ಶಿಥಿಲವಾಗುತ್ತಿರುವ ಮಾಧ್ಯಮ ಸ್ವಾತಂತ್ರ್ಯದ ನೆಲೆಗಳು
ಸ್ವಯಂ ನಿರ್ಬಂಧ ಹೇರಿಕೊಂಡಿರುವ ಮಾಧ್ಯಮಗಳೂ ಎಚ್ಚೆತ್ತುಕೊಳ್ಳಬೇಕಿದೆ
ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸ್ಪರ್ಧಾತ್ಮಕತೆಯೂ ಮುಖ್ಯವಾಗುವುದರಿಂದ, ಮಾರುಕಟ್ಟೆ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ತಮ್ಮ ತಾತ್ವಿಕ ನಿಲುವುಗಳನ್ನೂ ರಾಜಿ ಮಾಡಿಕೊಳ್ಳುವ ಒತ್ತಡದಲ್ಲಿ ಪತ್ರಿಕಾ ಸಮೂಹಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಹಿನಿಯ/ಪ್ರಾದೇಶಿಕ ಪತ್ರಿಕೆಗಳ ಸಂಪಾದಕೀಯ ಪುಟಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಈ ಸ್ವಯಂ ನಿರ್ಬಂಧದಿಂದ ಆಚೆಗೆ ಬಂದು, ಪತ್ರಿಕಾ ಧರ್ಮ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮಾಧ್ಯಮ ವಲಯದ ಮೇಲಿದೆ.
ಭಾರತದಲ್ಲಿ ಪ್ರಜಾಪ್ರಭುತ್ವದ ಅಡಿಪಾಯ ಶಿಥಿಲವಾಗುತ್ತಿದೆ ಎಂಬ ಭಾವನೆ ವ್ಯಾಪಕವಾಗಿ ಹರಡಿರುವುದಕ್ಕೆ ಕಾರಣ, ಈ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾದ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮ ವಲಯ ಬಹುತೇಕ ದುರ್ಬಲ/ನಿಷ್ಕ್ರಿಯವಾಗಿರುವುದು. ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷಗಳ ಆಡಳಿತ ನೀತಿಗಳಿಂದಾಗುವ ವ್ಯತ್ಯಯಗಳು, ಬಹುಮತದ ಬಲದಿಂದ ಸರಕಾರಗಳು ಜಾರಿಗೊಳಿಸುವ ಕಾಯ್ದೆ ಕಾನೂನುಗಳು ಸದಾ ಕಾಲವೂ ಜನಪರವಾಗಿಯೇ ಇರುವುದಿಲ್ಲ ಎನ್ನುವುದು ಸಾರ್ವಕಾಲಿಕ ಸಾರ್ವತ್ರಿಕ ಸತ್ಯ. ಏಕೆಂದರೆ ಸರಕಾರಗಳ ಆಡಳಿತ ನೀತಿಗಳನ್ನು ಪರೋಕ್ಷವಾಗಿ ನಿಯಂತ್ರಿಸುವ ಮಾರುಕಟ್ಟೆ ಶಕ್ತಿಗಳು, ಆರ್ಥಿಕ ವಲಯದ ಔದ್ಯಮಿಕ ಶಕ್ತಿಗಳು ಮತ್ತು ಚುನಾವಣಾ ರಾಜಕಾರಣದ ಅನಿವಾರ್ಯತೆಗಳು ಅನೇಕ ಸಂದರ್ಭಗಳಲ್ಲಿ ಪ್ರಾಬಲ್ಯ ವಹಿಸಿರುತ್ತವೆ.
