ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಬಿಜೆಪಿ ಜನವಿರೋಧವನ್ನು ಎದುರಿಸಲೇಬೇಕಾಗಿದೆ: ಎನ್. ಚೆಲುವರಾಯಸ್ವಾಮಿ
ಕೆಪಿಸಿಸಿ ಉಪಾಧ್ಯಕ್ಷ, ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್. ಚೆಲುವರಾಯ ಸ್ವಾಮಿ ಅವರು ತಮ್ಮ ವಿಧಾನಸಭಾ ಚುನಾವಣಾ ಸಿದ್ಧತೆಯ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಹೊತ್ತಲ್ಲಿ 10 ಪರ್ಸೆಂಟ್ ಎಂದಿದ್ದರಲ್ಲ ಪ್ರಧಾನಿ? ಈಗ 40 ಪರ್ಸೆಂಟ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಅವರಿಗೇ ದೂರು ಹೋಗಿತ್ತು. ಒಬ್ಬ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಗುತ್ತಿಗೆದಾರರ ಸಂಘದವರು ಬೀದಿಗೆ ಬಂದು ಪ್ರತಿಭಟಿಸಿದ್ದನ್ನು ನೋಡಿಯೇ ಇರಲಿಲ್ಲ. ಸರಕಾರದ ಬೆಂಬಲ ಇಲ್ಲದೆ ಗುತ್ತಿಗೆದಾರರು ಕಷ್ಟಪಡಬೇಕಾಗುತ್ತದೆ. ಆದರೆ ಅವರು ಪ್ರತಿಭಟಿಸಿದರು. 40 ಪರ್ಸೆಂಟ್ ಕಮಿಷನ್ಗೆ ಬೊಮ್ಮಾಯಿ ಕಾರಣ ಎಂದು ದೂರು ಕೊಟ್ಟಿರುವಾಗ ತನಿಖೆ ಮಾಡಿ ಎಂದು ಬೊಮ್ಮಾಯಿಗೇ ಹೇಳಿದರೆ ನ್ಯಾಯ ಹೇಗೆ ಸಿಗುತ್ತದೆ?
► ಈ ಸಲ ಕಾಂಗ್ರೆಸ್ ಪಾಲಿಗೆ ಕ್ಷೇತ್ರ ಹೇಗಿದೆ?
ಚೆಲುವರಾಯಸ್ವಾಮಿ: ಕಾಂಗ್ರೆಸ್ನ ಈವರೆಗಿನ ಕಾರ್ಯಕ್ರಮಗಳನ್ನು ಈ ಚುನಾವಣೆಯಲ್ಲಿ ಪುನರ್ ವಿಮರ್ಶಿಸುವ ಸಂದರ್ಭ ಬಂದಿದೆ. ಬಿಜೆಪಿ ತನಗೆ ತಾನೇ ಧಕ್ಕೆ ಮಾಡಿಕೊಂಡಿದೆ. ಇಂದಿರಾ ಕ್ಯಾಂಟೀನ್, ಬಡವರಿಗೆ 7 ಕೆಜಿ ಅಕ್ಕಿ ಹೀಗೆ ಕಾಂಗ್ರೆಸ್ನ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದು ಬೇಸರ ತರಿಸಿದೆ. ಇದರ ಜೊತೆಗೆ ಭ್ರಷ್ಟಾಚಾರ. ಕುಮಾರಸ್ವಾಮಿಗೆ ಒಕ್ಕಲಿಗ ನಾಯಕ ಎಂದು ಮತ್ತೊಂದು ಅವಕಾಶ ಕೊಡಲಾಗಿತ್ತು. ಆದರೆ ಜನರಿಗೆ ಅವರು ನಿರಾಸೆ ಮಾಡಿದರು. ಇದೆಲ್ಲವನ್ನೂ ಯೋಚಿಸಿದಾಗ, ಕಾಂಗ್ರೆಸ್ಗೆ ಮಾತ್ರವೇ ಉತ್ತಮ ಸರಕಾರ ಕೊಡಲು ಸಾಧ್ಯ. ಇನ್ನಾವುದೇ ಪಕ್ಷದಿಂದ ಆಗದೆಂಬುದು ಜನರಿಗೆ ಮನವರಿಕೆಯಾಗಿದೆ.
