ತನ್ನನ್ನು ಉಮೇಶ್‌ ಪಾಲ್‌ ಪ್ರಕರಣದ ಆರೋಪಿಯೆಂದು ತಪ್ಪಾಗಿ ಬಿಂಬಿಸಿದ 'ಟೈಮ್ಸ್‌ ನೌ ನವಭಾರತ್‌': ವಿದ್ಯಾರ್ಥಿ ಆರೋಪ

Update: 2023-04-25 14:15 GMT

ಅಲಹಾಬಾದ್: ಉತ್ತರ ಪ್ರದೇಶದ ಅಲಹಾಬಾದ್‌ನ ವಿದ್ಯಾರ್ಥಿ ಆಕಿಫ್‌ ಹಮ್ಮದ್‌ ಎಂಬವರು 'ಟೈಮ್ಸ್‌ ನೌ ನವ್‌ ಭಾರತ್‌ ವಾಹಿನಿ' ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಶಾಮೀಲಾದ ಶೂಟರ್‌ ತಾನೆಂದು ವಾಹಿನಿ ತನ್ನನ್ನು ಬಿಂಬಿಸಿದೆ ಎಂದು ವಿದ್ಯಾರ್ಥಿ ಆರೋಪಿಸಿದ್ದಾರೆ. ತನ್ನ ಫೋಟೋ ಹಾಗೂ ವೀಡಿಯೋಗಳನ್ನು ಪ್ರೈಮ್‌ ಟೈಮ್‌ ವೇಳೆ ವಾಹಿನಿ ಪ್ರಸಾರ ಮಾಡಿದೆ ಎಂದು ಆಕಿಫ್‌ ಹೇಳಿದ್ದಾರೆ.  ಹಲವಾರು ಇಮೇಲ್‌ಗಳು ಮತ್ತು ಕಾನೂನು ನೋಟಿಸ್‌ ನಂತರ ವೀಡಿಯೋ ತೆಗೆದುಹಾಕಲಾಗಿದೆಯಾದರೂ ವಾಹಿನಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ ಎಂದು ವಿದ್ಯಾರ್ಥಿ ಹೇಳಿದ್ದಾರೆ ಎಂದು maktoobmedia.com ವರದಿ ಮಾಡಿದೆ.

ಮಾರ್ಚ್‌ 23 ರಂದು ಪ್ರೈಮ್‌ ಟೈಮ್‌ ಶೋ ʻನ್ಯೂಸ್‌ ಕಾ ಪಾಠಶಾಲಾ”ದಲ್ಲಿ ಟೈಮ್ಸ್‌ ನೌ ನವಭಾರತ್‌ ವಾಹಿನಿಯು ನಿರೂಪಕ ಸುಶಾಂತ್‌ ಸಿನ್ಹಾ ಪ್ರಸ್ತುತ ಪಡಿಸಿದ ಶೋದಲ್ಲಿ ವೀಡಿಯೋ ಒಂದನು ಪ್ರಸಾರ ಮಾಡಿ ಆತ ಉಮೇಶ್‌ ಪಾಲ್‌ ಪ್ರಕರಣದಲ್ಲಿ ಶಾಮೀಲಾಗಿದ್ದಾನೆನ್ನಲಾದ ಶೂಟರ್‌ ಅರ್ಮಾನ್‌ ಹಾಗೂ ಆತನ ತಲೆಗೆ ರೂ 5 ಲಕ್ಷ ಬಹುಮಾನವಿದೆ ಎಂದು ಹೇಳಿತ್ತು.

ಈ ವೀಡಿಯೋದಲ್ಲಿ ಅರ್ಮಾನ್‌  ಹಾಗೂ ಅತೀಕ್‌ ಅಹ್ಮದ್‌ ಪತ್ನಿ ಶೈಸ್ತಾ ಪರ್ವೀನ್‌ ಜೊತೆಗಿರುವುದಾಗಿ ಹೇಳಲಾಗಿತ್ತು. ಆದರೆ ಆ ವೀಡಿಯೋದಲ್ಲಿ  ಕಾಣಿಸಿರುವುದು ಶಾರ್ಪ್‌ ಶೂಟರ್‌ ಅರ್ಮಾನ್‌ ಅಲ್ಲ, ಬದಲು ತಾನು ಎಂದು ಆಕಿಫ್‌ ಹಮ್ಮದ್‌ ಆರೋಪಿಸಿದ್ದಾರೆ.

ತನಗೂ ಈ ಪ್ರಕರಣಕ್ಕೆ ಸಂಬಂಧವಿಲ್ಲ. ತಾನು ತೃತೀಯ ಬಿಎ ವಿದ್ಯಾರ್ಥಿ, ಲೈವ್‌ ಶೋಗಳಲ್ಲಿ ಪ್ರದರ್ಶನ ನೀಡುವ ಕಲಾವಿದ ಎಂದು ಆಕಿಫ್‌ ಹೇಳಿದ್ದಾರೆ.

ಆಕಿಫ್‌ ಪ್ರಕಾರ ಬಿಎಸ್‌ಪಿಯಿಂದ ಮೇಯರ್‌ ಚುನಾವಣೆಗೆ ಟಿಕೆಟ್‌ ಪಡೆದಿದ್ದ ಶೈಸ್ತಾ ತಮ್ಮ ಪ್ರದೇಶಕ್ಕೆ ಬಂದಾಗ ಇತರ ಹಲವರಂತೆ ತಾನು ಆಕೆಯ ಜೊತೆ ಕಾಣಿಸಿಕೊಂಡಿದ್ದಾಗಿ ಆಕಿಫ್‌ ಹೇಳಿದ್ದಾರೆ.

ಇದರಿಂದಾಗಿ ತನಗೆ ಕೆಟ್ಟ ಹೆಸರು ಬಂದಿದೆ ತನ್ನ ಶೋಗಳು ರದ್ದಾಗುತ್ತಿವೆ ಎಂದು ಆಕಿಫ್‌ ಹೇಳಿದ್ದು, ಹಲವಾರು ಇಮೇಲ್‌ಗಳ ನಂತರ ಕೊನೆಗೂ ಯುಟ್ಯೂಬ್‌ನಿಂದ ಆ ವೀಡಿಯೋವನ್ನು ಚಾನಲ್‌ ತೆಗೆದುಹಾಕಿದೆ ಆದರೆ ಇನ್ನೂ ಸ್ಪಷ್ಟೀಕರಣ ನೀಡಿಲ್ಲ ಎಂದು ಆಕಿಫ್‌ ಆರೋಪಿಸಿದ್ದಾರೆ.

Similar News