×
Ad

ಸುಳ್ಳು ಸುದ್ದಿ ಪ್ರಕರಣ: OpIndia ಸಂಪಾದಕ, ಸ್ಥಾಪಕರ ಅರ್ಜಿ ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್‌

Update: 2023-04-21 15:00 IST

ಹೊಸದಿಲ್ಲಿ: ಬಿಹಾರಿ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ದಾಳಿಗಳು ನಡೆಯುತ್ತಿವೆ ಎಂಬ ಕುರಿತಾದ ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಅನ್ನು ಪ್ರಶ್ನಿಸಿ ಬಲಪಂಥೀಯ ವಿಚಾರಧಾರೆಗಳನ್ನು ಹರಡುವ ಮತ್ತು ಸುಳ್ಳುಸುದ್ದಿಗಳಿಗೆ ಕುಖ್ಯಾತಿಯಾಗಿರುವ "OpIndia" ಇದರ ಸಂಪಾದಕಿ ನೂಪುರ್‌ ಶರ್ಮ ಮತ್ತು ಸ್ಥಾಪಕ ರಾಹುಲ್‌ ರೌಶನ್‌ ಅವರು ಸಲ್ಲಿಸಿರುವ  ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಇಂದು ನಿರಾಕರಿಸಿದೆ.

ಅರ್ಜಿದಾರರಿಗೆ ಪರ್ಯಾಯವಾಗಿ ಕ್ರಿಮಿನಲ್‌ ದಂಡ ಸಂಹಿತೆಯ ಸೆಕ್ಷನ್‌ 482 ಅಡಿಯಲ್ಲಿ ಹೈಕೋರ್ಟಿಗೆ ಅಪೀಲು ಸಲ್ಲಿಸುವ ಅವಕಾಶವಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ಜಸ್ಟಿಸ್‌ ಪಿ ಎಸ್‌ ನರಸಿಂಹ ಅವರ ಪೀಠ ಹೇಳಿದೆ. ಆದರೆ ಎಫ್‌ಐಆರ್‌ ಅನ್ವಯ ಯಾವುದೇ ಬಲವಂತದ ಕ್ರಮದಿಂದ ಅರ್ಜಿದಾರರಿಗೆ ನಾಲ್ಕು ವಾರ ರಕ್ಷಣೆಯನ್ನು ಸುಪ್ರೀಂ ಕೋರ್ಟ್‌ ಒದಗಿಸಿದೆ.

ಇಂದು ವಿಚಾರಣೆ ಆರಂಭಗೊಳ್ಳುತ್ತಿದ್ದಂತೆಯೇ ಅರ್ಜಿದಾರರ ಪರ ವಕೀಲ ಮಹೇಶ್‌ ಜೇಠ್ಮಲಾನಿ ಅವರನ್ನುದ್ದೇಶಿಸಿ ಕೇಳಿದ ಸಿಜೆಐ ಚಂದ್ರಚೂಡ್‌ "ನಾವು ವಿಧಿ 32 ಅನ್ವಯ ಎಫ್‌ಆಐರ್‌ ಹೇಗೆ ರದ್ದುಗೊಳಿಸಬಹುದು? ನೀವು ಮದ್ರಾಸ್‌ ಹೈಕೋರ್ಟಿಗೆ ಹೋಗಿ," ಎಂದರು.

ಕೆಲ ಪ್ರಕರಣಗಳಲ್ಲಿ ವಿಧಿ 32 ಅನ್ವಯದ ಎಫ್‌ಐಆರ್ ಅನ್ನು ರದ್ದುಗೊಳಿಸಲಾಗಿದೆ ಎಂದು ಜೇಠ್ಮಲಾನಿ ಹೇಳಿದರೂ ಪ್ರತಿ ಕೇಸ್‌ನ ಸಂದರ್ಭಗಳು ಭಿನ್ನವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿತು. ಆಗ ತಮ್ಮ ಕಕ್ಷಿಗಾರರಲ್ಲೊಬ್ಬರು ಮಹಿಳೆ ಮತ್ತು ಆರು ವರ್ಷದ ಮಗುವಿನ ತಾಯಿಯಾಗಿರುವುದರಿಂದ ಹೈಕೋರ್ಟಿಗೆ ಅರ್ಜಿ ಸಲ್ಲಿಸುವ ತನಕ ರಕ್ಷಣೆ ಒದಗಿಸಬೇಕೆಂದು ಕೋರಿದಾಗ ಬಲವಂತದ ಕ್ರಮದಿಂದ ನಾಲ್ಕು ವಾರಗಳ ಕಾಲ ರಕ್ಷಣೆಯೊದಗಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಮ್ಮ ಸುದ್ದಿ ತಾಣ ಬೇರೊಂದು ದಿನಪತ್ರಿಕೆ ಪ್ರಕಟಿಸಿದ ಸುದ್ದಿಯ ಆಧಾರದಲ್ಲಿ ಈ ನಿರ್ದಿಷ್ಟ ಸುದ್ದಿ ಪ್ರಕಟಿಸಿತ್ತು, ಅದು ಸುಳ್ಳು ಎಂದು ತಿಳಿದ ಕೂಡಲೇ ಅದನ್ನು ವಾಪಸ್‌ ಪಡೆದುಕೊಳ್ಳಲಾಗಿತ್ತು ಎಂದು ಅರ್ಜಿದಾರರು ಹೇಳಿದ್ದರು.

Similar News