ದೇಶದಲ್ಲಿ ಏಳು ತಿಂಗಳಲ್ಲೇ ಗರಿಷ್ಠ ಕೋವಿಡ್ ಸಾವು

Update: 2023-04-21 02:01 GMT

ಹೊಸದಿಲ್ಲಿ: ದೇಶದ 14 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುವಾರ 29 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. 2022ರ ಸೆಪ್ಟೆಂಬರ್ ಬಳಿಕ ದಾಖಲಾದ ಗರಿಷ್ಠ ಸಾವಿನ ಸಂಖ್ಯೆ ಇದಾಗಿದೆ. 12591 ಹೊಸ ಕೋವಿಡ್ ಪ್ರಕರಣಗಳು ಗುರುವಾರ ಪತ್ತೆಯಾಗಿದ್ದು, ಇದು ಕೂಡಾ ಎಂಟು ತಿಂಗಳ ಗರಿಷ್ಠ. ದೆಹಲಿಯಲ್ಲೇ ಆರು ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ತಲಾ ನಾಲ್ಕು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಬುಧವಾರ ದೇಶಾದ್ಯಂತ 27 ಮಂದಿ ಸೋಂಕಿತರು ಮೃತಪಟ್ಟಿದ್ದರು. ಕೋವಿಡ್-19 ಸಾಂಕ್ರಾಮಿಕದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,31,230ಕ್ಕೇರಿದೆ.

ಬಹುತೇಕ ಸಾವುಗಳು ಕ್ಷಯ, ಕ್ಯಾನ್ಸರ್‌ನಂಥ ಈಗಾಗಲೇ ಇದ್ದ ಅಸ್ವಸ್ಥತೆಗಳಿಂದ ಸಂಭವಿಸಿವೆ ಎಂದು ದೆಹಲಿ ಲೋಕನಾಯಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸುರೇಶ್ ಕುಮಾರ್ ಹೇಳಿದ್ದಾರೆ.

ಮಾರ್ಚ್‌ನಿಂದೀಚೆಗೆ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಪಾಸಿಟಿವಿಟಿ ದರ ಶೇಕಡ 5ಕ್ಕಿಂತ ಅಧಿಕ ಇದೆ. ಕಳೆದ 24 ಗಂಟೆಗಳಲ್ಲಿ 2.30 ಲಕ್ಷ ಮಂದಿಯನ್ನು ಪರೀಕ್ಷೆಗೆ ಗುರಿಪಡಿಸಿದ್ದು, ಕೇರಳ, ದೆಹಲಿ ಮತ್ತು ಮಹಾರಾಷ್ಟ್ರ ಅತ್ಯಧಿಕ ಬಾಧಿತ ರಾಜ್ಯಗಳು.

Similar News