75 ವರ್ಷಗಳ ತನ್ನ ಸುದೀರ್ಘ ನಡಿಗೆಯಲ್ಲಿ ಭಾರತದ ಪ್ರಜಾತಂತ್ರ ವ್ಯವಸ್ಥೆ ಇಂತಹ ಅನೇಕ ಸನ್ನಿವೇಶಗಳನ್ನು ಎದುರಿಸಿದೆ. ಆರಂಭದಿಂದಲೂ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಚೌಕಟ್ಟಿನೊಳಗೇ ರೂಪುಗೊಂಡಿರುವ ಭಾರತದ ಆಳ್ವಿಕೆಯ ಸಾಂಸ್ಥಿಕ ನೆಲೆಗಳು ಹಲವಾರು ಸಂದರ್ಭಗಳಲ್ಲಿ ಮಾರುಕಟ್ಟೆ ಆರ್ಥಿಕತೆ ಮತ್ತು ಬಂಡವಾಳಶಾಹಿ ಔದ್ಯಮಿಕ ಹಿತಾಸಕ್ತಿಗಳಿಗೆ ಅನುಕೂಲವಾಗುವಂತಹ ಆಡಳಿತ ನೀತಿಗಳನ್ನೇ ಕಾನೂನಾತ್ಮಕವಾಗಿ ಜಾರಿಗೊಳಿಸಿವೆ. ಕಲ್ಯಾಣ ರಾಜ್ಯದ ಪರಿಕಲ್ಪನೆಯಲ್ಲಿ ಸಮಾಜವಾದಿ ಆರ್ಥಿಕ ನೀತಿಗಳನ್ನು ಅನುಸರಿಸುವ ಮೂಲಕ ತಳಮಟ್ಟದ ಜನಸಮುದಾಯಗಳ ಜೀವನ ಮತ್ತು ಜೀವನೋಪಾಯವನ್ನು ಕಾಪಾಡುವಲ್ಲಿ ಸರಕಾರಗಳು ಇಂದು ಕೊಂಚಮಟ್ಟಿಗೆ ಯಶಸ್ವಿಯಾಗಿದ್ದರೂ, ಅನೇಕ ಸಂದರ್ಭಗಳಲ್ಲಿ ಔದ್ಯಮಿಕ ಜಗತ್ತಿನ ಒತ್ತಡಗಳಿಗೆ ಮಣಿದು, ಬಂಡವಾಳಶಾಹಿಗಳ ಒತ್ತಾಸೆಗಳಿಗೆ ಮಣಿದು, ತಳಮಟ್ಟದ ಸಮುದಾಯಗಳನ್ನು ತಮ್ಮ ಮೂಲ ನೆಲೆಗಳಿಂದ ಉಚ್ಚಾಟನೆ ಮಾಡಿರುವುದನ್ನೂ ಕಾಣಬಹುದು. ಸಾಂವಿಧಾನಿಕವಾಗಿ ದೇಶದ ಸಾರ್ವಭೌಮ ಪ್ರಜೆಗಳಿಗೆ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಸರಕಾರಗಳೇ ಉಲ್ಲಂಘಿಸುವಂತಹ ಪ್ರಸಂಗಗಳೂ ನಡೆದಿವೆ.
1975ರ ತುರ್ತುಪರಿಸ್ಥಿತಿಯಲ್ಲಿ ಇದರ ಪರಾಕಾಷ್ಠೆಯನ್ನು ಇಡೀ ದೇಶವೇ ಅನುಭವಿಸಿದೆ. ಈ ಕರಾಳ ಯುಗದಿಂದ ಆಚೆಗೂ ಭಾರತದ ಶೋಷಿತ ಜನತೆ ತನ್ನ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಭೂಮಿಯ ಹಕ್ಕು, ಅರಣ್ಯದ ಹಕ್ಕು, ಆಹಾರ ಮತ್ತು ಉದ್ಯೋಗದ ಹಕ್ಕು ಹಾಗೂ ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಳ್ಳುವಂತಹ ಆಡಳಿತ ನೀತಿಗಳ ವಿರುದ್ಧ ಹೋರಾಡುತ್ತಲೇ ಬಂದಿರುವುದನ್ನು ಗುರುತಿಸಬಹುದು. ಈ ಎಲ್ಲ ಜಟಿಲ ಸನ್ನಿವೇಶಗಳಲ್ಲೂ ಭಾರತದ ಸಾಮಾನ್ಯ ಜನತೆಯೊಂದಿಗೆ ಹೆಗಲು ಕೊಟ್ಟು ನಿಂತಿರುವುದು ಈ ದೇಶದ ಮಾಧ್ಯಮಗಳು ಎನ್ನುವುದನ್ನೂ, ಕೆಲವು ಅಪವಾದಗಳೊಂದಿಗೆ, ಮಾನ್ಯ ಮಾಡಬೇಕಿದೆ. ತುರ್ತುಪರಿಸ್ಥಿತಿಯ ಸಂದರ್ಭವನ್ನೂ ಒಳಗೊಂಡಂತೆ ಆಡಳಿತಾರೂಢ ಸರಕಾರಗಳು ಕಾಲಕಾಲಕ್ಕೆ ಜಾರಿಗೊಳಿಸಿರುವ ಕರಾಳ ಶಾಸನಗಳ ವಿರುದ್ಧ ಮತ್ತು ಈ ಶಾಸನಗಳ ದುರ್ಬಳಕೆಯ ವಿರುದ್ಧ ಜನಸಾಮಾನ್ಯರನ್ನು ಜಾಗೃತಗೊಳಿಸುವ ಕೈಂಕರ್ಯವನ್ನು ಮಾಧ್ಯಮ ವಲಯ ಮಾಡುತ್ತಲೇ ಬಂದಿದೆ.
