×
Ad

ಗೋಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟಿರಿಯಾ, ಮಾನವ ಸೇವನೆಗೆ ಯೋಗ್ಯವಲ್ಲ: ಐವಿಆರ್‌ಐ ಅಧ್ಯಯನ

Update: 2023-04-11 20:09 IST

ಹೊಸದಿಲ್ಲಿ: ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (IVRI) ಇತ್ತೀಚಿನ ಅಧ್ಯಯನವು, “ಗೋಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಅದು ಮಾನವನ ಸೇವನೆಗೆ ಯೋಗ್ಯವಲ್ಲ” ಎಂದು ಹೇಳಿದೆ.

ಹಸುಗಳು ಮತ್ತು ಗೂಳಿಗಳ ಮೂತ್ರದ ಮಾದರಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ, ಕನಿಷ್ಠ 14 ವಿಧದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಂಡುಹಿಡಿದಿದೆ, ಇದರಲ್ಲಿ ಎಸ್ಚೆರಿಚಿಯಾ ಕೋಲಿ ಬ್ಯಾಕ್ಟೀರಿಯಂ ಕೂಡಾ ಸೇರಿದೆ. ಈ ಬ್ಯಾಕ್ಟೀರಿಯವು ಸಾಮಾನ್ಯವಾಗಿ ಮನುಷ್ಯರ ಹೊಟ್ಟೆಯ ಸೋಂಕಿಗೆ ಕಾರಣವಾಗುತ್ತದೆ ಎಂದು thewire.in ವರದಿ ಮಾಡಿದೆ.

ಇನ್‌ಸ್ಟಿಟ್ಯೂಟ್‌ನಲ್ಲಿ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥರು ಹಾಗೂ ಅವರ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ಜೂನ್ 2022 ಮತ್ತು ನವೆಂಬರ್ 2022 ರ ನಡುವೆ ಸಂಶೋಧನೆ ನಡೆಸಿದ್ದು, ಈ ಸಂಶೋಧನೆಗಾಗಿ ಸ್ಥಳೀಯ ಡೈರಿ ಫಾರ್ಮ್‌ಗಳಿಂದ ಮೂರು ವಿಧದ ಹಸುಗಳಾದ ಥಾರ್ಪಾರ್ಕರ್, ಸಾಹಿವಾಲ್ ಮತ್ತು ವಿಂದಾವಾಣಿ (ಅಡ್ಡ ತಳಿ) ತಳಿಗಳ ಮೂತ್ರಗಳನ್ನು ಬಳಸಿ ಸಂಶೋಧನೆ ನಡೆಸಿದರು.

ಹಸುಗಳು, ಎಮ್ಮೆಗಳು ಮತ್ತು ಮಾನವರ 73 ಮೂತ್ರದ ಮಾದರಿಗಳ ಅಂಕಿಅಂಶಗಳ ವಿಶ್ಲೇಷಣೆಯು ಎಮ್ಮೆ ಮೂತ್ರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಚಟುವಟಿಕೆಯು ಹಸುಗಳಿಗಿಂತ ಹೆಚ್ಚು ಉತ್ತಮವಾಗಿದೆ ಎಂದು ಸೂಚಿಸುತ್ತದೆ. ಎಮ್ಮೆಯ ಮೂತ್ರವು ಎಸ್ ಎಪಿಡರ್ಮಿಡಿಸ್ ಮತ್ತು ಇ ರಾಪಾಂಟಿಸಿಯಂತಹ ಬ್ಯಾಕ್ಟೀರಿಯಾಗಳ ಮೇಲೆ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಭೋಜ್ ರಾಜ್ ಸಿಂಗ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಟ್ರೇಡ್‌ಮಾರ್ಕ್‌ನ ಇಲ್ಲದೆ, ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ದೇಶದಲ್ಲಿ ಗೋಮೂತ್ರ ವ್ಯಾಪಕವಾಗಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಗೋಮೂತ್ರದ ಕುರಿತ ಸಂಶೋಧನೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಗೋಮೂತ್ರವನ್ನು ಕುಡಿಯಲು ಹಲವು ಹಿಂದುತ್ವ ಸಂಘಟನೆಗಳು ಶಿಫಾರಸು ಮಾಡಿದ್ದವು.

ಇದನ್ನೂ ಓದಿ: ಜಾನುವಾರು ಮಾರಾಟಕ್ಕೂ ಆನ್‌ಲೈನ್‌ ವೇದಿಕೆ: 500 ಕೋಟಿ ರೂ. ಸಂಸ್ಥೆಯ ಮಾಲಕರಾದ ವಿದ್ಯಾರ್ಥಿಗಳು

Similar News