×
Ad

ಮೀಸಲು ಕ್ಷೇತ್ರಗಳ ಚುನಾವಣಾ ರಾಜಕೀಯ

Update: 2023-04-16 12:33 IST

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೀಸಲು ಕ್ಷೇತ್ರಗಳ ಚುನಾವಣೆ ರಾಜಕೀಯ ಮಹತ್ವ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಒಟ್ಟು 224 ಕ್ಷೇತ್ರಗಳಿದ್ದು ಪರಿಶಿಷ್ಟ ಜಾತಿಗೆ-36 ಮತ್ತು ಪರಿಶಿಷ್ಟ ಪಂಗಡಕ್ಕೆ-15 ಸೇರಿ ಒಟ್ಟು 51 ಮೀಸಲು ಕ್ಷೇತ್ರಗಳಿವೆ. ಕ್ಷೇತ್ರ ಪುನರ್ವಿಂಗಡಣಾ ಆಯೋಗವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯ ಆಧಾರದ ಮೇಲೆ ಈ ಮೀಸಲು ಕ್ಷೇತ್ರಗಳನ್ನು ಆಯ್ಕೆ ಮಾಡಿದೆ. ಈ ಕ್ಷೇತ್ರಗಳಿಂದ ಎಸ್ಸಿಯಲ್ಲಿನ 101 ಉಪಜಾತಿ ಮತ್ತು ಎಸ್ಟಿಯಲ್ಲಿರುವ 51 ಉಪಜಾತಿಗೆ ಸೇರಿದ ಯಾವುದೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಲು ಮುಕ್ತ ಅವಕಾಶವಿದೆ.

2014ರ ವಿಧಾನಸಭೆ ಚುನಾವಣೆಯಲ್ಲಿ 51 ಮೀಸಲು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷವು 17 ಎಸ್ಸಿ ಮತ್ತು 9 ಎಸ್ಟಿ ಅಭ್ಯರ್ಥಿಗಳ ಗೆಲುವಿನ ಸಹಾಯದಿಂದ ಸರಕಾರ ರಚಿಸಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 16 ಎಸ್ಸಿ, 6 ಎಸ್ಟಿ, ಕಾಂಗ್ರೆಸ್ 12 ಎಸ್ಸಿ, 8 ಎಸ್ಟಿ, ಜೆಡಿಎಸ್ 6 ಎಸ್ಸಿ, 1 ಎಸ್ಟಿ, ಬಿಎಸ್ಪಿ 1 ಮತ್ತು ಇತರ 1 ಕ್ರಮವಾಗಿ ಮೀಸಲು ಕ್ಷೇತ್ರಗಳಲ್ಲಿ ಜಯಗಳಿಸಿವೆ. ಮೊದಲು ಕಾಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ನಂತರ 2019ರಲ್ಲಿ ಬಿಜೆಪಿ ಸರಕಾರ ರಚನೆಯಲ್ಲಿ ಮೀಸಲು ಕ್ಷೇತ್ರಗಳು ಪ್ರಮುಖ ಪಾತ್ರ ವಹಿಸಿವೆ. ಹಾಗಾಗಿ ಯಾವುದೇ ರಾಜಕೀಯ ಪಕ್ಷ ಸರಕಾರ ರಚನೆ ಮಾಡುವಲ್ಲಿ ಮೀಸಲು ಕ್ಷೇತ್ರಗಳು ನಿರ್ಣಾಯಕ ಪಾತ್ರವಹಿಸುತ್ತ ಬಂದಿವೆ. ಇಲ್ಲಿಯ ಚುನಾವಣಾ ರಾಜಕೀಯ ಮೇಲ್ನೋಟಕ್ಕೆ ಸಾಮಾನ್ಯವಾಗಿ ಕಂಡು ಬಂದರೂ ಹಲವಾರು ವಿಶೇಷತೆಗಳು ಇಲ್ಲಿ ಗಮನ ಸೆಳೆಯುತ್ತವೆ. ಹಾಗಾಗಿ ಇಲ್ಲಿಯ ಮತದಾರನ ನಡವಳಿಕೆ ಕುರಿತ ಅಧ್ಯಯನವು 2023ರ ರಾಜ್ಯ ರಾಜಕೀಯದ ದೃಷ್ಟಿಯಿಂದ ಮುಖ್ಯ ಮತ್ತು ಪ್ರಸ್ತುತವಾಗಿದೆ.