ಬದಲಾದ ಮಾಧ್ಯಮ ಲೋಕ
ಆದರೆ ಕಳೆದ ಮೂರು ದಶಕಗಳ ಜಾಗತೀಕರಣ ಮತ್ತು ನವ ಉದಾರವಾದದ ವಾತಾವರಣದಲ್ಲಿ ಪರಿಸ್ಥಿತಿ ಬದಲಾಗಿದೆ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲ ಸ್ವರೂಪವೇ ರೂಪಾಂತರಗೊಂಡಿದ್ದು, ಭಾರತದ ಬಹುತೇಕ ಪತ್ರಿಕೆಗಳು ಔದ್ಯಮಿಕ ಕ್ಷೇತ್ರದ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ. ಮುದ್ರಣ ಮಾಧ್ಯಮಗಳಲ್ಲಿ ಒಡೆತನ ಮತ್ತು ಸಂಪಾದಕತ್ವದ ನಡುವೆ ಇದ್ದ ಅಂತರ ಬಹುತೇಕ ಇಲ್ಲವಾಗಿದ್ದು, ಪತ್ರಿಕೆಗಳ ಸಂಪಾದಕೀಯ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಕ್ಷೀಣಿಸುತ್ತಲೇ ಇದೆ. ಕೆಲವೇ ಪತ್ರಿಕೆಗಳನ್ನು ಹೊರತುಪಡಿಸಿ, ಪತ್ರಿಕಾ ಸಂಪಾದಕೀಯದ ಆಶಯ, ಆದ್ಯತೆ ಮತ್ತು ಆಯ್ಕೆಗಳು ಮಾರುಕಟ್ಟೆಯ ಅಥವಾ ಔದ್ಯಮಿಕ ಹಿತಾಸಕ್ತಿಯ ಅಗತ್ಯತೆಗಳಿಗೆ ಅನುಗುಣವಾಗಿಯೇ ಇರುವುದನ್ನು ಈ ಕಾಲಾವಧಿಯ ಪತ್ರಿಕೆಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.
2000ದ ನಂತರದ ಮಾರುಕಟ್ಟೆ ಆರ್ಥಿಕತೆಯ ಬೆಳವಣಿಗೆಗಳ ನಡುವೆಯೇ ಕ್ಷಿಪ್ರಗತಿಯ/ಕ್ಷಣಕ್ಷಣದ ಸುದ್ದಿಯನ್ನು ಪ್ರಸರಿಸುವ ಸಾಮರ್ಥ್ಯವನ್ನು ಹೊತ್ತು ಪ್ರವೇಶಿಸಿದ ವಿದ್ಯುನ್ಮಾನ ಮಾಧ್ಯಮ ಸಮೂಹಗಳು ಆರಂಭದಿಂದಲೇ ಈ ಔದ್ಯಮಿಕ ಚೌಕಟ್ಟಿನೊಳಗೇ ಬೆಳೆದುಬಂದಿದ್ದು, ಕೆಲವೇ ಸಮೂಹಗಳು ತಮ್ಮ ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಕಾಪಾಡಿಕೊಂಡು ಬಂದಿದ್ದವು. ಮಾರುಕಟ್ಟೆ ಬಂಡವಾಳ ಹೂಡಿಕೆದಾರರ ಒಂದು ವರ್ಗವೇ ಮಾಧ್ಯಮ ವಲಯದಲ್ಲೂ ಬಂಡವಾಳ ಹೂಡಿಕೆಯಲ್ಲಿ ತೊಡಗುವ ಮೂಲಕ, ಪತ್ರಿಕಾ ವೃತ್ತಿಯನ್ನು ಅಕ್ಷರಶಃ ಪತ್ರಿಕೋದ್ಯಮವನ್ನಾಗಿ ಮಾಡಿದ್ದವು. ಮುದ್ರಣ ಮತ್ತು ದೃಶ್ಯ ಮಾಧ್ಯಮ ಸಮೂಹಗಳು ಬಂಡವಾಳ ಮಾರುಕಟ್ಟೆಯ ಒಂದು ಭಾಗವಾಗಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ರಾಜಕೀಯ ಪಕ್ಷಗಳ, ಆಡಳಿತಾರೂಢ ಸರಕಾರಗಳ ಮತ್ತು ಪ್ರಬಲ ಔದ್ಯಮಿಕ ಶಕ್ತಿಗಳ ನಿಯಂತ್ರಣಕ್ಕೊಳಪಡಬೇಕಾಯಿತು. ಈ ಪ್ರಕ್ರಿಯೆ ಚುರುಕಾದದ್ದು ನಾಲ್ಕನೇ ಔದ್ಯೋಗಿಕ ಕ್ರಾಂತಿಯ ಒಂದು ಪರಿಣಾಮ ಎಂತಲೂ ಹೇಳಬಹುದು. ಪತ್ರಿಕಾ ಧರ್ಮ ಅಥವಾ ವೃತ್ತಿಪರತೆ ಎನ್ನುವ ಪಾರಂಪರಿಕ ತಾತ್ವಿಕ ನೆಲೆಗಳೆಲ್ಲವೂ ಹಣಕಾಸು ಬಂಡವಾಳ ಮತ್ತು ಮಾರುಕಟ್ಟೆ ಆರ್ಥಿಕತೆಯ ಲಾಭ ನಷ್ಟಗಳ ಪರಿಧಿಯಲ್ಲಿ ಕೊಚ್ಚಿ ಹೋಗಿದ್ದನ್ನು ಕಳೆದ ಹತ್ತು ವರ್ಷಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.
