×
Ad

Fact Check: ರಾಜ್ಯಪಾಲರಾಗಿದ್ದಾಗ ಮಲಿಕ್ ಪುಲ್ವಾಮಾ, ಭ್ರಷ್ಟಾಚಾರ ವಿಷಯ ಎತ್ತಿರಲಿಲ್ಲ ಎಂಬ ಅಮಿತ್ ಶಾ ಹೇಳಿಕೆ ನಿಜವೇ?

Update: 2023-04-23 19:43 IST

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ತನ್ನ ಸರಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ಶನಿವಾರ ರಾತ್ರಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ರಾಜ್ಯಪಾಲರಾಗಿ ಅಧಿಕಾರಾವಧಿ ಮುಗಿದ ನಂತರವೇ ಮಲಿಕ್ ಅವರ ಆತ್ಮಸಾಕ್ಷಿ ಎಚ್ಚರಗೊಂಡಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

'India Today'ಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ, ಮಲಿಕ್ ಅಧಿಕಾರದಲ್ಲಿದ್ದಾಗ ಮೌನವಾಗಿದ್ದರು ಎಂದು ಆರೋಪಿಸಿದ್ದಾರೆ. 

ಪುಲ್ವಾಮಾ ಮತ್ತು ಕೃಷಿ ಕಾನೂನು ಇತ್ಯಾದಿಗಳ ಕುರಿತು ಮೋದಿ ಸರಕಾರದ ವಿರುದ್ಧ ಮಲಿಕ್ ಅವರ ಟೀಕೆಗಳು ಇಂಡಿಯಾ ಟುಡೇಕ್ಕೆ ನೀಡಿದ್ದ ವಿಶೇಷ ಸಂದರ್ಶನ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿದ್ದರೂ ನಿರೂಪಕ ಸುಧೀರ್ ಚೌಧರಿಯವರು ಅಮಿತ್ ಶಾ ಅವರ ಆರೋಪವನ್ನು ಪ್ರಶ್ನಿಸಲಿಲ್ಲ. 

ಹಾಗಾದರೆ ಸಾರ್ವಜನಿಕವಾಗಿ ಲಭ್ಯವಿರುವ ವಿಷಯಗಳು ಶಾ ಅವರ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಏನನ್ನು ಸೂಚಿಸುತ್ತಿವೆ?

ಮಲಿಕ್ ಅಧಿಕಾರದಲ್ಲಿದ್ದಾಗ ಮೌನವಾಗಿದ್ದರು ಎಂಬ ಶಾ ಪ್ರತಿಪಾದನೆಗೆ ವ್ಯತಿರಿಕ್ತವಾಗಿ ಮಲಿಕ್ ಅವರು ರಾಜ್ಯಪಾಲರಾಗಿದ್ದಾಗಲೂ ಬಿಜೆಪಿ ಸರಕಾರವನ್ನು ಪದೇ ಪದೇ ಗುರಿಯಾಗಿಸಿಕೊಂಡಿದ್ದರು.

ಫೆ.15,2019
40 ಸಿಆರ್ಪಿಎಫ್ ಸಿಬ್ಬಂದಿಗಳು ಬಲಿಯಾಗಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿಯ ಮರುದಿನವೇ indianexpress ಗೆ  ನೀಡಿದ್ದ ಸಂದರ್ಶನದಲ್ಲಿ ಮಲಿಕ್, ಈ ದಾಳಿಯು ಗುಪ್ತಚರ ವೈಫಲ್ಯದ ಭಾಗಶಃ ಫಲಶ್ರುತಿಯಾಗಿದೆ. ವಿಶೇಷವಾಗಿ,ಭದ್ರತಾ ಪಡೆಗಳು ಸ್ಫೋಟಕಗಳನ್ನು ತುಂಬಿದ್ದ ವಾಹನದ ಚಲನವಲನಗಳನ್ನು ಪತ್ತೆ ಹಚ್ಚಿರಲಿಲ್ಲ ಎಂದು ಹೇಳಿದ್ದರು. ‘ನಾವು ಅದನ್ನು ಗುಪ್ತಚರ ವೈಫಲ್ಯ ಎಂದು ಒಪ್ಪಿಕೊಳ್ಳುತ್ತಿಲ್ಲ. ಹೆದ್ದಾರಿಯಲ್ಲಿ ತಿರುಗಾಡುತ್ತಿದ್ದ ಸ್ಫೋಟಕಗಳಿಂದ ತಂಬಿದ್ದ ವಾಹನವನ್ನು ಪತ್ತೆ ಹಚ್ಚಲು ಅಥವಾ ತಡೆಯಲು ನಮಗೆ ಸಾಧ್ಯವಾಗಿರಲಿಲ್ಲ. ನಮ್ಮದೂ ತಪ್ಪಿದೆ ಎನ್ನುವ ವಾಸ್ತವವನ್ನು ನಾವು ಒಪ್ಪಿಕೊಳ್ಳಲೇಬೇಕು’ ಎಂದು ಮಲಿಕ್ ಹೇಳಿದ್ದರು.

2019, ಫೆ.26ರಂದು ಭಾರತೀಯ ವಾಯುಪಡೆಯಿಂದ ಬಾಲಾಕೋಟ್ ವಾಯು ದಾಳಿ ಮತ್ತು ನಂತರ ಮಾಧ್ಯಮಗಳಲ್ಲಿ ಅದರ ಪ್ರಸಾರವು ಸಿಆರ್ಪಿಎಫ್ ಯೋಧರ ಸಾವಿಗೆ ಕಾರಣವಾಗಿದ್ದ ಭದ್ರತಾ ಲೋಪಗಳ ಕುರಿತು ಪ್ರಶ್ನೆಗಳ ತೀವ್ರತೆಯನ್ನು ತಗ್ಗಿಸಿದ್ದವು ಮತ್ತು ಮೋದಿ ದೇಶಪ್ರೇಮದ ಬಗ್ಗೆ ಮಾತನಾಡುವುದನ್ನು ಆಯ್ಕೆ ಮಾಡಿಕೊಂಡಿದ್ದರು. ವಿವಾದಾತ್ಮಕವಾಗಿ ಲಾತೂರಿನಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಪುಲ್ವಾಮಾ ದಾಳಿಯಲ್ಲಿ ಕೊಲ್ಲಲ್ಪಟ್ಟವರ ಮತ್ತು ಬಾಲಾಕೋಟ್ ದಾಳಿಯ ಹೆಸರಿನಲ್ಲಿ ‘ಮೊದಲ ಬಾರಿಯ ಮತದಾರರರಿಂದ’ ಮತಗಳನ್ನೂ ಕೇಳಿದ್ದರು ಎಂದು thewire.in ವರದಿ ಮಾಡಿದೆ. 

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೆಲವು ತಿಂಗಳುಗಳ ಬಳಿಕ ಮಲಿಕ್ ರನ್ನು ಗೋವಾ ರಾಜ್ಯಪಾಲರನ್ನಾಗಿ ವರ್ಗಾವಣೆಗೊಳಿಸಲಾಗಿತ್ತು. ಆಗಸ್ಟ್ 2020ರಲ್ಲಿ ಅವರನ್ನು ಮೇಘಾಲಯ ರಾಜ್ಯಪಾಲರನ್ನಾಗಿ ನಿಯೋಜಿಸಲಾಗಿತ್ತು.

ಅಕ್ಟೋಬರ್,2020
thewire.in ಗೆ  ನೀಡಿದ್ದ ಸಂದರ್ಶನದಲ್ಲಿ ಮಲಿಕ್ ಭ್ರಷ್ಟಾಚಾರದ ಆರೋಪಗಳನ್ನು ಪುನರುಚ್ಚರಿಸಿದ್ದರು. 2021 ಅಕ್ಟೋಬರ್ನಲ್ಲಿ ಮೇಘಾಲಯದ ರಾಜ್ಯಪಾಲರಾಗಿದ್ದಾಗಲೂ ಅವರು ಈ ಆರೋಪಗಳನ್ನು ಮಾಡಿದ್ದರು. ಆರೆಸ್ಸೆಸ್ ನಾಯಕರೋರ್ವರಿಗೆ ಸೇರಿದ ಕಡತ ಸೇರಿದಂತೆ ಎರಡು ಕಡತಗಳಿಗೆ ಒಪ್ಪಿಗೆ ನೀಡಲು ತನಗೆ 300 ಕೋ.ರೂ.ಗಳ ಆಮಿಷವನ್ನು ಒಡ್ಡಲಾಗಿತ್ತು ಎಂದು ಮಲಿಕ್ ಆಗ ಹೇಳಿದ್ದರು.
ರಾಜಸ್ಥಾನದ ಝುಂಜುನುದಲ್ಲಿ ಸಾರ್ವಜನಿಕ ಭಾಷಣವೊಂದರಲ್ಲಿ ಮಲಿಕ್ ಈ ಹೇಳಿಕೆಯನ್ನು ನೀಡಿದ್ದು, ಅದು ಪಿಟಿಐ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿತ್ತು.

ಈ ಹೇಳಿಕೆಯ ಬಳಿಕ ಸಿಬಿಐ ಈ ವಿಷಯದಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿತ್ತು ಮತ್ತು 2022 ಎಪ್ರಿಲ್ ನಲ್ಲಿ 14 ಕಡೆಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು. ಸಿಬಿಐ ಈ ಎರಡು ಪ್ರಕರಣಗಳಲ್ಲಿ ಅನಿಲ ಅಂಬಾನಿಯವರ ರಿಲಯನ್ಸ್ ಜನರಲ್ ಇನ್ಶೂರನ್ಸ್ ಕಂಪನಿ ಮತ್ತು ಚಿನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈ.ಲಿ.ನ ಅಧಿಕಾರಿಗಳು ಮತ್ತು ಇತರರನ್ನು ಹೆಸರಿಸಿತ್ತು.

