×
Ad

ಕಪ್ಪೆಯಾಟ ಒಪ್ಪುತ್ತೀರಾ ನೀವು?

ಗಾದಿ May

Update: 2023-04-19 12:28 IST

ಮೊನ್ನೆ ಚುನಾವಣೆ ಅಧಿಸೂಚನೆ ಪ್ರಕಟಗೊಂಡ ಬಳಿಕ, ನಾವು ಎರಡು ಬಗೆಯ ಕಪ್ಪೆಯಾಟಗಳನ್ನು ಕಂಡಿದ್ದೇವೆ. ಒಂದು, ಮೊದಲೇ ತೀರ್ಮಾನಿಸಿಕೊಂಡು, ಹೃದಯ ಕೊಟ್ಟು, ಅಧಿಸೂಚನೆಯ ಬೆನ್ನಿಗೇ ಕಾಲು ಒಳಗಿಟ್ಟ ಕಪ್ಪೆಯಾಟವಾದರೆ, ಇನ್ನೊಂದು, ಆ ಪಕ್ಷದಲ್ಲಿ ಬಿ ಫಾರಂ ಸಿಗಲಿಲ್ಲವೆಂಬ ಕಾರಣಕ್ಕೆ ಈ ಪಕ್ಷಕ್ಕೆ ಜಿಗಿಯುವ ಕಪ್ಪೆಯಾಟ. ಇವೆರಡೂ ಈವತ್ತು, ನಾವಿರುವ ಸನ್ನಿವೇಶದಲ್ಲಿ ಸ್ವಲ್ಪ‘‘ಮರ್ಯಾದಸ್ಥ’’ ಕಪ್ಪೆಜಿಗಿತಗಳು. ಇನ್ನು ಬೇರೆ ತರಹದ ಗುಂಪು ಕಪ್ಪೆಜಿಗಿತ ಮತ್ತು ಅವರ ರೆಸಾರ್ಟ್ ಲೈಫಿನಿಂದಾರಂಭಿಸಿ ಅಧಿಕಾರದ ಕುರ್ಚಿಯ ತನಕದ ಜಿಗಿತಗಳನ್ನೂ ಈಗಷ್ಟೇ ಮುಗಿದಿರುವ ವಿಧಾನಸಭೆಯ ಅವಧಿಯಲ್ಲಿ ಭರಪೂರ ಕಂಡಾಗಿದೆ. ಈ ಕಪ್ಪೆಜಿಗಿತವನ್ನು ಸ್ವಲ್ಪಡಿಸೆಕ್ಷನ್ ಮಾಡಿ ನೋಡೋಣ.

ಸಂವಿಧಾನದ ಕರಡನ್ನು ಸಂವಿಧಾನ ಸಭೆಯಲ್ಲಿ ಚರ್ಚಿಸುವ ವೇಳೆ, ಅಧ್ಯಕ್ಷೀಯ ಮಾದರಿಯ ಸರಕಾರ ಮತ್ತು ಪಾರ್ಲಿಮೆಂಟರಿ ಮಾದರಿಯ ಸರಕಾರಗಳ ನಡುವೆ ಆಯ್ಕೆಯ ಚರ್ಚೆ ನಡೆದಿತ್ತು. ಅವೆರಡರ ನಡುವೆ ಇರುವ ವ್ಯತ್ಯಾಸವೆಂದರೆ ಒಂದು ಸರಕಾರದ ಸ್ಥಿರತೆ ಮತ್ತು ಜನತೆಗೆ ಸರಕಾರದ ಉತ್ತರದಾಯತ್ವಗಳ ನಡುವಿನ ಸಂತುಲನದಲ್ಲಿರುವ ವ್ಯತ್ಯಾಸ. ಅಧ್ಯಕ್ಷೀಯ ವ್ಯವಸ್ಥೆಯಲ್ಲಿ ಸರಕಾರಕ್ಕೆ ಸ್ಥಿರತೆ ಇರುತ್ತದೆ, ಅಧ್ಯಕ್ಷರನ್ನು ಹುದ್ದೆಯಿಂದ ಪದಚ್ಯುತಗೊಳಿಸಲು ಮಹಾಭಿಯೋಗದ ಅವಶ್ಯಕತೆ ಇರುತ್ತದೆ. ಆದರೆ ಪಾರ್ಲಿಮೆಂಟರಿ ವ್ಯವಸ್ಥೆಯಲ್ಲಿ ಸರಕಾರವು ಸಂವಾದಗಳ ಮೂಲಕ ಪ್ರತಿದಿನವೂ ಉತ್ತರದಾಯಿ ಆಗಿರಬೇಕಾಗುತ್ತದೆ. ಯಾವುದೇ ಕ್ಷಣದಲ್ಲಿ ಸದನದ ಅವಿಶ್ವಾಸಕ್ಕೆ ತುತ್ತಾದ ಸರಕಾರ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂಬುದನ್ನು ಒಪ್ಪಿದ್ದ ಸಂವಿಧಾನಕರ್ತರು, ಪಾರ್ಲಿಮೆಂಟರಿ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸರಕಾರದ ಸ್ಥಿರತೆಗಿಂತ ಉತ್ತರದಾಯಿತ್ವದ ತೂಕವೇ ಹೆಚ್ಚು ಎಂದು ಖಚಿತಪಡಿದ್ದರು.