2014ರ ನಂತರದ ಹಿಂದುತ್ವ ರಾಜಕಾರಣ ಮತ್ತು ಆಪ್ತ ಬಂಡವಾಳಶಾಹಿ ಆರ್ಥಿಕತೆಯ ವಾತಾವರಣದಲ್ಲಿ ಸಹಜವಾಗಿಯೇ ಮಾಧ್ಯಮ ಸಮೂಹಗಳು ತಮ್ಮ ವೃತ್ತಿಧರ್ಮವನ್ನೂ ಬದಿಗೊತ್ತಿ ಸರಕಾರದ ಪರ ಅಥವಾ ವಿರೋಧಿ ನಿಲುವಿಗೆ ಬದ್ಧವಾಗತೊಡಗಿದವು. ಮುದ್ರಣ ಮಾಧ್ಯಮದಲ್ಲೂ ತಮ್ಮ ಅಳಿವು-ಉಳಿವು ಸರಕಾರಗಳು ನೀಡುವ ಜಾಹೀರಾತುಗಳನ್ನೇ ಅವಲಂಬಿಸುವುದರಿಂದ ಪತ್ರಿಕೆಗಳು ಆಡಳಿತ ನೀತಿಗಳ ವಿರುದ್ಧ, ಕರಾಳ ಶಾಸನಗಳ ವಿರುದ್ಧ, ರಾಜಕೀಯ ಭ್ರಷ್ಟಾಚಾರದ ವಿರುದ್ಧ ವಸ್ತುನಿಷ್ಠ-ನಿಷ್ಪಕ್ಷ ನಿಲುವು ತಳೆಯಲಾಗದೆ, ಮೃದು ಧೋರಣೆ ತಳೆಯುವ ಮೂಲಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಮಾಧ್ಯಮ ಲೋಕದ ಮಾರುಕಟ್ಟೆ ನಿಯಮವಾಗಿ ಪರಿಣಮಿಸಿತು.
ಮಾಧ್ಯಮ ಸ್ವಾತಂತ್ರ್ಯ, ಸಂಪಾದಕೀಯ ಸ್ವಾಯತ್ತತೆ ಮತ್ತು ವಸ್ತುನಿಷ್ಠ ವರದಿಗಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದ ನೆಹರೂ ಕಾಲದ ಪತ್ರಿಕೋದ್ಯಮ ಬಹುಶಃ ತುರ್ತುಪರಿಸ್ಥಿತಿಯೊಂದಿಗೇ ಕೊನೆಗೊಂಡಿತೆಂದು ಹೇಳಬಹುದು. ಬಲಿಷ್ಠ ಸರಕಾರಗಳು ತಮ್ಮ ಸಾಂವಿಧಾನಿಕ ಸಾಂಸ್ಥಿಕ ಬಲವನ್ನೇ ಬಳಸಿಕೊಂಡು, ಸ್ವತಂತ್ರ ಮಾಧ್ಯಮಗಳ ಮೇಲೆ ಪರೋಕ್ಷ ನಿಯಂತ್ರಣ ಸಾಧಿಸುವ ಒಂದು ಪರಂಪರೆ ಆರಂಭವಾದದ್ದೇ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ಇಂದು ಈ ಪ್ರವೃತ್ತಿಯ ಪರಾಕಾಷ್ಠೆಯನ್ನು ನೋಡುತ್ತಿದ್ದೇವೆ. ಕೋಟ್ಯಂತರ ರೂ.ಗಳ ಬಂಡವಾಳ ಹೂಡಿಕೆಯೊಂದಿಗೆ ನೆಲೆ ಕಂಡುಕೊಳ್ಳುವ ವಿದ್ಯುನ್ಮಾನ-ಮುದ್ರಣ-ದೃಶ್ಯ ಮಾಧ್ಯಮಗಳು ತಮ್ಮ ಮಾರುಕಟ್ಟೆ ರೇಟಿಂಗ್(ಟಿಆರ್‌ಪಿ) ಉಳಿಸಿಕೊಳ್ಳುವ ಸಲುವಾಗಿ ಮನರಂಜನೆಯ ಸರಕುಗಳನ್ನೇ ಪ್ರಧಾನವಾಗಿ ಬಳಸಿಕೊಳ್ಳುವುದೂ ಸಹಜ ಪ್ರಕ್ರಿಯೆಯಾಯಿತು. ಹಾಗೆಯೇ ಜನಸಾಮಾನ್ಯರನ್ನು ಬಾಧಿಸುವ ಜಟಿಲ ಸಮಸ್ಯೆಗಳನ್ನೂ, ಸವಾಲುಗಳನ್ನೂ, ಜನರ ಜೀವನ ಮತ್ತು ಜೀವನೋಪಾಯವನ್ನು ಕಾಡುವ ಜ್ವಲಂತ ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ವ್ಯವಧಾನವನ್ನೂ ಸಂಪಾದಕೀಯ ಲೋಕ ಕಳೆದುಕೊಂಡಿತ್ತು.
ಇದರ ನೇರ ಪರಿಣಾಮವನ್ನು ಭಾರತ ಇಂದು ಎದುರಿಸುತ್ತಿದೆ. ಕೇಂದ್ರ ಅಥವಾ ರಾಜ್ಯ ಸರಕಾರಗಳು ಮಾಧ್ಯಮಗಳನ್ನು ನಿಯಂತ್ರಿಸಲು ತಮ್ಮದೇ ಆದ ಸಾಂವಿಧಾನಿಕ/ಅಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳುವುದು ಒಂದೆಡೆಯಾದರೆ, ಮತ್ತೊಂದೆಡೆ ಮಾಧ್ಯಮ ಸಮೂಹಗಳ ಒಡೆತನವು ಬಹುಮಟ್ಟಿಗೆ ಮಾರುಕಟ್ಟೆ ಆರ್ಥಿಕತೆಯನ್ನು ಪ್ರತಿನಿಧಿಸುವ ಬಂಡವಾಳಿಗರ ನಿಯಂತ್ರಣದಲ್ಲೇ ಇರುವುದರಿಂದ ತಮ್ಮ ಭದ್ರಕೋಟೆಗಳನ್ನು ಉಳಿಸಿಕೊಳ್ಳಲು ಸರಕಾರಗಳ ಪರ ನಿಲ್ಲುವ ಪ್ರವೃತ್ತಿಯೂ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ಎನ್‌ಡಿಟಿವಿ ಪ್ರಸಂಗ ಒಂದು ಸ್ಪಷ್ಟ ಉದಾಹರಣೆಯಾಗಿ ನಮ್ಮ ಮುಂದಿದೆ. ನೇರ-ದಿಟ್ಟ-ನಿರಂತರ-ನಿಷ್ಪಕ್ಷ ಇವೇ ಮುಂತಾದ ಆಕರ್ಷಕ ಘೋಷಣೆಗಳ ನಡುವೆಯೇ ದೃಶ್ಯ ಮಾಧ್ಯಮದ ಸುದ್ದಿಮನೆಗಳು ಹೇಗೆ ಜನಸಾಮಾನ್ಯರ ಕಾಳಜಿಗಳನ್ನು ಕಣ್ಣೆತ್ತಿಯೂ ನೋಡದೆ, ಸರಕಾರಗಳ ಆಡಳಿತ ನೀತಿಗಳನ್ನು ಬೆಂಬಲಿಸುತ್ತಿವೆ ಎನ್ನುವುದನ್ನು ಗಮನಿಸಿದಾಗ, ಮಾರುಕಟ್ಟೆ ಬಂಡವಾಳದ ತಂತ್ರಗಾರಿಕೆಯೂ ಅರ್ಥವಾಗುತ್ತದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಇದರ ಪ್ರಾತ್ಯಕ್ಷಿಕೆಯನ್ನೇ ನೋಡಿದ್ದೇವೆ. ಈ ಬೆಳವಣಿಗೆಗಳ ನಡುವೆಯೇ ಬಹುತೇಕ ಮಾಧ್ಯಮ ಸಮೂಹಗಳು ಸ್ವಯಂ ನಿರ್ಬಂಧಕ್ಕೊಳಪಟ್ಟು ಅನುಕೂಲಕರ ರಾಜಕೀಯ ನಿಲುವುಗಳೊಡನೆ ತಮ್ಮ ಅಸ್ತಿತ್ವವನ್ನೂ ಉಳಿಸಿಕೊಂಡು ಬರುತ್ತಿವೆ.
