×
Ad

ಮುಸ್ಲಿಮ್ ದಂಪತಿಯ ಮದುವೆ ಪ್ರಮಾಣ ಪತ್ರ ಮನೆಬಾಗಿಲಿಗೆ; ದ.ಕ. ಜಿಲ್ಲೆಯಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಸೇವೆ ಆರಂಭ

Update: 2023-04-26 17:10 IST

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಮುಸ್ಲಿಮ್ ದಂಪತಿಯ ಮದುವೆ ಪ್ರಮಾಣ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು.

ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಹಾಗೂ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ಅವರು ಈ ಬಗ್ಗೆ ಒಪ್ಪಂದ ಮಾಡಿಕೊಂಡರು. ಅದರಂತೆ ರಾಜ್ಯದಲ್ಲೇ ಮೊದಲ ಬಾರಿಗೆ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮೂಲಕ ವಿತರಿಸಲಾಗುವ ಮದುವೆ ಪ್ರಮಾಣ ಪತ್ರಗಳನ್ನು ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ಬಂದಿದೆ.

ಮದುವೆ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ವಕ್ಫ್ ಸಲಹಾ ಸಮಿತಿಯು ಅರ್ಜಿದಾರರಿಗೆ ಎರಡು ಆಯ್ಕೆ ಗಳನ್ನು ನೀಡುತ್ತದೆ. ಅರ್ಜಿದಾರರು ದ.ಕ. ಜಿಲ್ಲಾ ವಕ್ಫ್ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು ಅಥವಾ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಪ್ರಮಾಣ ಪತ್ರವನ್ನು ತಮ್ಮ ಮನೆಬಾಗಿಲಲ್ಲಿ ಪಡೆದುಕೊಳ್ಳಬಹುದು.

ಗ್ರಾಹಕರ ಆಯ್ಕೆಯು ಕ್ರ.ಸಂ 2 ಆಗಿದ್ದಲ್ಲಿ ಮದುವೆ ಪ್ರಮಾಣ ಪತ್ರದ ಅರ್ಜಿಯಲ್ಲಿ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ  ಪಡೆದುಕೊಳ್ಳುವ ಆಯ್ಕೆಗೆ ಗುರುತು ಮಾಡಿ ಅರ್ಜಿಯನ್ನು ಕೌಂಟರ್‌ನಲ್ಲಿ ನೀಡಬೇಕು. ಈ ಪ್ರಮಾಣ ಪತ್ರದ ಅರ್ಜಿಯಲ್ಲಿ, ರವಾನೆಯಾಗಬೇಕಿರುವ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು ಹಾಗೂ 80 ರೂ.ವನ್ನು ರವಾನೆ ಮಾಡುವ ಸಂದರ್ಭ ಪೋಸ್ಟ್‌ಮ್ಯಾನ್‌ಗೆ ನೀಡಲು ತಮ್ಮ ಸಮ್ಮತಿ ಇದೆ ಎಂದು ಸಹಿ ಮಾಡಬೇಕು. ಪ್ರಮಾಣ ಪತ್ರವು ಮುದ್ರಣಗೊಂಡ ಬಳಿಕ ಅಂಚೆ ಇಲಾಖೆಯು ಈ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಗೆ ರವಾನಿಸಲಿದೆ.

ಈ ಸೇವೆಯು ಸಂಪೂರ್ಣವಾಗಿ ಐಚ್ಭಿಕವಾಗಿದೆ. ಪ್ರಮಾಣ ಪತ್ರವನ್ನು ಭಾರತದ ಯಾವುದೇ ಊರಿಗೂ 80 ರೂ. ಶುಲ್ಕವನ್ನು ಪಾವತಿಸಿ ಸ್ಪೀಡ್ ಪೋಸ್ಟ್ ಸೇವೆಯ ಮೂಲಕ ಪಡೆಯಬಹುದು. ಅರ್ಜಿದಾರರು ಪ್ರಮಾಣ ಪತ್ರವನ್ನು ಮನೆಯ ವಿಳಾಸ ಅಥವಾ ಕಚೇರಿಯ ವಿಳಾಸದಲ್ಲೂ ಪಡೆಯಬಹುದು. ಅರ್ಜಿದಾರರ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.

ದ.ಕ. ಜಿಲ್ಲಾ ವಕ್ಫ್  ಕಚೇರಿಗೆ ಅರ್ಜಿ ಸಲ್ಲಿಸಿದ 15 ದಿನದೊಳಗಾಗಿ ಪ್ರಮಾಣ ಪತ್ರವು ಮುದ್ರಣಗೊಳ್ಳಲಿದೆ. ನಂತರ ಅದನ್ನು 5 ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗು ವುದು. ಪ್ರತೀ ಹಂತದಲ್ಲೂ ಅರ್ಜಿದಾರರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು. ಈ ಸೇವೆಯನ್ನು ಪಡೆಯಲು ದ.ಕ. ಜಿಲ್ಲಾ ವಕ್ಫ್ ಕಚೇರಿ ಕೌಂಟರ್‌ನಲ್ಲಿ ಪ್ರತ್ಯೇಕ ಶುಲ್ಕ ಭರಿಸಬೇಕಾಗಿಲ್ಲ. ಸ್ಪೀಡ್ ಪೋಸ್ಟ್ ವಿತರಣೆಯ ಸಂದರ್ಭ ಪೋಸ್ಟ್‌ಮ್ಯಾನ್ ಮೂಲಕ 80 ರೂ. ನಿಗದಿತ ಶುಲ್ಕವನ್ನು ಅಂಚೆ ಕಚೇರಿಗೆ ಪಾವತಿಸಬೇಕು.

ಪ್ರಮಾಣ ಪತ್ರವನ್ನು ಪಡೆಯಲು ಪುನಃ ದ.ಕ. ಜಿಲ್ಲಾ ವಕ್ಫ್  ಕಚೇರಿಗೆ ಮತ್ತೆ ಮತ್ತೆ ಭೇಟಿ ನೀಡಬೇಕಾಗಿಲ್ಲ. ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್‌ಪೋಸ್ಟ್ ರವಾನೆಯ ಯಾವ ಹಂತದಲ್ಲಿವೆ ಎಂಬುದನ್ನು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ತೆಗೆದುಕೊಳ್ಳಬಹುದು ಎಂದು ಅಂಚೆ ಅಧೀಕ್ಷಕ ಶ್ರೀ ಹರ್ಷ ತಿಳಿಸಿದ್ದಾರೆ.

Similar News