ಸಂವಿಧಾನ ಕರ್ತೃಗಳ ಈ ಉದಾತ್ತ ನಿಲುವಿನ ಹಿಂದೆ ಇದ್ದುದು ಶಾಸನ ಸಭೆಗಳಲ್ಲಿ ಶಾಸನಗಳನ್ನು ರಚಿಸಬಲ್ಲ, ಚರ್ಚಿಸಬಲ್ಲ ಅರ್ಹ ಜನರು ಆರಿಸಿ ಬರುತ್ತಾರೆ ಎಂಬ ಕಲ್ಪನೆ. ದುರದೃಷ್ಟವಶಾತ್ ಹಾಗಾಗಲಿಲ್ಲ. ಶಾಸನ ಸಭೆಗಳಲ್ಲಿ ಪಕ್ಷಾಂತರದ ಪಿಡುಗು ಮೊದಮೊದಲು ಕಪ್ಪೆಜಿಗಿತವಾಗಿ ಆರಂಭಗೊಂಡದ್ದು, ಈಗ ಸಗಟು ಕುದುರೆ ವ್ಯಾಪಾರವಾಗಿ ಬೆಳೆದು ನಿಂತಿರುವುದನ್ನು ನಾವು ಕಂಡಿದ್ದೇವೆ. 

ಇದೇನೂ ಏಕಾಏಕಿ ಸಂಭವಿಸಿದ್ದಲ್ಲ. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ದಾಖಲಾದ ಮೊದಲ ಪಕ್ಷಾಂತರಗಳೆಂದರೆ, ಬ್ರಿಟಿಷ್ ಆಡಳಿತ ಅವಧಿಯಲ್ಲಿ (1930ರ ದಶಕ) ಶ್ಯಾಮ್ಲಾಲ್ ನೆಹರು ಎಂಬವರು ಕಾಂಗ್ರೆಸ್ನಿಂದ ಬ್ರಿಟಿಷರ ಕಡೆಗೆ ಪಕ್ಷಾಂತರ ಮಾಡಿದ್ದು ಮತ್ತು ಹಫೀಝ್ ಇಬ್ರಾಹೀಂ ಎಂಬವರು ಕಾಂಗ್ರೆಸ್ಗೆ ಸೇರಿಕೊಂಡದ್ದು. ಆ ಬಳಿಕ, ಮೊದಲನೇ ಸಾರ್ವತ್ರಿಕ ಚುನಾವಣೆಯಿಂದ ನಾಲ್ಕನೇ ಸಾರ್ವತ್ರಿಕ ಚುನಾವಣೆಗಳ ನಡುವೆ 542 ಪಕ್ಷಾಂತರಗಳು ಸಂಭವಿಸಿದ್ದವಂತೆ. ಮುಂದೆ 1967-1983ರ ನಡುವೆ ರಾಜ್ಯಗಳ ವಿಧಾನಸಭೆಗಳಲ್ಲಿ 2,700ಕ್ಕೂ ಮಿಕ್ಕಿ ಪಕ್ಷಾಂತರಗಳು ಸಂಭವಿಸಿವೆಯಂತೆ. 1968 ಒಂದೇ ವರ್ಷದಲ್ಲಿ 16 ರಾಜ್ಯಸರಕಾರಗಳು ಪಕ್ಷಾಂತರದ ಕಾರಣಕ್ಕೆ ಉರುಳಿವೆ ಮತ್ತು ಆ ವರ್ಷ, ಪಕ್ಷಾಂತರ ಮಾಡಿದ 438 ಶಾಸಕರಲ್ಲಿ 210 ಮಂದಿ ಹೊಸದಾಗಿ ರಚನೆಯಾದ ರಾಜ್ಯಸರಕಾರಗಳಲ್ಲಿ ಸಚಿವರಾದರಂತೆ!