ಜನವರಿ 2022
2022 ಜನವರಿಯಲ್ಲಿ ಹರ್ಯಾಣದ ದಾದ್ರಿಯಲ್ಲಿ ನಡೆದಿದ್ದ ಸಮಾವೇಶವೊಂದರಲ್ಲಿ ಮಲಿಕ್, ರೈತರ ಪ್ರತಿಭಟನೆಗಳ ಕುರಿತು ಚರ್ಚಿಸಲು ತಾನು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾಗ ಅವರು ದುರಹಂಕಾರಿಯಂತೆ ಕಂಡು ಬಂದಿದ್ದರು ಮತ್ತು ತನ್ನೊಂದಿಗೆ ವಾಗ್ವಾದವನ್ನು ನಡೆಸಿದ್ದರು ಎಂದು ಹೇಳಿದ್ದರು.

‘ಅವರು (ಮೋದಿ) ತುಂಬ ದುರಹಂಕಾರವನ್ನು ತೋರಿಸಿದ್ದರು. ನಮ್ಮದೇ 500 ರೈತರು ಮೃತಪಟ್ಟಿದ್ದಾರೆ ಮತ್ತು ನಾಯಿಯೊಂದು ಸತ್ತರೂ ನೀವು ಸಂತಾಪ ಪತ್ರವನ್ನು ರವಾನಿಸುತ್ತೀರಿ ಎಂದು ನಾನು ಹೇಳಿದಾಗ,ಅವರು ತನಗಾಗಿ ಸತ್ತಿದ್ದಾರೆಯೇ ಎಂದು ಮೋದಿ ಪ್ರಶ್ನಿಸಿದ್ದರು. ಉತ್ತರವಾಗಿ ಹೌದು,ಏಕೆಂದರೆ ನೀವು ರಾಜನಾಗಿದ್ದೀರಿ ಎಂದು ನಾನು ಹೇಳಿದ್ದೆ. ನನ್ನ ಮತ್ತು ಅವರ ಭೇಟಿ ಜಗಳದಲ್ಲಿ ಕೊನೆಗೊಂಡಿತ್ತು. ಅಮಿತ್ ಶಾರನ್ನು ಭೇಟಿಯಾಗುವಂತೆ ಮೋದಿ ನನಗೆ ಸೂಚಿಸಿದ್ದರು ಮತ್ತು ನಾನು ಅದನ್ನೂ ಮಾಡಿದ್ದೆ ’ಎಂದು ಮಲಿಕ್ ಹೇಳಿದ್ದರು. ಈ ಸಂದರ್ಭದಲ್ಲಿ ಅವರು ಮೇಘಾಲಯದ ರಾಜ್ಯಪಾಲರಾಗಿದ್ದರು.

ಸೆಪ್ಟಂಬರ್ 2022
ಮೇಘಾಲಯ ರಾಜ್ಯಪಾಲರಾಗಿದ್ದಾಗ 2022,ಸೆ.15ರಂದು thewire.in ಗೆ ನೀಡಿದ್ದ ಸಂದರ್ಶನದಲ್ಲಿ ಮಲಿಕ್, ಮೋದಿ ಆತ್ಮವೈಭವದ ವ್ಯಕ್ತಿಯಾಗಿದ್ದು,ಇದು ಒಂದು ಕಾಯಿಲೆಯಾಗಿದೆ ಎಂದು ಹೇಳಿದ್ದರು. ಶಾ ಪ್ರಾಯೋಗಿಕ ವ್ಯಕ್ತಿಯಾಗಿದ್ದಾರೆ, ಆದರೆ ಮೋದಿ ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತಿಲ್ಲ ಎಂದಿದ್ದರು. ಸರಕಾರದ ಕೇಂದ್ರೀಕೃತ ಸ್ವರೂಪದ ಕುರಿತೂ ಮಾತನಾಡಿದ್ದ ಮಲಿಕ್, ನಿತಿನ್ ಗಡ್ಕರಿ ದೇಶಾದ್ಯಂತ ಅಭಿಮಾನಕ್ಕೆ ಪಾತ್ರರಾಗಿದ್ದಾರೆ, ಆದರೆ ಅವರು ಅಥವಾ ರಾಜನಾಥ ಸಿಂಗ್ ತಮ್ಮ ಕಾರ್ಯಗಳಿಗಾಗಿ ಯಾವುದೇ ಹೆಗ್ಗಳಿಕೆಯನ್ನು ಪಡೆಯುತ್ತಿಲ್ಲ. ಎಲ್ಲ ಹೆಗ್ಗಳಿಕೆ ಮೋದಿಯವರಿಗೆ ಮಾತ್ರ ಸೇರುತ್ತಿದೆ ಎಂದು ಹೇಳಿದ್ದರು.

ಮಲಿಕ್ ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿದ ಎರಡು ದಿನಗಳ ಬಳಿಕ 2022 ಅ.6ರಂದು ಜಮ್ಮು-ಕಾಶ್ಮೀರದ ಎರಡು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಅವರನ್ನು ಪ್ರಶ್ನಿಸಿತ್ತು.
ಕೃಪೆ: thewire.in

Similar News