×
Ad

ವಿಚಾರಣೆಗೆ ಬಾಕಿಯಿರುವ ಪ್ರಕರಣದ ಬಗ್ಗೆ ಟಿವಿ ಸಂದರ್ಶನ ನೀಡಿದ ನ್ಯಾಯಾಧೀಶ

ಕಲ್ಕತ್ತಾ ಹೈಕೋರ್ಟ್‌ನಿಂದ ವರದಿ ಕೋರಿದ ಸುಪ್ರಿಂ ಕೋರ್ಟ್

Update: 2023-04-25 22:07 IST

ಹೊಸದಿಲ್ಲಿ, ಎ. 25: ಲಂಚ ಪಡೆದು ಶಿಕ್ಷಕರನ್ನು ನೇಮಿಸಲಾಗಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ಬಗ್ಗೆ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಟಿವಿ ಚಾನೆಲೊಂದಕ್ಕೆ ಸಂದರ್ಶನ ನೀಡಿರುವುದು ಹೌದೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕಲ್ಕತ್ತಾ ಹೈಕೋರ್ಟ್ ಗೆ ಸೂಚನೆ ನೀಡಿದೆ.

‘‘ವಿಚಾರಣೆಗೆ ಬಾಕಿಯಿರುವ ಪ್ರಕರಣವೊಂದರ ಬಗ್ಗೆ ಸಂದರ್ಶನ ನೀಡುವ ಅಧಿಕಾರ ನ್ಯಾಯಾಧೀಶರಿಗಿಲ್ಲ’’ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹೇಳಿದರು.

ಎಪ್ರಿಲ್ 27ರೊಳಗೆ ವರದಿ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯವು ಕಲ್ಕತ್ತಾ ಹೈಕೋರ್ಟ್ ನ ರಿಜಿಸ್ಟ್ರಾರ್ ಜನರಲ್ ಗೆ ಸೂಚಿಸಿದೆ. ಅದು ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 28ಕ್ಕೆ ನಿಗದಿಪಡಿಸಿತು.

ತೃಣಮೂಲ ಕಾಂಗ್ರೆಸ್ ನಾಯಕ ಅಭಿಶೇಕ್ ಬ್ಯಾನರ್ಜಿ ಮತ್ತು ಪ್ರಕರಣದ ಆರೋಪಿ ಕುಂಟಾಲ್ ಘೋಷ್ರನ್ನು ವಿಚಾರಣೆಗೊಳಪಡಿಸಿ ವರದಿ ಸಲ್ಲಿಸುವಂತೆ ಕಲ್ಕತ್ತಾ ಹೈಕೋರ್ಟ್ ಎಪ್ರಿಲ್ 13ರಂದು ಸಿಬಿಐ ಮತ್ತು ಅನುಷ್ಠಾನ ನಿರ್ದೇಶನಾಲಯಕ್ಕೆ ಆದೇಶ ನೀಡಿತ್ತು. ಆದರೆ, ಎಪ್ರಿಲ್ 17ರಂದು ಆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.

ಅದಕ್ಕೂ ಮುನ್ನ, ಈ ಹಗರಣದ ತನಿಖೆ ಮಾಡುತ್ತಿರುವ ಸಿಬಿಐ ಮತ್ತು ಇಡಿ ಅಧಿಕಾರಿಗಳ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸದಂತೆ ನ್ಯಾ. ಗಂಗೋಪಾಧ್ಯಾಯ ಅವರನ್ನೊಳಗೊಂಡ ಏಕ ಸದಸ್ಯ ಪೀಠವು ಪಶ್ಚಿಮ ಬಂಗಾಳ ಪೊಲೀಸರಿಗೆ ಸೂಚನೆ ನೀಡಿತ್ತು.

ಪ್ರಕರಣದಲ್ಲಿ ನನ್ನ ಹೆಸರನ್ನು ಹೇಳುವಂತೆ ಕೇಂದ್ರದ ತನಿಖಾ ಸಂಸ್ಥೆಗಳು ಘೋಷ್ ಮೇಲೆ ಒತ್ತಡ ಹೇರುತ್ತಿವೆ ಎಂಬುದಾಗಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಅಳಿಯ ಅಭಿಶೇಕ್ ಬ್ಯಾನರ್ಜಿ ಸಾರ್ವಜನಿಕ ಭಾಷಣವೊಂದರಲ್ಲಿ ಹೇಳಿದ್ದರು. ಆ ಭಾಷಣದ ಆಧಾರದಲ್ಲಿ ಕಲ್ಕತ್ತಾ ಹೈಕೋರ್ಟ್ ತನಿಖೆಗೆ ಆದೇಶ ನೀಡಿತ್ತು.

Similar News