ಇದನ್ನೆಲ್ಲ ಕಂಡ ಸಂಸತ್ತು ಪಕ್ಷಾಂತರ ತಡೆಗೆ ಮೊದಲ ಪ್ರಯತ್ನ ಮಾಡಿದ್ದು 1967ರಲ್ಲಿ. ಸಂಸದ ಪಿ. ವೆಂಕಟಸುಬ್ಬಯ್ಯ ಎಂಬವರು ನಾಲ್ಕನೇ ಲೋಕಸಭೆಯಲ್ಲಿ ಖಾಸಗಿ ಸದಸ್ಯರ ನಿರ್ಣಯ ಮಂಡಿಸಿ, ಪಕ್ಷಾಂತರಗಳನ್ನು ತಡೆಯಲು ಚೊಚ್ಚಲ ಪ್ರಯತ್ನ ನಡೆಸಿದ್ದರು. ಆದರೆ ಅದು ಸಫಲವಾಗಲಿಲ್ಲ. 1973, 1978ರಲ್ಲೂ ಶಾಸನ ಜಾರಿಗೆ ವಿಫಲ ಪ್ರಯತ್ನಗಳು ನಡೆದವು. ಕಡೆಗೆ ಸಂವಿಧಾನದ 52ನೇ ತಿದ್ದುಪಡಿಯ ರೂಪದಲ್ಲಿ ಸಂಸತ್ತು ಪಕ್ಷಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿತು; 2003ರಲ್ಲಿ ಅದಕ್ಕೆ ತಿದ್ದುಪಡಿಯೂ ಆಯಿತು. ಅಲ್ಲಿಂದೀಚೆಗೆ ಸಂಭವಿಸುತ್ತಿರುವ ಪಕ್ಷಾಂತರಗಳ ಲೆಕ್ಕ ಇಟ್ಟವರಿಲ್ಲ! ಭಾರತದ ಕಾನೂನು ಕಮಿಷನ್ ತನ್ನ 170ನೇ ವರದಿಯಲ್ಲಿ (1999) ಈ ಪಕ್ಷಾಂತರ ನಿಷೇಧ ಕಾಯ್ದೆ ಇರುವ ಸಂವಿಧಾನದ ಹತ್ತನೇ ಷೆಡ್ಯೂಲಿನ ಕುರಿತು ದೇಶದ ಅನುಭವ ಏನೇನೂ ತೃಪ್ತಿಕರವಾಗಿಲ್ಲ ಎಂದು ಹೇಳಿದೆ. ಪಕ್ಷಾಂತರಗಳು ಸರಕಾರಗಳ ಸ್ಥಿರತೆಗೆ ಕುತ್ತು ತಂದು, ಪದೇ ಪದೇ ಚುನಾವಣೆಗಳು ಬರುತ್ತವೆ ಎಂಬ ನ್ಯೂನತೆಯನ್ನು ಸರಿಪಡಿಸುವ ಉದ್ದೇಶಕ್ಕಾಗಿ ಬಂದ ಪಕ್ಷಾಂತರ ನಿಷೇಧ ಕಾಯ್ದೆಯು ತನ್ನ ಉದ್ದೇಶ ಈಡೇರಿಸಿತೇ ಎಂದು ಕೇಳಿದರೆ, ಹಿಂದೆ ಚಿಲ್ಲರೆ ವ್ಯಾಪಾರ ಆಗಿದ್ದದ್ದು, ಕಾಯ್ದೆ ಜಾರಿಗೆ ಬಂದ ಬಳಿಕ, ಸಗಟು ವ್ಯಾಪಾರ ಆಗಿ ಪರಿವರ್ತನೆ ಆಗಿರುವುದು ಢಾಳಾಗಿ ಕಾಣಿಸುತ್ತಿದೆ.

ದೇಶ ಈಗ ತಲುಪಿರುವ ಜಾಗದಲ್ಲಿ ಮೂರು ಮಹಾಕಂದರಗಳು ಕಾಣಿಸುತ್ತಿವೆ.
ಮೊದಲನೆಯದಾಗಿ, ಜನಪ್ರತಿನಿಧಿ ಸಭೆಗಳಿಗೆ ಉತ್ತರದಾಯಿ ಆಗಬೇಕಿದ್ದ ಸರಕಾರಗಳು ಈಗ ಅಂಕಿಸಂಖ್ಯೆಗಳ ಆಟಕ್ಕೆ ಇಳಿದುಬಿಟ್ಟಿವೆ. ಹಾಗಾಗಿ, ಒಂದು ಬಹುಮತ ಹೊಂದಿರುವ ಸರಕಾರ ತನ್ನ ‘‘ವಿಪ್’’ ಚಾಟಿಗಳ ಮೂಲಕ ಜನಪ್ರತಿನಿಧಿಗಳನ್ನು ನಿಯಂತ್ರಿಸುತ್ತಿದೆ. ಶಾಸನಸಭೆಯ ಚರ್ಚೆಗಳು ಅರ್ಥ ಕಳೆದುಕೊಂಡಿವೆ.

