ಕೇರಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

Update: 2023-04-25 07:04 GMT

ಹೊಸದಿಲ್ಲಿ: ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಿರುವನಂತಪುರ ಹಾಗೂ  ಕಾಸರಗೋಡು ನಡುವೆ ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ ಮಂಗಳವಾರ ಬೆಳಗ್ಗೆ 11:10 ಗಂಟೆಗೆ ತಿರುವನಂತಪುರಂ ಸೆಂಟ್ರಲ್ ಸ್ಟೇಷನ್‌ನಿಂದ ಚಾಲನೆ ನೀಡಿದರು.

 ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ, ಈ ರೈಲು 11 ಜಿಲ್ಲೆಗಳಾದ ತಿರುವನಂತಪುರ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಹಾಗೂ ಕಾಸರಗೋಡುಗಳನ್ನು ಒಳಗೊಂಡಿದೆ.

ಮಂಗಳವಾರ ಬೆಳಗ್ಗೆ ತಿರುವನಂತಪುರ ತಲುಪಿದ ಪ್ರಧಾನಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ನಂತರ ಅವರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳಿದರು.

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 1 ರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಚಾಲನೆ ನೀಡುವ ಮೊದಲು ಪ್ರಧಾನಿ ಅವರು ರೈಲಿನ ಒಂದು ಕೋಚ್‌ನಲ್ಲಿ ಶಾಲಾ ಮಕ್ಕಳ ಗುಂಪಿನೊಂದಿಗೆ ಸಂವಾದ ನಡೆಸಿದರು.

ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ರೈಲಿನೊಳಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವಾಗ ಪ್ರಧಾನಿಯವರೊಂದಿಗೆ ಉಪಸ್ಥಿತರಿದ್ದರು.

Similar News