ಆಪರೇಶನ್ ಕಾವೇರಿ: ನೌಕಾ ಪಡೆಯ ಹಡಗಿನಲ್ಲಿ ಸುಡಾನ್‌ನಿಂದ ನಿರ್ಗಮಿಸಿದ ಭಾರತೀಯರ ಮೊದಲ ತಂಡ
ಹೊಸದಿಲ್ಲಿ, ಎ. 25: ಸುಡಾನ್‌ನಲ್ಲಿ ಸೇನೆ ಮತ್ತು ಅರೆ ಸೇನಾ ಪಡೆಯ ಸಂಘರ್ಷದಿಂದ ಸಂಕಷ್ಟದಲ್ಲಿ ಸಿಲುಕಿರುವ ಭಾರತೀಯರ ತೆರವು ಕಾರ್ಯಾಚರಣೆ ‘ಆಪರೇಷನ್ ಕಾವೇರಿ’ಯ ಭಾಗವಾಗಿ ಭಾರತೀಯರ ಮೊದಲ ತಂಡ ಭಾರತದ ನೌಕಾ ಪಡೆಯ ಹಡಗು ಐಎನ್‌ಎಸ್ ಸುಮೇಧದಲ್ಲಿ ಸುಡಾನ್‌ನಿಂದ ಸೋಮವಾರ ಹೊರಟಿದೆ.
278 ಭಾರತೀಯರಿರುವ ಹಡಗು ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿರುವ ಸುಡಾನ್ ಬಂದರಿನಿಂದ ನಿರ್ಗಮಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ತಿಳಿಸಿದ್ದಾರೆ. ‘‘ಸುಡಾನ್‌ನಲ್ಲಿ ಸಿಲುಕಿದ್ದ ಭಾರತೀಯರ ಮೊದಲ ತಂಡ ಆಪರೇಷನ್ ಕಾವೇರಿ ಅಡಿಯಲ್ಲಿ ನಿರ್ಗಮಿಸಿದೆ. 278 ಭಾರತೀಯರು ಇರುವ ಹಡಗು ಐಎನ್‌ಎಸ್ ಸುಮೇಧಾ ಜೆದ್ದಾಹ್‌ನ ಸುಡಾನ್ ಬಂದರಿನಿಂದ ನಿರ್ಗಮಿಸಿದೆ’’ ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಸೇನೆ ಮತ್ತು ಅರೆ ಸೇನಾ ಪಡೆಗಳ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಸುಡಾನ್‌ನಿಂದ ತನ್ನ ಪ್ರಜೆಗಳನ್ನು ವಾಪಸ್ ಕರೆ ತರಲು ಭಾರತ ಸೋಮವಾರ ‘ಆಪರೇಷನ್ ಕಾವೇರಿ’ ಆರಂಭಿಸಿತ್ತು. ತೆರವು ಕಾರ್ಯಾಚರಣೆಗೆ ಜಿದ್ದಾದಲ್ಲಿ ಭಾರತೀಯ ವಾಯು ಪಡೆಯ ಎರಡು ವಿಮಾನ ಹಾಗೂ ಸುಡಾನ್ ಬಂದರಿನಲ್ಲಿ ಭಾರತೀಯ ನೌಕಾ ಪಡೆಯ ಹಡಗು ಐಎನ್‌ಎಸ್ ಸುಮೇಧಾ ಸಜ್ಜಾಗಿ ನಿಂತಿದೆ ಎಂದು ರವಿವಾರ ಹೇಳಿತ್ತು.
ಸುಡಾನ್‌ನಾದ್ಯಂತ ಸಿಲುಕಿರುವ 3,000ಕ್ಕೂ ಅಧಿಕ ಭಾರತೀಯ ಪ್ರಜೆಗಳ ಸುರಕ್ಷೆಗೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿತ್ತು.