ದಲಿತರಲ್ಲೇ ಉಳ್ಳವರು ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿ ಚುನಾವಣೆಯಲ್ಲಿಯೂ ಗೆಲುವು ಪಡೆಯುತ್ತಾರೆ. ಇವರು ರಾಜಕೀಯ ಅಧಿಕಾರಕ್ಕಾಗಿ ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ. ಎಲ್ಲಾ ಸಾಮಾನ್ಯ ಕ್ಷೇತ್ರಗಳಲ್ಲಿರುವಂತೆ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಎಡಗೈ, ಬಲಗೈ ಹಾಗೂ ಸ್ಪಶ್ಯ ಸಮುದಾಯಗಳಲ್ಲಿ ಒಡಕಿದೆ. ರಾಜಕೀಯ ಭಾಗವಹಿಸುವಿಕೆಯಲ್ಲಿ ದಲಿತೇತರರ ನಿರಾಸಕ್ತಿ ಮತ್ತು ಅಸಮಾಧಾನ, ಪ್ರಬಲ ದಲಿತ ನಾಯಕತ್ವದ ಕೂರತೆ ಹಾಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಮೀಸಲು ಕ್ಷೇತ್ರಗಳ ಉದ್ದೇಶ ಮತ್ತು ಆಶಯಕ್ಕೆ ಧಕ್ಕೆಯಾಗಿವೆ.

ಮತದಾನ ನಡವಳಿಕೆ

ಸಾಮಾನ್ಯ ಕ್ಷೇತ್ರಗಳಿಗಿಂತ ಭಿನ್ನವಾದ ರಾಜಕೀಯ ಪ್ರಕ್ರಿಯೆ ಮೀಸಲು ಕ್ಷೇತ್ರಗಳಲ್ಲಿ ನಡೆಯುತ್ತದೆ, ಈ ಕ್ಷೇತ್ರಗಳಲ್ಲಿ ದಲಿತ ಮತ್ತು ದಲಿತೇತರ ಮತದಾರರ ನಡವಳಿಕೆಯಲ್ಲಿ ಮೂರು ಬಗೆಯ ಸ್ವಭಾವಗಳನ್ನು ಗುರುತಿಸಬಹುದು. ಚುನಾವಣೆಯಲ್ಲಿ ವ್ಯಕ್ತಿಗಿಂತ ಮುಖ್ಯವಾಗಿ ಪಕ್ಷ ನೋಡಿ ಮತ ನೀಡುವ ಪ್ರಮಾಣ ಹೆಚ್ಚಾಗಿರುತ್ತದೆ.

ವಿಶೇಷವಾಗಿ ಕಂಡುಬರುವ ಅಂಶವೆಂದರೆ, ಮೀಸಲು ಕ್ಷೇತ್ರಗಳಲ್ಲಿ ದಲಿತ ಮತಗಳು ನಿರ್ಣಾಯಕ ಪಾತ್ರವಹಿಸುವುದಿಲ್ಲ. ಏಕೆಂದರೆ ಎಲ್ಲಾ ಅಭ್ಯರ್ಥಿಗಳು ಕೂಡ ದಲಿತರೇ ಆಗಿರುವುದರಿಂದ ದಲಿತರ ಮತಗಳು ಉಪಜಾತಿ, ಪ್ರದೇಶ ಮತ್ತು ಹಣದ ಆಧಾರದ ಮೇಲೆ ಹಂಚಿಕೆಯಾಗುತ್ತವೆ. ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ದಲಿತೇತರ ಸಮುದಾಯಗಳು ರಾಜ್ಯ ರಾಜಕೀಯ ಗಮನಿಸಿ ಮತ್ತು ಸ್ಥಳೀಯ ಹಿತಾಸಕ್ತಿಗಳನ್ನು ಕಾಪಾಡುವ ಅಭ್ಯರ್ಥಿಗಳನ್ನು ಚುನಾಯಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹಾಗಾಗಿ ದಲಿತೇತರ ಮತದಾರರೇ ಇಲ್ಲಿ ನಿರ್ಣಾಯಕ. ಈ ಕಾರಣವಾಗಿ ಮೀಸಲು ಕ್ಷೇತ್ರಗಳ ಅಭ್ಯರ್ಥಿಗಳು ದಲಿತೇತರರಿಗೆ ಹೆಚ್ಚಿನ ಮಣೆ ಹಾಕುತ್ತಾರೆ. ಹಾಗಾಗಿ ದಲಿತರ ಏಳಿಗೆಗೆ ಶ್ರಮಿಸುವ ಉತ್ತಮ ಚಾರಿತ್ರ್ಯವುಳ್ಳ ಅಭ್ಯರ್ಥಿಗಳು ಶಾಸಕರಾಗುವುದು ಈ ವ್ಯವಸ್ಥೆಯಲ್ಲಿ ಕಷ್ಟಸಾಧ್ಯ ಎನ್ನಬಹುದು. ಇದಕ್ಕೆ ಬಹುದೊಡ್ಡ ಉದಾಹರಣೆ ಆರ್. ಅಂಬೇಡ್ಕರ್  ರವರು 1952 ಮತ್ತು 1954ರಲ್ಲಿ ನಡೆದ ಸಾರ್ವತ್ರಿಕ ಹಾಗೂ ಲೋಕಸಭೆಯ ಉಪ-ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಸೋಲು ಅನುಭವಿಸಬೇಕಾಯಿತು. ಆದ್ದರಿಂದ ದಲಿತ-ದಲಿತೇತರ ಪ್ರಜ್ಞಾವಂತ ಮತದಾರರು ನೈಜ ನಾಯಕನ ಆಯ್ಕೆಗೆ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಇದೆ.