ಮೀಡಿಯಾ ಒನ್ ವಾಹಿನಿಯ ಸ್ವಾಗತಾರ್ಹ ಗೆಲುವು
ಮೀಡಿಯಾ ಒನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಈ ಹಿನ್ನೆಲೆಯಲ್ಲೇ ಸ್ವಾಗತಿಸಬೇಕಿದೆ. 2020ರ ದಿಲ್ಲಿ ಗಲಭೆಗಳ ವರದಿಗಾರಿಕೆಯ ಹಿನ್ನೆಲೆಯಲ್ಲಿ ಕೇರಳದ ಮೀಡಿಯಾ ಒನ್ ಮಲಯಾಳಿ ವಾಹಿನಿಯನ್ನು ಕೇಂದ್ರ ಸರಕಾರ 48 ಗಂಟೆಗಳ ಕಾಲ ನಿಷೇಧಿಸಿತ್ತು. ತದನಂತರ ಜಮಾಅತೆ ಇಸ್ಲಾಮಿ ಸಂಘಟನೆಯೊಡನೆ ಸಂಪರ್ಕ ಹೊಂದಿರುವುದರಿಂದ ಕೇಂದ್ರ ಸರಕಾರವು 2022ರಲ್ಲಿ ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಮೀಡಿಯಾ ಒನ್ ವಾಹಿನಿಯ ಪರವಾನಿಗೆಯನ್ನು ನವೀಕರಿಸಲು ನಿರಾಕರಿಸಿತ್ತು. ಸರಕಾರದ ನಿರ್ಧಾರದ ವಿರುದ್ಧ ಮೀಡಿಯಾ ಒನ್ ಸಂಸ್ಥೆಯ ಮನವಿಯನ್ನು ಪುರಸ್ಕರಿಸಿದ್ದ ಕೇರಳ ಹೈಕೋರ್ಟ್ ಕೇಂದ್ರ ಸರಕಾರದ ಈ ಕ್ರಮವನ್ನು ವಿಚಾರಣೆಗೊಳಪಡಿಸಿದರೂ ಸರಕಾರ ಸಲ್ಲಿಸಿದ ವಿವರಗಳು ಮುಚ್ಚಿದ ಲಕೋಟೆಯಲ್ಲಿದ್ದುದರಿಂದ, ಪರವಾನಿಗೆಯನ್ನು ನಿರಾಕರಿಸಲು ಸರಕಾರ ಮಂಡಿಸಿದ ಕಾರಣಗಳನ್ನೂ ತಿಳಿಯಲು ಸಾಧ್ಯವಾಗದೆ, ಸರಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು.
ಹಾಗಾಗಿ ಮೀಡಿಯಾ ಒನ್ ನಿಷೇಧಕ್ಕೊಳಪಟ್ಟಿತ್ತು. ತನ್ನ ಮಹತ್ವದ ತೀರ್ಪಿನ ಮೂಲಕ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿ, ಮೀಡಿಯಾ ಒನ್ ವಾಹಿನಿಯ ಪರವಾನಿಗೆಯನ್ನು ನವೀಕರಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿದೆ. ಈ ತೀರ್ಪಿನ ಮೂಲಕ ಸುಪ್ರೀಂ ಕೋರ್ಟ್ ನೀಡಿರುವ ಸಂದೇಶವು ಭಾರತದ ಮಾಧ್ಯಮ ಕ್ಷೇತ್ರಕ್ಕೆ ಆಶಾದಾಯಕವಾಗಿ ಕಾಣುತ್ತದೆ. ಸರಕಾರದ ಆಡಳಿತ ನೀತಿಗಳನ್ನು ಟೀಕಿಸುವುದು, ವಿರೋಧಿಸುವುದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಒಂದು ಭಾಗವಾಗಿದ್ದು ಇದು ಮಾಧ್ಯಮಗಳಿಗೂ ಸಮನಾಗಿ ಅನ್ವಯಿಸುತ್ತದೆ ಎಂಬ ಅಂಶವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಸರಕಾರದ ವಿರುದ್ಧ ಇದ್ದ ಮಾತ್ರಕ್ಕೆ ಪ್ರಜೆಗಳ ಅಥವಾ ಪ್ರಜೆಗಳನ್ನು ಪ್ರತಿನಿಧಿಸುವ ಮಾಧ್ಯಮಗಳ ಹಕ್ಕುಗಳನ್ನು ನಿರ್ಬಂಧಿಸಲಾಗುವುದಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಆಡಳಿತಾರೂಢ ಸರಕಾರವನ್ನು ರಾಷ್ಟ್ರದೊಡನೆ ಸಮೀಕರಿಸುವುದು ಸರಿಯಲ್ಲ ಎಂದೂ ಹೇಳಿದೆ.
