ಮಲ್ಪೆ: ಸಮುದ್ರಕ್ಕೆ ಬಿದ್ದ 14 ಗಂಟೆಗಳ ಬಳಿಕ ಮೀನುಗಾರನ ರಕ್ಷಣೆ!

Update: 2023-04-18 16:20 GMT

ಉಡುಪಿ, ಎ.18: ಮೀನುಗಾರಿಕಾ ಬೋಟಿನಿಂದ ಅಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದ ಆಂಧ್ರ ಮೂಲದ ಮೀನುಗಾರರೊಬ್ಬರು ಸುಮಾರು 14 ಗಂಟೆಗಳ ಬಳಿಕ ರಕ್ಷಿಸಲ್ಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.

ರಕ್ಷಿಸಲ್ಪಟ್ಟ ಮೀನುಗಾರರನ್ನು ಆಂಧ್ರಪ್ರದೇಶದ ಪುಕಾಲು ಕಮೇಯ (32) ಎಂದು ಗುರುತಿಸಲಾಗಿದೆ. ಸುಮಾರು 35 ಮಂದಿ ಮೀನುಗಾರರು ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ವಾಪಾಸ್ಸು ಮಲ್ಪೆ ಬಂದರಿಗೆ ಬರುತ್ತಿದ್ದ ವೇಳೆ ಎ.16ರಂದು ಮಧ್ಯಾಹ್ನ 2ಗಂಟೆ ಸುಮಾರಿಗೆ ಬೋಟಿನ ಹಿಂದುಗಡೆ ನಿಂತಿದ್ದ ಪುಕಾಲು ಕಮೇಯ ಅಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದರೆನ್ನಲಾಗಿದೆ.

ಈ ವಿಚಾರ ಸ್ವಲ್ಪ ದೂರ ಹೋದ ಬಳಿಕ ಇತರ ಮೀನುಗಾರರಿಗೆ ತಿಳಿಯಿತು. ಕೂಡಲೇ ಬೋಟನ್ನು ವಾಪಾಸ್ಸು ತೆಗೆದು ಕೊಂಡು ಹೋಗಿ ಹುಡುಕಾಟ ನಡೆಸಿದರು. ಆದರೆ ಎಲ್ಲೂ ಪುಕಾಲು ಪತ್ತೆಯಾಗಿರಲಿಲ್ಲ. ಬಳಿಕ ಮೀನುಗಾರರು ಜೀವರಕ್ಷಕರಿಗೆ ಮಾಹಿತಿ ನೀಡಿದರು. ಇವರೆಲ್ಲರು ಪುಕಾಲು ಮೃತಪಟ್ಟಿರಬಹುದು ಎಂದು ಭಾವಿಸಿದ್ದರು.

ಈ ಮಧ್ಯೆ ನೀರಿಗೆ ಬಿದ್ದಿದ್ದ ಪುಕಾಲು ತನಗೆ ಸಿಕ್ಕಿದ ನಾಲ್ಕು ನೀರಿನ ಖಾಲಿ ಬಾಟಲಿಯನ್ನು ಟೀಶರ್ಟ್ ಒಳಗೆ ಹಾಕಿಕೊಂಡು ಸ್ವಲ್ಪ ದೂರು ಈಜಾಡಿ ಕೊಂಡು ಬಂದರು. ಅಲ್ಲಿಗೆ ಮೀನಿಗೆ ಹಾಕಿದ ಬೀಡಿನ ಬಲೆ ಕಂಡು, ಅದರಲ್ಲಿ ಅಳವಡಿಸ ಲಾದ ಬಾವುಟವನ್ನು ಆಸರೆಯಾಗಿ ಹಿಡಿದುಕೊಂಡರು. ಬಳಿಕ ಬಲೆಯನ್ನೇ ಆಸರೆಯಾಗಿಸಿಕೊಂಡು ಅಲ್ಲಿಯೇ ನೀರಿನಲ್ಲಿ ಉಳಿದುಕೊಂಡರು.

ಎ.16ರ ಸಂಜೆ 6ಗಂಟೆ ಸುಮಾರಿಗೆ ಹಾಕಿದ್ದ ಈ ಬಲೆಯನ್ನು ಮರುದಿನ ಬೆಳಗಿನ ಜಾವ 4ಗಂಟೆ ಸುಮಾರಿಗೆ ತೆಗೆಯಲು ಬಂದ ಮೀನುಗಾರರಿಗೆ ಪುಕಾಲು ನೀರಿನಲ್ಲಿ ಇರುವುದು ಕಂಡುಬಂದರು. ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತೆ ದಡಕ್ಕೆ ಕರೆತರಲಾಯಿತು. ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಬಳಿಕ ಚೇತರಿಸಿಕೊಂಡ ಅವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

‘ನೀರಿಗೆ ಮಧ್ಯಾಹ್ನ 2ಗಂಟೆಗೆ ಬಿದ್ದಿದ್ದೆ. ಅಲ್ಲಿಂದ ಎರಡು ಕಿ.ಮೀ. ದೂರ ಈಜಿಕೊಂಡು ಬಂದೆ. ಅಲ್ಲಿ ಸಿಕ್ಕಿದ ಬಲೆಯಲ್ಲಿ ಆಸರೆಯಾಗಿ ನಿಂತುಕೊಂಡೆ. ನನ್ನನ್ನು ಹುಡುಕಿಕೊಂಡು ಬೋಟಿನವರು ಬಂದಿದ್ದರು. ಆದರೆ ಅವರಿಗೆ ನಾನು ಕಾಣುತ್ತಿರಲಿಲ್ಲ. ಅದು ಅಲ್ಲದೆ ಆಗ ಕತ್ತಲೆ ಕೂಡ ಆಗಿತ್ತು. ಕೊನೆಗೆ ಬೆಳಗಿನ ಜಾವ 4ಗಂಟೆ ಸುಮಾರಿಗೆ ಗಂಗೊಳ್ಳಿಯ ಬೋಟಿನವರು ಹಾಕಿದ ಬಲೆ ತೆಗೆಯಲು ಬಂದಾಗ ನನ್ನನ್ನು ನೋಡಿ ರಕ್ಷಿಸಿದರು’
-ಪುಕಾಲು ಕಮೇಯ, ರಕ್ಷಿಸಲ್ಪಟ್ಟ ಮೀನುಗಾರ

Similar News