► ಆದರೆ ನಿಮ್ಮ ಕ್ಷೇತ್ರದಲ್ಲಿನ ಜೆಡಿಎಸ್ ಪ್ರಾಬಲ್ಯದ ಬಗ್ಗೆ ಏನೆನ್ನುತ್ತೀರಿ?
ಚೆಲುವರಾಯಸ್ವಾಮಿ: ಜೆಡಿಎಸ್ ಪ್ರಾಬಲ್ಯ ಇರಲಿಲ್ಲ. ನಾನು ಶಾಸಕನಾಗುವ ಮೊದಲು 1989ರಲ್ಲಿ 3,900 ಮತಗಳು, 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗುವ ಸಮಯದಲ್ಲಿ 17,000 ಮತಗಳಿಂದ ಮೂರನೇ ಸ್ಥಾನದಲ್ಲಿತ್ತು. 1999ರಲ್ಲಿ ನಾನು ಬಂದಾಗ ಜೆಡಿಎಸ್ ಗೆದ್ದಿದ್ದು. ಜಿಲ್ಲೆಯಲ್ಲಿ ಜೆಡಿಎಸ್ ಬೆಳೆಯಲು ನಾನೂ ಕಾರಣ. ಆದರೆ ಕಳೆದ ಬಾರಿ ಸ್ವಯಂಕೃತಾಪರಾಧ. ಪಕ್ಷ ಬಿಟ್ಟಾಗ ಸಾಕಷ್ಟು ವಿಚಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಆಗಲಿಲ್ಲ. ಆದರೆ ಕುಮಾರಸ್ವಾಮಿ ಒಂದೂವರೆ ವರ್ಷ ಆಳ್ವಿಕೆ ಮಾಡುವಾಗ ಕಾಂಗ್ರೆಸ್ನವರೇ ಬೆಂಬಲಿಸಿ ಅವಕಾಶ ಕೊಟ್ಟಿದ್ದು. ಅದರ ಉಪಯೋಗ ರಾಜ್ಯಕ್ಕೂ ಆಗಲಿಲ್ಲ. ಪಕ್ಷದ ಮೇಲೆ ಮತ್ತು ಕುಮಾರಸ್ವಾಮಿಯವರ ಮೇಲೆ ಜನ ಇಟ್ಟಿದ್ದ ನಂಬಿಕೆಯನ್ನೂ ಉಳಿಸಿಕೊಳ್ಳಲಿಲ್ಲ.
► ಸರಕಾರ ಬೀಳಲು ಸಿದ್ದರಾಮಯ್ಯ ಕಾರಣರಾದರು ಎಂಬ ಸಿಟ್ಟಿದೆಯಲ್ಲವೇ?
ಚೆಲುವರಾಯಸ್ವಾಮಿ: ಪ್ರಾಮಾಣಿಕವಾಗಿ ಹೇಳುತ್ತೇನೆ. ಸಿದ್ದರಾಮಯ್ಯನವರಾಗಲೀ ಕಾಂಗ್ರೆಸ್ನ ಯಾವುದೇ ನಾಯಕರಾಗಲೀ ಸರಕಾರ ಬೀಳಲು ಕಾರಣವಲ್ಲ. ಸರಿಯಾದ ಗೌರವವನ್ನು ಮುಖ್ಯಮಂತ್ರಿ ಕೊಡಲಿಲ್ಲ ಎಂಬ ಬೇಸರದಿಂದ ಕಾಂಗ್ರೆಸ್ ನಾಯಕರು ನಮ್ಮ ಯಾರ ಮಾತನ್ನೂ ಕೇಳದೆ ಬಿಟ್ಟುಹೋದರು. ಇದು ಅವರು ಮಾಡಿಕೊಂಡದ್ದೇ ಹೊರತು, ಬಿಜೆಪಿ ಕೈಗೆ ಅಧಿಕಾರ ಸಿಗುವಂಥ ಕೆಲಸಕ್ಕೆ ಸಿದ್ದರಾಮಯ್ಯನವರು ಎಂದೂ ಕೈಹಾಕಲಿಲ್ಲ. ಅವರು ಹಾಗೆ ಮಾಡಲು ಸಾಧ್ಯವೇ ಇಲ್ಲ.