ಹಾಗಾಗಿ ಸರಕಾರದ ವಿರೋಧಿಗಳನ್ನು ರಾಷ್ಟ್ರವಿರೋಧಿಗಳೆಂದು ಬಿಂಬಿಸುವ ಇತ್ತೀಚಿನ ಪರಿಪಾಠವನ್ನೂ ನ್ಯಾಯಾಲಯವು ಪ್ರಶ್ನಿಸಿದೆ. ''ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಇರುವಂತಹ ಸಾಂವಿಧಾನಿಕ ಆಯ್ಕೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮಾಧ್ಯಮದ ಕರ್ತವ್ಯ'' ಎಂದು ಮಾರ್ಮಿಕವಾಗಿ ಹೇಳಿರುವ ಸುಪ್ರೀಂಕೋರ್ಟ್ ನ್ಯಾಯಪೀಠ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವುದರಿಂದ ನಾಗರಿಕರೂ ಅದೇ ದಿಕ್ಕಿನಲ್ಲಿ ಯೋಚಿಸುವಂತೆ ಪ್ರೇರೇಪಿಸುತ್ತದೆ ಎಂದು ಹೇಳಿದೆ. ಮುಂದುವರಿದು ''ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಿದ್ಧಾಂತಗಳ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಏಕರೂಪದ ದೃಷ್ಟಿಕೋನದಿಂದ ನೋಡುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವನ್ನೊಡ್ಡುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ವಾಹಿನಿಯೊಂದರ ಪರವಾನಿಗೆ ನವೀಕರಿಸದೆ ಇರುವುದು ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಿದಂತಾಗುತ್ತದೆ '' ಎಂದು ನ್ಯಾ. ಡಿ. ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿರುವುದು ಸ್ವಾಗತಾರ್ಹವಾಗಿದೆ.
ಇದು ಒಂದು ನಿರ್ದಿಷ್ಟ ವಾಹಿನಿಯ ಸ್ವಾತಂತ್ರ್ಯ ಅಥವಾ ನಿರ್ಬಂಧದ ಪ್ರಶ್ನೆ ಅಲ್ಲ. ಇತ್ತೀಚೆಗೆ ಕರ್ನಾಟಕದ ಸಂಸದರೊಬ್ಬರು ರಾಜ್ಯದ ಪ್ರಮುಖ ಪತ್ರಿಕಾ ಸಮೂಹವನ್ನು ಖರೀದಿಸಿ ಸರಿಪಡಿಸುವುದಾಗಿ ಹೇಳಿರುವುದನ್ನು ಗಮನಿಸಿದರೆ, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಅಡಿಪಾಯ ಏಕೆ ಶಿಥಿಲವಾಗುತ್ತಿದೆ ಎಂದೂ ಅರ್ಥವಾಗುತ್ತದೆ. ತಮ್ಮ ಮಾರುಕಟ್ಟೆ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ತಾವು ಹೂಡಿರುವ ಬಂಡವಾಳವನ್ನು ರಕ್ಷಿಸಿಕೊಳ್ಳಲು ಸರಕಾರದ ಆಡಳಿತ ನೀತಿಗಳ ಪರವಾಗಿಯೇ ವರ್ತಿಸುವ ಔದ್ಯಮಿಕ ಸಮೂಹಗಳು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸಮೂಹಗಳ ಮೇಲೆಯೂ ಒಡೆತನ ಸಾಧಿಸುವ ಮೂಲಕ ಸಾರ್ವಜನಿಕ ಅಭಿಪ್ರಾಯಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉತ್ಪಾದಿಸುವ ಬೌದ್ಧಿಕ ಕಾರ್ಖಾನೆಗಳಾಗುತ್ತವೆ. ''ಅಭಿಪ್ರಾಯ ಸಂಗ್ರಹ, ವಿಷಯ ಪ್ರಸರಣ ಮತ್ತು ವಿಚಾರ ವಿನಿಮಯ'' ಈ ನಿಯಮಗಳನ್ನು ಗಾಳಿಗೆ ತೂರಿರುವ ದೃಶ್ಯ ಮಾಧ್ಯಮಗಳು ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸುವ ಸಾಧನಗಳಾಗಿರುವುದನ್ನು ಈ ಮಾರುಕಟ್ಟೆ ಆರ್ಥಿಕತೆಯ ಚೌಕಟ್ಟಿನಲ್ಲೇ ವಿಶ್ಲೇಷಿಸಬೇಕಾಗಿದೆ.
