ್ ದಲಿತ್ ಸ್ಟಡೀಸ್ ಆ್ಯಂಡ್ ಥಾಟ್ಸ್ ಗೆ ಸೇರಿದ ದಲಿತ ಮಹಿಳಾ ಹೋರಾಟಗಾರ್ತಿ ಎಮ್.ಎಸ್. ಸುಲೇಖಮಣಿ ಹೇಳುತ್ತಾರೆ

Similar News