×
Ad

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪ: ಆಕ್ಸ್ಫಾಮ್ ಇಂಡಿಯಾ ವಿರುದ್ಧ ಸಿಬಿಐ ಎಫ್ಐಆರ್

Update: 2023-04-20 22:56 IST

ಹೊಸದಿಲ್ಲಿ,ಎ.19: ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ-2010ರ ಉಲ್ಲಂಘನೆಗಾಗಿ ಎನ್ಜಿಓ ಸಂಸ್ಥೆ ಆಕ್ಸ್ಫಾಮ್ ಇಂಡಿಯಾ  ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ.

ದಿಲ್ಲಿಯಲ್ಲಿರುವ ಆಕ್ಸ್ ಫಾಮ್ ಕಾರ್ಯಾಲಯದಲ್ಲಿ ಸಿಬಿಐ ಅಧಿಕಾರಿಗಳು ಬುಧವಾರ ಶೋಧ ಕಾರ್ಯಾಚರಣೆ ನಡೆಸಿದ್ದರು.  ಆಕ್ಸ್ ಫಾಮ್ ಇಂಡಿಯಾ ವಿರುದ್ಧ ಸಿಬಿಐ ತನಿಖೆಗೆ ಕೇಂದ್ರ ಸರಕಾರದ ಆದೇಶ ಹೊರಡಿಸಿದ  ಹತ್ತು ದಿನಗಳ ಬಳಿಕ ಅಂದರೆ  ಎಪ್ರಿಲ್ 17ರಂದು ಎಫ್ಐಆರ್ ದಾಖಲಿಸಲಾಗಿದೆ. ಈ ಸಂಸ್ಥೆಯು ಜಾಗತಿಕ ಮಟ್ಟದ ಲಾಭೋದ್ದೇಶ ರಹಿತ ಸಂಘಟನೆಯಾದ ಆಕ್ಸ್ಫಾಮ್ ಇಂಟರ್ನ್ಯಾಶನಲ್ನ  ಭಾರತೀಯ ಘಟಕವಾಗಿದೆ.

ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕ (ವಿದೇಶಿಯರು-ಐಐ ವಿಭಾಗ) ಜೀತೇಂದ್ರ ಛಡ್ಡಾ ಅವರು ನೀಡಿದ ದೂರನ್ನು ಆಧರಿಸಿ ಆಕ್ಸ್ ಫಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.   ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು  ವಿದೇಶಿ ಸರಕಾರಗಳು ಹಾಗೂ ಸಂಸ್ಥೆಗಳ ಮೂಲಕ ಭಾರತದ ಮೇಲೆ ಒತ್ತಡ ಹೇರಲು ಆಕ್ಸ್ ಫಾಮ್ ಇಂಡಿಯಾ  ಯೋಜನೆಯನ್ನು ಹಾಕಿಕೊಂಡಿತ್ತೆಂದು ಛಡ್ಡಾ ಅವರು ಆರೋಪಿಸಿದ್ದಾರೆ.  ಆದಾಯ ತೆರಿಗೆ ಇಲಾಖೆಯು ಆಕ್ಸ್ ಫಾಮ್ ಕಚೇರಿಯ ಪರಿಶೀಲನೆ ನಡೆಸಿದ ಸಂದರ್ಭ ಪತ್ತೆ ಮಾಡಲಾದ ಇಮೇಲ್  ಸಂದೇಶಗಳಿಂದ ಈ ವಿಷಯ ತಿಳಿದುಬಂದಿದೆಯೆಂದು ಅವರು ಹೇಳಿದ್ದಾರೆ.

ವಿದೇಶಿ ದೇಣಿಗೆ ಸ್ವೀಕರಿಸಲು  ಎಫ್‌ಸಿಆರ್‌ಎ ಕಾಯ್ದೆಯಡಿ ಸಂಸ್ಥೆಗಳು ತಮ್ಮನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ತನ್ನ ಪರವಾಗಿ ಭಾರತ ಸರಕಾರದ ಜೊತೆ ಸಂಧಾನ ನಡೆಸಲು  ವಿವಿಧ ವಿದೇಶಿ ಸಂಘಟನೆಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು  ಆಕ್ಸ್ ಫಾಮ್ ಇಂಡಿಯಾ ಹೊಂದಿದೆ. ಹಲವಾರು ವರ್ಷಗಳಿಂದ ಓಕ್ಸ್ಫಾಮ್ ಇಂಡಿಯಾಗೆ ಉದಾರವಾಗಿ ದೇಣಿಗೆ ನೀಡುತ್ತಿದ್ದ ವಿದೇಶಿ ಸಂಸ್ಥೆಗಳು ಹಾಗೂ ಕಂಪೆನಿಗಳ ಹಿತಾಸಕ್ತಿಗಳಿಗೆ ಅನುಗುಣವಾಗಿ ವಿದೇಶಾಂಗ ನೀತಿಯನ್ನು  ರೂಪಿಸುವಲ್ಲಿ  ಆಕ್ಸ್ಫಾಮ್ ಇಂಡಿಯಾವು ಸಂಭಾವ್ಯ ಸಾಧನವಾಗಿತ್ತು ಎಂದು ಛಡ್ಡಾ ಆಪಾದಿಸಿದರು.