ಆಡಳಿತಾರೂಢ ಸರಕಾರದ ಒತ್ತಡಗಳಿಗೆ ಅಥವಾ ನಿರ್ಬಂಧಗಳಿಗೆ ಮಣಿಯುವುದಕ್ಕಿಂತಲೂ ಹೆಚ್ಚಾಗಿ ಬಹುಪಾಲು ವಿದ್ಯುನ್ಮಾನ ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕಾ ಸಮೂಹಗಳು ಸ್ವತಃ ಸ್ವಯಂ ನಿರ್ಬಂಧಗಳನ್ನು ವಿಧಿಸಿಕೊಂಡು, ತಮ್ಮ ಮಾರುಕಟ್ಟೆ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಜ್ಜಾಗಿರುವುದನ್ನು ವಿಷಾದದಿಂದಲೇ ಗಮನಿಸಬೇಕಿದೆ. ಸ್ವತಂತ್ರ-ಸ್ವಾಯತ್ತ ಪತ್ರಿಕಾ ಮಾಧ್ಯಮಗಳ ಸಂಖ್ಯೆಯೂ ಕ್ಷೀಣಿಸುತ್ತಿದ್ದು ಕೆಲವೇ ಪತ್ರಿಕಾ ಸಮೂಹಗಳು ವೃತ್ತಿಪರತೆಯನ್ನು ಉಳಿಸಿಕೊಂಡಿವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಸ್ಪರ್ಧಾತ್ಮಕತೆಯೂ ಮುಖ್ಯವಾಗುವುದರಿಂದ, ಮಾರುಕಟ್ಟೆ ಸ್ಪರ್ಧೆಯಲ್ಲಿ ಉಳಿದುಕೊಳ್ಳಲು ತಮ್ಮ ತಾತ್ವಿಕ ನಿಲುವುಗಳನ್ನೂ ರಾಜಿ ಮಾಡಿಕೊಳ್ಳುವ ಒತ್ತಡದಲ್ಲಿ ಪತ್ರಿಕಾ ಸಮೂಹಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಹಿನಿಯ/ಪ್ರಾದೇಶಿಕ ಪತ್ರಿಕೆಗಳ ಸಂಪಾದಕೀಯ ಪುಟಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಈ ಸ್ವಯಂ ನಿರ್ಬಂಧದಿಂದ ಆಚೆಗೆ ಬಂದು, ಪತ್ರಿಕಾ ಧರ್ಮ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮಾಧ್ಯಮ ವಲಯದ ಮೇಲಿದೆ.
ಮಾರುಕಟ್ಟೆ ತಂತ್ರಗಾರಿಕೆಗಳ ಪರಿಣಾಮ ವಿಘಟಿತವಾಗಿರುವ ಮಾಧ್ಯಮ ವಲಯ ಸೈದ್ಧಾಂತಿಕ-ತಾತ್ವಿಕ ನಿಲುವುಗಳ ಹೊರತಾಗಿಯೂ ತನ್ನ ಸ್ವಂತಿಕೆ ಮತ್ತು ಸ್ವಾಯತ್ತತೆಯನ್ನು ಕಳೆದುಕೊಂಡಿರುವುದರಿಂದಲೇ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಅಡಿಪಾಯ ಶಿಥಿಲವಾಗುತ್ತಿದೆ ಎಂಬ ಆತಂಕವೂ ಹೆಚ್ಚಾಗುತ್ತಿದೆ. ಈ ಜಟಿಲ-ಸಂಕೀರ್ಣ ಸಮಸ್ಯೆಯ ಮೂಲ ಇರುವುದು ಮಾರುಕಟ್ಟೆಯ ಆವರಣದಲ್ಲಿ, ಸಮಸ್ಯೆಗೆ ಪರಿಹಾರ ಇರುವುದು ಸಾಮಾನ್ಯ ಜನರ ಅಂಗಳದಲ್ಲಿ. ಯಾವುದನ್ನು ಆಯ್ಕೆ ಮಾಡುವುದು? ಇದು ವಿವೇಚನೆಗೆ ಬಿಟ್ಟ ವಿಚಾರ.