► ಹೋದವರು ಮತ್ತೆ ಪಕ್ಷಕ್ಕೆ ಬರುತ್ತಾರೆ ಎಂದು ನೀವು ಹೇಳಿದ್ದೀರಿ. ಆದರೆ ಈಗ ಅವರು ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದ್ದಾರೆ?
ಚೆಲುವರಾಯಸ್ವಾಮಿ: ಬಹಳಷ್ಟು ಜನ ಬರಲು ತಯಾರಾಗಿದ್ದವರು. ಆದರೆ ಬಿಜೆಪಿ ಕೇಂದ್ರದಲ್ಲಿ ಆಡಳಿತದಲ್ಲಿದೆ. ಹಾಗಾಗಿ ಎಲ್ಲವನ್ನೂ ಬಳಸಿ ಹೊರಗಡೆ ಹೋಗದಂತೆ ತಡೆಯಲಾಗಿದೆ.
► ಹಳೇಮೈಸೂರು ಭಾಗದಲ್ಲಿ ಉರಿಗೌಡ, ನಂಜೇಗೌಡ ಥರದ ವಿಚಾರಗಳ ಮೂಲಕ ಬಿಜೆಪಿ ಶತಾಯ ಗತಾಯ ಗೆಲ್ಲಲೇಬೇಕೆಂದು ಹೊರಟಿದೆ. ಈ ರಾಜಕೀಯದ ಬಗ್ಗೆ ಅಭಿಪ್ರಾಯವೇನು?
ಚೆಲುವರಾಯಸ್ವಾಮಿ: ಈ ಸಲ ಸಮುದಾಯದ ಭಾವನೆಗಳೆಲ್ಲ ಇಲ್ಲವಾಗಿವೆ. ಇದರಿಂದ ಹೊಟ್ಟೆ ತುಂಬದು, ಜಾತಿ ಇಟ್ಟುಕೊಂಡು ಹೋದರೆ ಆಗದು. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ, ಸ್ಥಿರ ಸರಕಾರ ಬರಬೇಕು. ಒಳ್ಳೆಯ ಆಡಳಿತ ವ್ಯವಸ್ಥೆ ಬೇಕು. ಭ್ರಷ್ಟಾಚಾರ ತಗ್ಗಬೇಕು ಇದೆಲ್ಲವೂ ಜನರ ಮನಸ್ಸಿನಲ್ಲಿ ಬಂದಿದೆ. ಹೀಗಾಗಿ ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲರೂ ಜೆಡಿಎಸ್, ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್ಗೆ ಬೆಂಬಲ ಕೊಡುವ ನಿರೀಕ್ಷೆ ಇದೆ. ನಾವು ಘೋಷಿಸಿರುವ ಕಾರ್ಯಕ್ರಮಗಳೂ ಉತ್ತಮವಾಗಿವೆ.
► ನಿಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಹಾಲು ಉತ್ಪಾದಕರ ಸಂಘಗಳು ಹೆಚ್ಚು. ಈಗ ನಂದಿನಿ-ಅಮುಲ್ ವಿವಾದದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಚೆಲುವರಾಯಸ್ವಾಮಿ: ನಮ್ಮಲ್ಲಿನ ರೈತರು ಬಹುಪಾಲು ಹೈನುಗಾರಿಕೆಯಿಂದಲೇ ಆರ್ಥಿಕ ಸಮತೋಲನಕ್ಕೆ ಕಾರಣವಾದವರು. ಅಮುಲ್ ಬರುತ್ತಿರುವುದನ್ನು ಯಾರೂ ಸಹಿಸಲಾರರು. ನಂದಿನಿ ಬಗ್ಗೆ ಜಗತ್ತಿನಲ್ಲೇ ಮೆಚ್ಚುಗೆಯಿದೆ. ನಂದಿನಿ ಉತ್ತಮ ಎಂಬುದು ಕೂಡ ಎಲ್ಲರಿಗೂ ಗೊತ್ತು. ಆದರೆ ಬಿಜೆಪಿಯ ಆಡಳಿತದಿಂದ ಒಕ್ಕೂಟಗಳಲ್ಲಿ ಅವ್ಯವಸ್ಥೆ ಆಗಿದೆ. ಬಹುಶಃ ಇದರಿಂದಲೂ ಜನ ಬಿಜೆಪಿ, ಜೆಡಿಎಸ್ ಬಗ್ಗೆ ಇನ್ನಷ್ಟು ಬೇಸರಗೊಂಡು ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆ ಹೆಚ್ಚು. 2 ರೂ. ಇದ್ದ ಸಬ್ಸಿಡಿಯನ್ನು 5 ರೂ. ಮಾಡಿದ್ದು ಸಿದ್ದರಾಮಯ್ಯನವರು.
