×
Ad

ಐಪಿಎಲ್ ಮಾಲಕರಿಗೆ ದೇಶದಲ್ಲಿ 'ವಿಶ್ವದ ಶ್ರೀಮಂತ ಟಿ-20 ಲೀಗ್' ಸ್ಥಾಪಿಸುವ ಅವಕಾಶ ನೀಡಿದ ಸೌದಿ ಅರೇಬಿಯ: ವರದಿ

Update: 2023-04-14 15:03 IST

ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ವಿಶ್ವದ ಅತ್ಯಂತ ಲಾಭದಾಯಕ ಟಿ20 ಲೀಗ್ ಆಗಿ ಉಳಿದಿದೆ. ಹಣಕಾಸು, ವಿಶ್ವದರ್ಜೆಯ ಆಟಗಾರರ ಭಾಗವಹಿಸುವಿಕೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿನ ಜನಪ್ರಿಯತೆಯ ವಿಚಾರದಲ್ಲಿ ಜಗತ್ತಿನಾದ್ಯಂತ ಇತರ ಟಿ-20 ಲೀಗ್‌ಗಳಿಗೆ ಹೋಲಿಸಿದರೆ ಐಪಿಎಲ್ ಗೆ ಯಾವುದೂ ಸಾಟಿಯಿಲ್ಲ. ಆದಾಗ್ಯೂ, ಸೌದಿ ಅರೇಬಿಯಾವು ಐಪಿಎಲ್ ಮಾಲಿಕರಿಗೆ "ವಿಶ್ವದ ಶ್ರೀಮಂತ ಟಿ- 20 ಲೀಗ್" ಅನ್ನು ತನ್ನ ದೇಶದಲ್ಲಿ ಸ್ಥಾಪಿಸಲು ಅವಕಾಶ ನೀಡಲು ಬಯಸಿರುವುದರಿಂದ ಶೀಘ್ರದಲ್ಲೇ ಎಲ್ಲವೂ ಬದಲಾಗಬಹುದು. ಫುಟ್ಬಾಲ್ ಹಾಗೂ  ಫಾರ್ಮುಲಾ 1 ನಂತಹ ಇತರ ಕ್ರೀಡೆಗಳಲ್ಲಿ ಹೆಚ್ಚು ಹೂಡಿಕೆ ಮಾಡಿರುವ  ಸೌದಿ ಅರೇಬಿಯಾ ಈಗ ಕ್ರಿಕೆಟ್ ಮೇಲೆ ತನ್ನ ಕಣ್ಣು ನೆಟ್ಟಿದೆ ಎಂದು ವರದಿಯಾಗಿದೆ.

ಪ್ರಸ್ತುತ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತೀಯ ಆಟಗಾರರು ವಿದೇಶಗಳಲ್ಲಿ ಲೀಗ್‌ಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುತ್ತದೆ. ಆದಾಗ್ಯೂ, ಸೌದಿ ಅರೇಬಿಯಾ ಸರಕಾರ  ಹೊಸ ಟಿ-20 ಲೀಗ್ ಅನ್ನು ಸ್ಥಾಪಿಸುವ ಪ್ರಸ್ತಾಪ ಮುಂದಿಟ್ಟಿರುವುದರಿಂದ  ಈ ವಿಷಯದಲ್ಲಿ ಬಿಸಿಸಿಐ  ತನ್ನ ನಿಲುವನ್ನು ಬದಲಾಯಿಸುವುದೇ? ಎಂದು ಕಾದು ನೋಡಬೇಕಾಗಿದೆ.

“ದಿ ಏಜ್‌’’ ನ ವರದಿಯ ಪ್ರಕಾರ ಸುಮಾರು ಒಂದು ವರ್ಷದಿಂದ ಈ ವಿಷಯದ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಆದರೆ, ಏನಾದರೂ ಬೆಳವಣಿಗೆ ನಡೆಯಬೇಕಾದರೆ  ಲೀಗ್ ಅನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅನುಮೋದಿಸಬೇಕಾಗುತ್ತದೆ. ಬಹಳ ಹಿಂದೆಯೇ  ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು ಕ್ರಿಕೆಟ್‌ನಲ್ಲಿ ಸೌದಿ ಅರೇಬಿಯಾದ ಆಸಕ್ತಿಯನ್ನು ದೃಢಪಡಿಸಿದ್ದರು.

"ನೀವು ಅವರು ತೊಡಗಿಸಿಕೊಂಡಿರುವ ಇತರ ಕ್ರೀಡೆಗಳನ್ನು ನೋಡಿದರೆ, ಕ್ರಿಕೆಟ್ ಅವರಿಗೆ ಆಕರ್ಷಕವಾಗಿದೆ ಎಂದು ನಾನು ಭಾವಿಸುತ್ತೇನೆ. ಸಾಮಾನ್ಯವಾಗಿ ಕ್ರೀಡೆಯಲ್ಲಿ ಅವರ ಪ್ರಗತಿಯನ್ನು ಗಮನಿಸಿದರೆ ಸೌದಿ ಅರೇಬಿಯಾಕ್ಕೆ ಕ್ರಿಕೆಟ್ ಚೆನ್ನಾಗಿ ಕೆಲಸ ಮಾಡುತ್ತದೆ'' ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಹೇಳಿದ್ದಾರೆ.

ವರದಿಯ ಪ್ರಕಾರ, ಸೌದಿ ಸರಕಾರ ಹಾಗೂ  ವ್ಯವಹಾರಗಳ ಹಲವಾರು ಪ್ರತಿನಿಧಿಗಳು ಭಾರತದ ಕ್ರಿಕೆಟ್ ಚಟುವಟಿಕೆಗಳ ಸುತ್ತ ಗುರುತಿಸಿಕೊಂಡಿದ್ದಾರೆ.  ತಮ್ಮ ಯೋಜಿತ ಟ್ವೆಂಟಿ-20 ಲೀಗ್‌ ಗೆ  ಐಪಿಎಲ್ ಮಾಲಿಕರು ಹಾಗೂ ಬಿಸಿಸಿಐ ಅನ್ನು ಶಾಮೀಲುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

Similar News