×
Ad

ಪುಲ್ವಾಮಾ ಕುರಿತು ಸತ್ಯಪಾಲ್ ಮಲಿಕ್ ಹೇಳಿಕೆಗೆ ದೇಶವೇ ಬೆಚ್ಚಿಬಿದ್ದಿದೆ: ಕಾಂಗ್ರೆಸ್‌

"ಕೇಂದ್ರ ಸರ್ಕಾರ ವಿಮಾನ ನೀಡಿದ್ದರೆ 40 ಯೋಧರ ಪ್ರಾಣ ಉಳಿಯುತ್ತಿತ್ತು"

Update: 2023-04-15 21:11 IST

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದೆ. 

“ನರೇಂದ್ರ ಮೋದಿಜಿ ನಿಮ್ಮ ಸರ್ಕಾರದ ತಪ್ಪಿನಿಂದಾಗಿ ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾಗಬೇಕಾಯಿತು. ನಮ್ಮ ಯೋಧರಿಗೆ ಏರ್‌ಕ್ರಾಫ್ಟ್ ಸಿಕ್ಕಿದ್ದರೆ ಉಗ್ರರ ಸಂಚು ವಿಫಲವಾಗುತ್ತಿತ್ತು. ಈ ಬಹುದೊಡ್ಡ ತಪ್ಪಿಗೆ ಕ್ರಮ ತೆಗೆದುಕೊಳ್ಳುವ ಬದಲು ನೀವು ವಿಷಯವನ್ನು ನಿಗ್ರಹಿಸಿ ನಿಮ್ಮ ಇಮೇಜ್‌ಗೆ ಧಕ್ಕೆ ಆಗದಂತೆ ನೋಡಿಕೊಂಡಿರಿ. ಪುಲ್ವಾಮಾ ಕುರಿತು ಸತ್ಯಪಾಲ್ ಮಲಿಕ್ ಹೇಳಿಕೆ ಕೇಳಿ ದೇಶವೇ ಬೆಚ್ಚಿಬಿದ್ದಿದೆ” ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ಮೋದಿ ಸರ್ಕಾರದ ಅಸಮರ್ಥತೆಯಿಂದಲೇ 2019ರ ಪುಲ್ವಾಮ ದಾಳಿಯಲ್ಲಿ 40 ಭಾರತೀಯ ಸೈನಿಕರು ಹುತಾತ್ಮರಾಗಬೇಕಾಯಿತು ಎಂದು ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಯ ವಿಡಿಯೋ ತುಣುಕುಗಳು ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನರೇಂದ್ರ ಮೋದಿಯವರ ಮೇಲೆ ಟೀಕಾಸ್ತ್ರ ಹೂಡಿದೆ. 
 
ಪತ್ರಕರ್ತ ಕರಣ್ ಥಾಪರ್‌ ರವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸತ್ಯಪಾಲ್‌ ಮಲಿಕ್, “ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯು ಭಾರತೀಯ ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯ. ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅಸಮರ್ಥತೆಯ ಪರಿಣಾಮದಿಂದ ಈ ದಾಳಿ ನಡೆದಿದೆ. ಆಗ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಸಿಆರ್‌ಪಿಎಫ್ ತನ್ನ ಜವಾನರನ್ನು ಸಾಗಿಸಲು ಏರ್‌ಕ್ರಾಫ್ಟ್‌ ಅನ್ನು ಕೇಳಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತ್ತು” ಎಂದು ಸತ್ಯಪಾಲ್ ಆರೋಪಿಸಿದ್ದಾರೆ.

Similar News