ಮಹಿಳಾ ಪ್ರತಿನಿಧಿತ್ವ

ಕರ್ನಾಟಕ ವಿಧಾನಸಭೆಯಲ್ಲಿ ಎಸ್ಸಿ ಹಾಗೂ ಎಸ್ಟಿ ಸಮುದಾಯದ ಮಹಿಳೆಯರ ಪ್ರತಿನಿಧಿತ್ವ ಶೇ. 0.78ರಷ್ಟಿದೆ. ಮಹಿಳೆಯರು ಇಲ್ಲಿ ಮತದಾನಕ್ಕೆ ಮಾತ್ರ ಸೀಮಿತವಾಗಿದ್ದು ಪ್ರತಿನಿಧಿತ್ವದಲ್ಲಿ ನಿರ್ಲಕ್ಷಕ್ಕೆ ಒಳಾಗಾಗಿದ್ದಾರೆ. ಕಳೆದ 73 ವರ್ಷಗಳ ಮೀಸಲು ಕ್ಷೇತ್ರ ರಾಜಕೀಯ ಪುರುಷ ಪ್ರಧಾನವಾಗಿದೆ ಎಂಬುದನ್ನು ಇದು ಖಾತ್ರಿಪಡಿಸಿದೆ. ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಅಭ್ಯರ್ಥಿಗಳ ಸವಾಲುಗಳು

ರಾಷ್ಟ್ರಿಯ ಮತ್ತು ರಾಜ್ಯ ನಾಯಕರ ವಿಶ್ವಾಸಗಳಿಸಿ ಪಕ್ಷದ ಟಕೆಟ್ ಗಿಟ್ಟಿಸುವುದು. ದಲಿತೇತರರ ಮನವೊಲಿಸಿ ಮತ್ತು ದಲಿತರೊಂದಿಗೆ ಸಮನ್ವಯತೆ ಸಾಧಿಸುವುದು. ಎಲ್ಲ ಜಾತಿ, ಧರ್ಮವನ್ನು ಒಳಗೊಳ್ಳುವ ಅಭಿವೃದ್ಧಿಗೆ ಶ್ರಮಿಸುವುದು. ದಲಿತ ಮತದಾರರಲ್ಲಿ ನಿರೀಕ್ಷೆಗಳು ಹೆಚ್ಚಾಗಿದ್ದು ಅವು ಹುಸಿಯಾಗದಂತೆ ನೋಡಿಕೊಳ್ಳುವುದು.

2023ನೇ ಚುನಾವಣೆ

ಈ ಬಾರಿಯ ಫಲಿತಾಂಶದ ಮೇಲೆ ಪಕ್ಷ, ಜಾತಿ ಮತ್ತು ಹಣದ ಪ್ರಭಾವವೂ ಇದೆ. ರಾಷ್ಟ್ರ ಮತ್ತು ರಾಜ್ಯದ ನಾಯಕತ್ವ ಕೂಡ ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ಇತ್ತೀಚೆಗೆ ಸರಕಾರ ಹೆಚ್ಚಿಸಿದ ಎಸ್ಸಿಗೆ ಶೇ. 17 ಮತ್ತು ಎಸ್ಟಿಗೆ ಶೇ. 7 ಮೀಸಲಾತಿ ಹಾಗೂ ಎಸ್ಸಿ ಒಳಮೀಸಲಾತಿಯ ಪರಿಣಾಮ ಕೂಡ ಇರುತ್ತದೆ. ಅಂತಿಮವಾಗಿ ಮತದಾರನ ಸ್ವಹಿತಾಸಕ್ತಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ಅಧಾರದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ದಲಿತ ಮತ್ತು ದಲಿತೇತರ ಮತದಾರರು ಸಮನ್ವಯತೆ ಕಾಯ್ದುಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನನ್ನು ಆಯ್ಕೆಮಾಡಿ ಎಲ್ಲರ ಒಳಗೊಳ್ಳುವಿಕೆಯ ರಾಜಕಾರಣಕ್ಕೆ ಮುನ್ನುಡಿ ಬರೆಯಬೇಕಿದೆ. ಎಲ್ಲಾ ಜಾತಿ, ಧರ್ಮದ ಮತದಾರರು ಒಟ್ಟು ಸೇರಿ ಸಮ ಸಮಾಜ ನಿರ್ಮಾಣಕ್ಕೆ ಸಂಕಲ್ಪಮಾಡಬೇಕಾಗಿದೆ.

Similar News