ಎರಡನೆಯದಾಗಿ, ಶಾಸನಗಳ ಮತ್ತು ನೀತಿಗಳ ನಿರೂಪಕರಾಗಬೇಕಿದ್ದ ಜನಪ್ರತಿನಿಧಿಗಳು ಇಂದು ಈ ಪಕ್ಷಾಂತರ ನಿಷೇಧ ಕಾಯ್ದೆಯ ಕಾರಣದಿಂದಾಗಿ ತಮ್ಮ ಮೂಲ ಕೆಲಸವನ್ನೇ ಮರೆಯುವಂತಾಗಿದೆ. ತಾವು ಪ್ರತಿನಿಧಿಸುತ್ತಿರುವ ಮತದಾರ ಕ್ಷೇತ್ರಗಳ ಆಶೋತ್ತರಗಳನ್ನು ಸದನದಲ್ಲಿ ಬಿಂಬಿಸುವ ಬದಲು, ಅವರೆಲ್ಲ ತಮ್ಮ ಪಕ್ಷಗಳ ಹೈಕಮಾಂಡ್ನ ಆದೇಶ ಪಾಲಕರಾಗಿ ಲೆಕ್ಕಭರ್ತಿಗೆ ಸದನದಲ್ಲಿದ್ದಾರೆ. ಜನಪ್ರತಿನಿಧಿ ಸಭೆಗಳಲ್ಲೇ ಮುಕ್ತ ಮತದಾನಕ್ಕೆ ಅವಕಾಶ ಕಾಣೆಯಾಗಿದೆ!

ಮೂರನೆಯದಾಗಿ, ಇಷ್ಟೆಲ್ಲ ಅವಾಂತರಗಳಿಗೆ ಮೂಲ ಕಾರಣ ಆಗಿರುವ ಪಕ್ಷಾಂತರ ನಿಷೇಧ ಕಾಯ್ದೆ ಅತ್ತ ತನ್ನ ಉದ್ದೇಶವನ್ನೂ ಪೂರೈಸಿಲ್ಲ; ಇತ್ತ ಸರಕಾರಗಳಿಗೆ ಸ್ಥಿರತೆಯನ್ನೂ ತಂದುಕೊಟ್ಟಿಲ್ಲ. ಸಂಸದೀಯ ವ್ಯವಸ್ಥೆಗೆ ಆಪತ್ತಿನ ಕ್ಷಣಗಳಲ್ಲಿ ಅದು ಪಾರ್ಲಿಮೆಂಟರಿ ವ್ಯವಸ್ಥೆಯ ಕೈ ಹಿಡಿದಿಲ್ಲ. ಅದಕ್ಕೆ ಉದಾಹರಣೆಗಳು ಕಳೆದ ಎರಡು ವರ್ಷಗಳಲ್ಲೇ ನಮಗೆ ಮಧ್ಯಪ್ರದೇಶ, ಕರ್ನಾಟಕ, ಮಣಿಪುರ, ಅರುಣಾಚಲ ಪ್ರದೇಶ, ಮಹಾರಾಷ್ಟ್ರಗಳಲ್ಲಿ ಕಾಣಸಿಕ್ಕಿದೆ.

ಇಂತಹದೊಂದು ದಯನೀಯವಾದ, ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾದ ಕಾಯ್ದೆ ದೇಶಕ್ಕೆ ಅಗತ್ಯ ಇದೆಯೆ? ಅದು ಇಲ್ಲದಿದ್ದರೆ, ಕನಿಷ್ಠ ಪದೇ ಪದೇ ಚುನಾವಣೆಯ ಖರ್ಚಿನ/ಅಸ್ಥಿರತೆಯ ಭಯಕ್ಕಾದರೂ ಸರಕಾರಗಳು ‘‘ಉತ್ತರದಾಯಿ’’ ಆಗಿ ಕಾರ್ಯಾಚರಿಸುವುದು ಸಾಧ್ಯವಾದೀತೆ? ತಮ್ಮ ಸಿದ್ಧಾಂತಗಳ ಜೊತೆ ಬಲವಾಗಿ ನಿಲ್ಲಬಲ್ಲವರನ್ನೇ ಪಕ್ಷದ ಟಿಕೆಟ್ನೀಡಿ ಗೆಲ್ಲಿಸುವ ಮೂಲಕ ಕುದುರೆ ವ್ಯಾಪಾರಕ್ಕೆ ಕುಳಿತ ದುಡ್ಡಿನ ಚೀಲಗಳನ್ನು ಚುನಾವಣಾ ರಾಜಕೀಯದಿಂದ ಹೊರಗಟ್ಟುವುದು ಸಾಧ್ಯವಾದೀತೇ?
ಸಂವಿಧಾನ ಕರ್ತೃಗಳ ಆಶಯ ಇದ್ದದ್ದೇ ಸರಕಾರದ ಸ್ಥಿರತೆಗಿಂತ ಉತ್ತರದಾಯಿತ್ವದ ತೂಕವೇ ಹೆಚ್ಚು ಎಂದಲ್ಲವೆ?

Similar News