► ಜೆಡಿಎಸ್‌ನ್ನು ಯಾಕೆ ಜನ ಈ ಕಾರಣಕ್ಕೆ ತಿರಸ್ಕರಿಸುತ್ತಾರೆ?
ಚೆಲುವರಾಯಸ್ವಾಮಿ: ಅವರು ಮುಖ್ಯಮಂತ್ರಿಯಾದಾಗ ಮಹಿಳೆಯರಿಗೆ ಕೊಟ್ಟಿದ್ದ ಭರವಸೆ ಈಡೇರಿಸಲಿಲ್ಲ. ಹೈನುಗಾರಿಕೆಯಲ್ಲೂ ಸಬ್ಸಿಡಿಯನ್ನೇನೂ ಹೆಚ್ಚಿಸಲಿಲ್ಲ. ಮಂಡ್ಯ, ಶಿವಮೊಗ್ಗ, ಕೋಲಾರಗಳಲ್ಲಿನ ಕೆಲವು ಒಕ್ಕೂಟಗಳಲ್ಲಿ ಆದ ಹಗರಣಗಳನ್ನು ಮುಚ್ಚಿಹಾಕಲು ಅವರೇ ಕಾರಣರಾದರು. ರೈತರ ಕುರಿತ ಕಾನೂನುಗಳನ್ನು ಪಾಸು ಮಾಡುವ ವೇಳೆ ಬಿಜೆಪಿ ಜೊತೆ ಕೈಜೋಡಿಸಿದರು. ರೈತ ವಿರೋಧಿ ಕಾಯ್ದೆ ಬೆಂಬಲಿಸುವ ಮನಃಸ್ಥಿತಿಯನ್ನೂ ನೋಡಿದ ಮೇಲೆ ಯಾಕೆ ರೈತರು ಇವರನ್ನು ಬೆಂಬಲಿಸುತ್ತಾರೆ?
► ನಮ್ಮಿಂದ ಹೋದವರಿಗೆ ಕಾಂಗ್ರೆಸ್ನಲ್ಲಿ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಎನ್ನುತ್ತಾರೆ ಜೆಡಿಎಸ್ನವರು. ಇದಕ್ಕೇನೆನ್ನುತ್ತೀರಿ?
ಚೆಲುವರಾಯಸ್ವಾಮಿ: ನಾನು ಸೋತಿದ್ದೆ. ಆದರೂ ಕೆಪಿಸಿಸಿಯಲ್ಲಿ ಉಪಾಧ್ಯಕ್ಷ ಹುದ್ದೆ ಕೊಟ್ಟಿದ್ದಾರೆ. ಆಯ್ಕೆ ಸಮಿತಿಯಲ್ಲಿಯೂ ಅವಕಾಶ ಕೊಟ್ಟಿದ್ದಾರೆ. ಹಿರಿಯ ನಾಯಕರ ಪಟ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಜಿಲ್ಲೆಯಲ್ಲಿ, ಹಳೇ ಮೈಸೂರಿನಲ್ಲಿ ನನ್ನನ್ನೂ ಪ್ರಮುಖ ನಾಯಕ ಎಂದು ಗುರುತಿಸಿದ್ದಾರೆ. ಜೆಡಿಎಸ್ಗಿಂತ ಕಾಂಗ್ರೆಸ್ನಲ್ಲಿ ನನ್ನನ್ನು ಬಹಳ ಗೌರವದಿಂದ ನಡೆಸಿಕೊಂಡಿದ್ದಾರೆ.