ನೋಂದಣಿ ನವೀಕರಿಸದ  ಇಲ್ಲವೇ ಅರ್ಜಿ ತಿರಸ್ಕರಿಸ್ಪಟ್ಟ  ಹಿನ್ನೆಲೆಯಲ್ಲಿ ಕಳೆದ ವಷದ ಜನವರಿ 1ರಂದು ನೋಂದಣಿ ರದ್ದುಗೊಂಡ 5932 ಸರಕಾರೇತರ ಸಂಸ್ಥೆ (ಎನ್ಜಿಓ)ಗಳಲ್ಲಿ ಓಕ್ಸ್ಫಾಮ್ ಇಂಡಿಯಾ ಕೂಡಾ  ಸೇರಿದೆ.

2020ರ  ವಿದೇಶಿ ದೇಣಿಗೆ ತಿದ್ದುಪಡಿ ಕಾಯ್ದೆ  ಜಾರಿಗೆ ಬಂದ ಬಳಿಕವೂ ಓಕ್ಸ್ಫಾಮ್ ಇಂಡಿಯಾ ಸಂಸ್ಥೆಯು  ಇತರ ಸಂಸ್ಥೆಗಳಿಗೆ ವಿದೇಶಿ ದೇಣಿಗೆಗಳನ್ನು ವರ್ಗಾಯಿಸುವುದನ್ನು ಮುಂದುವರಿಸಿತ್ತೆಂದು ಛಡ್ಡಾ ಅವರು ಸೋಮವಾರ ಸಲ್ಲಿಸಿದ ಎಫ್ಐಆರ್ ನಲ್ಲಿ ಆಪಾದಿಸಿದ್ದರು.

2013-14ರಿಂದ 2015-16ರ ವರೆಗೆ ಆಕ್ಸ್ಫಾಮ್ ಇಂಡಿಯಾ ಸಂಸ್ಥೆಯು ಎಫ್ಸಿಆರ್ಎ ನಿಯೋಜಿತ ಬ್ಯಾಂಕ್ ಖಾತೆಯ ಬದಲಿಗೆ  ನೇರವಾಗಿ ತನ್ನ ಖಾತೆಗೆ 1.50 ಕೋಟಿ ರೂ. ಮೊತ್ತದ ವಿದೇಶಿ ದೇಣಿಗೆಗಳನ್ನು ಜಮೆ ಮಾಡಿದೆಯೆಂದುು ಛಡ್ಡಾ ಆರೋಪಿಇದ್ದಾರೆ.

ಎಪ್ರಿಲ್ 7ರಂದು ಆಕ್ಸ್ಫಾಮ್ ಇಂಡಿಯಾ ತನ್ನ ಮೇಲಿನ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿತ್ತು. ಭಾರತೀಯ ಕಾನೂನುಗಳಿಗೆ ತಾನು ಸಂಪೂರ್ಣ ವಿಧೇಯನಾಗಿದ್ದೇನೆ ಮತ್ತು ವಿದೇಶಿದೇಣಿಗೆ ನಿಯಂತ್ರಣ  ಕಾಯ್ದೆ ರಿಟರ್ನ್ಸ್ ಸೇರಿದಂತೆ  ತನ್ನ ಎಲ್ಲಾ   ವಿತ್ತೀಯ ವಿವರಗಳನ್ನು, ತಾನು  ಸಕಾಲದಲ್ಲಿ  ಸಲ್ಲಿಸಿರುವುದಾಗಿ ಆಕ್ಸ್ಫಾಮ್ ಸ್ಪಷ್ಟನೆ ನೀಡಿದೆ.

Similar News