► ಈ ಸಲ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಿದೆಯೇ?
ಚೆಲುವರಾಯಸ್ವಾಮಿ: ನನ್ನನ್ನು ಸೋಲಿಸಿರುವುದು ತಪ್ಪಾಗಿದೆ ಎನ್ನುವಲ್ಲಿಯವರೆಗೆ ಎಲ್ಲವೂ ಅವರಿಗೆ ಈಗ ಮನವರಿಕೆಯಾಗಿದೆ. ಈ ಐದು ವರ್ಷ ಅಭಿವೃದ್ಧಿ ಸೊನ್ನೆಯಾಗಿದೆ. ಅಭಿವೃದ್ಧಿ ತಾವೇ ಮಾಡಿದ್ದು ಎಂದು ಅಪಪ್ರಚಾರ ಮಾಡಿದ್ದ ಜೆಡಿಎಸ್, ಸರಕಾರ ನಡೆಸಿದಾಗ ಏಕೆ ಮಾಡಲಿಲ್ಲ ಎಂಬ ಪ್ರಶ್ನೆಯನ್ನೂ ಈಗ ಜನ ಎತ್ತುವಂತಾಗಿದೆ. ಅವರು ಮುಖ್ಯಮಂತ್ರಿಯಾಗಿದ್ದ ಒಂದೂವರೆ ವರ್ಷದ ಅವಧಿಯಲ್ಲಿ ಏನಾದರೂ ಉತ್ತಮ ಕೆಲಸ ಮಾಡಿದ್ದಿದ್ದರೆ ನನಗೆ ಸಮಸ್ಯೆಯಾಗುತ್ತಿತ್ತೇನೊ. ಆದರೆ ಅವರೇನನ್ನೂ ಮಾಡಿಲ್ಲ. ಜಿಲ್ಲೆ ಮತ್ತು ಜನರ ಬಗ್ಗೆ ಬದ್ಧತೆಯಿದೆ, ಕೆಲಸ ಮಾಡುತ್ತಾರೆ ಎಂಬ ನಂಬಿಕೆಯನ್ನು ಜನ ನನ್ನ ಬಗ್ಗೆ ಹೊಂದಿದ್ದಾರೆ.
► ಮಂಡ್ಯದಲ್ಲಿ ಪೈಪೋಟಿಯೇನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ. ಆದರೆ ಈ ಬಾರಿ ಸುಮಲತಾ ಅವರು ಬೆಂಬಲಿಸಿರುವುದರಿಂದ ಬಿಜೆಪಿ ಪ್ರಬಲವಾಗಬಹುದು ಎಂಬ ಮಾತಿದೆ. ನಿಜವೆ?
ಚೆಲುವರಾಯಸ್ವಾಮಿ: ಚುನಾವಣೆ ಬರುವವರೆಗೂ ಕಾಯಬೇಕು. ಅವರ ಗೆಲುವಿಗೆ ಯಾರ್ಯಾರು ಕಾರಣರು, ಸನ್ನಿವೇಶ ಏನು, ಜನ ಏಕೆ ಬೆಂಬಲಿಸಿದರು, ಕಾಂಗ್ರೆಸ್ನ ಪಾತ್ರ ಏನು, ಸಾರ್ವಜನಿಕರ ಪಾತ್ರ ಏನು, ಕುಮಾರಸ್ವಾಮಿ ಮಗನನ್ನು ಸೋಲಿಸಲು ಮಂಡ್ಯದಲ್ಲಿ ಪಕ್ಷಾತೀತವಾಗಿ ಏನು ನಿಲುವು ತೆಗೆದುಕೊಳ್ಳಲಾಯಿತು ಎಂಬುದು ಅವರಿಗೆ ಅರ್ಥವಾಗಿದೆಯೋ ಇಲ್ಲವೊ ಗೊತ್ತಿಲ್ಲ. ಅವರೊಬ್ಬ ಸಂಸದರು. ಅಂಬರೀಷ್ ಸಂಸದ ಎನ್ನುವುದಕ್ಕಿಂತ ಕಲಾವಿದರಾಗಿ ಗೌರವವಿತ್ತು. ಅವರ ಸಾವಿನ ಬಳಿಕ ನಮ್ಮ ಜಿಲ್ಲೆಯಲ್ಲಿ ಒಬ್ಬ ಒಳ್ಳೆಯ ನಾಯಕನನ್ನು ಕಳೆದುಕೊಂಡ ನೋವು ನಮಗೂ ಇದೆ. ಈಗ ಸುಮಲತಾ ಅವರು ಅವರದೇ ಆದ ನಿಲುವು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ. ಅದರ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅವರ ಶಕ್ತಿಯನ್ನು ನಾನು ಪರೀಕ್ಷೆ ಮಾಡಲು ಹೋಗುವುದಿಲ್ಲ. ಜನ ತೀರ್ಮಾನ ಮಾಡುತ್ತಾರೆ. ಫಲಿತಾಂಶ ಬರುವವರೆಗೂ ಕಾಯೋಣ.
► ಬಿಜೆಪಿಯವರು ಸಿದ್ದರಾಮಯ್ಯ ಬಗ್ಗೆ ಸೋಲುವ ಭಯದಿಂದ ಎರಡು ಕಡೆ ಸ್ಪರ್ಧಿಸುತ್ತಾರೆ ಎಂದು ಟೀಕಿಸಿದ್ದರು. ಈಗ ಅವರೇ ಇಬ್ಬರನ್ನು ಎರಡು ಕಡೆ ನಿಲ್ಲಿಸಿದ್ದಾರೆ. ಏನೆನ್ನುತ್ತೀರಿ?
ಚೆಲುವರಾಯಸ್ವಾಮಿ: ಅದನ್ನು ಕುತಂತ್ರದ ರಾಜಕಾರಣವೆನ್ನಬೇಕೋ, ತಂತ್ರಗಾರಿಕೆ ಎನ್ನಬೇಕೊ ಗೊತ್ತಿಲ್ಲ. ಅವರು ಮಾಡಿದರೆ ತಪ್ಪಲ್ಲ. ಇನ್ನೊಬ್ಬರು ಮಾಡಿದರೆ ತಪ್ಪು. ಸಿದ್ದರಾಮಯ್ಯನವರಿಗೆ ಸೋಲುವ ಭಯವೆಂದಾಗಲೀ, ಕ್ಷೇತ್ರ ಇರಲಿಲ್ಲವೆಂದಾಗಲೀ ಅಲ್ಲ. ಅವರಿಗೆ ಬಾದಾಮಿ, ಹಾವೇರಿಯಲ್ಲೂ ಒತ್ತಡ ಇತ್ತು. ಕೋಲಾರದಲ್ಲಿ ಎಲ್ಲಕ್ಕಿಂತ ಹೆಚ್ಚು ಇತ್ತು. ಆದರೆ ವರುಣಾದಿಂದಲೇ ಸ್ಪರ್ಧಿಸಿದರೆ ಒಳ್ಳೆಯದು ಎಂಬುದು ಹೈಕಮಾಂಡ್ ಆಶಯವಾಗಿತ್ತು. ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ಉದ್ದೇಶದಿಂದ ಈ ಕ್ಷೇತ್ರ ಅಂತಿಮವಾಯಿತು. ಆದರೆ ಕೋಲಾರದಲ್ಲೂ ಒತ್ತಡ ಇತ್ತೆಂಬ ಕಾರಣಕ್ಕೆ ಅಲ್ಲಿಂದಲೂ ಸ್ಪರ್ಧಿಸಲು ಬಯಸಿದ್ದರೇ ಹೊರತು ಸೋಲುವ ಭೀತಿಯಿಂದಲ್ಲ. ಕಡೆಗೆ ಅದೂ ಬೇಡವೆಂದು ನಿರ್ಧರಿಸಿದರು. ಆದರೆ ಇದರ ವಿರುದ್ಧ ಮಾತಾಡುವ ಬಿಜೆಪಿಯವರು ಈಗ ಎರಡೆರಡು ಕಡೆ ಕೊಟ್ಟಿದ್ದಾರೆ. ಅವರಿಗೆ ಅಭ್ಯರ್ಥಿಗಳಿಲ್ಲ ಎಂದು ಕೊಟ್ಟಿದ್ದಾರೋ ಅಥವಾ ನಮ್ಮ ಇಬ್ಬರು ನಾಯಕರ ವಿರುದ್ಧ ಏನೋ ದೊಡ್ಡ ಪೈಪೋಟಿ ಕೊಡುತ್ತಿದ್ದೇವೆ ಎಂದು ಹೇಳಿಕೊಂಡು ಹುಡುಕಿ ಹುಡುಕಿ ಸೋಮಣ್ಣ ಮತ್ತು ಅಶೋಕರನ್ನು ನಿಲ್ಲಿಸಿದರೋ ಗೊತ್ತಿಲ್ಲ.
► ಭ್ರಷ್ಟಾಚಾರ ವಿಚಾರ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆಯೇ?
ಚೆಲುವರಾಯಸ್ವಾಮಿ: ಖಂಡಿತ. ಸರಕಾರ, ಆಡಳಿತ, ಕಾರ್ಯಕ್ರಮ ಇದರ ಮೇಲೆಯೇ ಚುನಾವಣೆ ಆಗಬೇಕಲ್ಲವೆ? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಹೊತ್ತಲ್ಲಿ 10 ಪರ್ಸೆಂಟ್ ಎಂದಿದ್ದರಲ್ಲ ಪ್ರಧಾನಿ? ಈಗ 40 ಪರ್ಸೆಂಟ್ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಅವರಿಗೇ ದೂರು ಹೋಗಿತ್ತು. ಒಬ್ಬ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಗುತ್ತಿಗೆದಾರರ ಸಂಘದವರು ಬೀದಿಗೆ ಬಂದು ಪ್ರತಿಭಟಿಸಿದ್ದನ್ನು ನೋಡಿಯೇ ಇರಲಿಲ್ಲ. ಸರಕಾರದ ಬೆಂಬಲ ಇಲ್ಲದೆ ಗುತ್ತಿಗೆದಾರರು ಕಷ್ಟಪಡಬೇಕಾಗುತ್ತದೆ. ಆದರೆ ಅವರು ಪ್ರತಿಭಟಿಸಿದರು. 40 ಪರ್ಸೆಂಟ್ ಕಮಿಷನ್ಗೆ ಬೊಮ್ಮಾಯಿ ಕಾರಣ ಎಂದು ದೂರು ಕೊಟ್ಟಿರುವಾಗ ತನಿಖೆ ಮಾಡಿ ಎಂದು ಬೊಮ್ಮಾಯಿಗೇ ಹೇಳಿದರೆ ನ್ಯಾಯ ಹೇಗೆ ಸಿಗುತ್ತದೆ? ಈ ಮಟ್ಟಿಗೆ ಭ್ರಷ್ಟಾಚಾರ ಎಲ್ಲಿಯೂ ಕಂಡಿಲ್ಲ. ಬೆಂಗಳೂರು-ಮೈಸೂರು ರಸ್ತೆ ಅಥವಾ ಬೆಂಗಳೂರೊಳಗಿನ ಅಭಿವೃದ್ಧಿ ನೋಡಿ. ಮೆಟ್ರೋ ಆರಂಭಿಸಿ 5 ವರ್ಷ ಆದರೂ ಮುಗಿಸಲು ಆಗುತ್ತಿಲ್ಲ. ಬೆಂಗಳೂರನ್ನು ಇವರು ಎಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆ? ಪಾಲಿಕೆ, ಜಿ.ಪಂ., ತಾ.ಪಂ. ಚುನಾವಣೆ ಮಾಡಲು ಆಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಇವರು ಇಟ್ಟಿರುವ ನಂಬಿಕೆ ಏನು? ಸ್ಥಳೀಯ ಚುನಾವಣೆಗಳನ್ನೇ ಮಾಡಿದಿದ್ದರೆ ಇವರಿಗೆ ಪ್ರಜಾಪ್ರಭುತ್ವದ ಬಗ್ಗೆ ಏನು ನಿಲುವು ಇದೆ?
► ಕಾಂಗ್ರೆಸನ್ನು ಮತ್ತು ನಿಮ್ಮ ಕ್ಷೇತ್ರದಲ್ಲಿ ನಿಮ್ಮನ್ನು ಜನ ಏಕೆ ಬೆಂಬಲಿಸಬೇಕು?
ಚೆಲುವರಾಯಸ್ವಾಮಿ: ನನ್ನ ಕ್ಷೇತ್ರದಲ್ಲಿ ನಾನು ಶಾಸಕನಾಗಿ, ಸಂಸದನಾಗಿ, ಮಂತ್ರಿಯಾಗಿ ನನ್ನ ಶಕ್ತಿ ಮೀರಿ ಜನಕ್ಕೆ ಏನು ಬೇಕೋ ಅಂಥ ಕೆಲಸಗಳನ್ನು ಮಾಡಿದ್ದೇನೆ. ಪ್ರತೀ ಹಳ್ಳಿಗೆ ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸೌಲಭ್ಯ ಒದಗಿಸಿದ್ದೇನೆ. ಪ್ರತೀ ಸಮುದಾಯಕ್ಕೂ ಸರಕಾರದ ಸೌಲಭ್ಯ ಮುಟ್ಟುವಂತೆ ನೋಡಿಕೊಂಡಿದ್ದೇನೆ. ಜಿಲ್ಲಾ ಮಟ್ಟದಲ್ಲಿ ಮೆಡಿಕಲ್ ಕಾಲೇಜು, ಮಿನಿ ವಿಧಾನಸೌಧದಂಥ ಎಲ್ಲ ಅಭಿವೃದ್ಧಿ ನನ್ನ ಅವಧಿಯಲ್ಲಿ ಆಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡಿದ್ದೇನೆ. ನಾನೊಬ್ಬನೇ ಮಾಡಿದ್ದೇನೆ ಎನ್ನಲಾರೆ. ಈ ಹತ್ತಿಪ್ಪತ್ತು ವರ್ಷಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟಿದ್ದು ನಾನು ಎಂಬುದು ಎಲ್ಲರಿಗೂ ಗೊತ್ತು. ಜನ ನಾನು ಬೇಕೆಂದು ಬಯಸಿದ್ದಾರೆ. ಹಾಗಾಗಿ ಈ ಸಲ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ. ಈ ಕೆಲವು ವರ್ಷಗಳಲ್ಲಿ ಆಶ್ರಯ ಮನೆಗಳನ್ನೇ ಕೊಟ್ಟಿಲ್ಲ. ಪಂಚಾಯತ್ ವ್ಯವಸ್ಥೆಯನ್ನು ಪೂರ್ತಿ ನಾಶಪಡಿಸಲಾಗಿದೆ. ಸ್ಥಳೀಯ ಚುನಾವಣೆಗಳಲ್ಲಿ, ಪ್ರಜಾಪ್ರಭುತ್ವದಲ್ಲಿ ಇವರಿಗೆ ನಂಬಿಕೆಯಿಲ್ಲ. ಆ ಕಾರಣಕ್ಕಾಗಿಯೂ ಅವರು ವಿರೋಧ ಎದುರಿಸಲೇಬೇಕಾಗುತ್ತದೆ. ಇದೆಲ್ಲದರ ಜೊತೆಗೇ ಅಭಿವೃದ್ಧಿ ಹಿನ್ನಡೆ ಆಗಿದೆ. ಆರ್ಥಿಕ ಸ್ಥಿತಿ ತುಂಬಾ ಕೆಟ್ಟಿದೆ. ಕೋವಿಡ್ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಬಿಜೆಪಿ ಆಡಳಿತದಲ್ಲಿ ಜನರಿಗೆ, ರಾಜ್ಯಕ್ಕೆ ಉಪಯೋಗವಾಗಿಲ್ಲ.