×
Ad

ಐಐಟಿ-ಖರಗಪುರ ವಿದ್ಯಾರ್ಥಿ ಸಾವು: ದೇಹವನ್ನು ಹೊರತೆಗೆದು ಎರಡನೇ ಶವಪರೀಕ್ಷೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಆದೇಶ

Update: 2023-04-26 22:45 IST

ಕೋಲ್ಕತಾ,ಎ.26: ಐಐಟಿ-ಖರಗಪುರದ ವಿದ್ಯಾರ್ಥಿಯ ದೇಹವನ್ನು ಹೊರಕ್ಕೆ ತೆಗೆದು ಹೊಸದಾಗಿ ಶವಪರೀಕ್ಷೆ ನಡೆಸುವಂತೆ ಕಲ್ಕತ್ತಾ ಉಚ್ಚ ನ್ಯಾಯಾಲಯವು ಮಂಗಳವಾರ ಆದೇಶಿಸಿದೆ.

ವಿದ್ಯಾರ್ಥಿ ಫೈಝಾನ್ ಅಹ್ಮದ್ ಅ.14ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಮೃತಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಿಡ್ನಾಪುರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಡೆಸಿದ್ದ ಮರಣೋತ್ತರ ಪರೀಕ್ಷೆಯ ವರದಿಯು ಅಹ್ಮದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿತ್ತು. ಆದರೆ ಇದನ್ನು ಅಲ್ಲಗಳೆದಿದ್ದ ಅಹ್ಮದ್ ಕುಟುಂಬವು ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿತ್ತು.

‘ಅಹ್ಮದ್ ಸಾವನ್ನು ಆತ್ಮಹತ್ಯೆ ಪ್ರಕರಣವೆಂದು ಬಿಂಬಿಸಲು ಪೊಲೀಸರು ಮತ್ತು ಐಐಟಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿ ಆತನ ಕೊಲೆ ಮಾಡಿದ್ದಾರೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಐಐಟಿ ಅಧಿಕಾರಿಗಳು ಮತ್ತು ಪೊಲೀಸರು ಹೇಳುವುದನ್ನು ನ್ಯಾಯಾಲಯವೂ ಒಪ್ಪಿಕೊಳ್ಳುತ್ತಿಲ್ಲ ಎಂಬಂತೆ ಕಂಡು ಬರುತ್ತಿದೆ ’ಎಂದು ಮೃತ ವಿದ್ಯಾರ್ಥಿಯ ತಾಯಿ ಸುದ್ದಿಸಂಸ್ಥೆಗೆ ತಿಳಿಸಿದರು.

ಮರಣೋತ್ತರ ಪರೀಕ್ಷೆ ವರದಿ ತನಗೆ ತೃಪ್ತಿ ನೀಡಿಲ್ಲ ಎಂದು ವಿಧಿವಿಜ್ಞಾನ ವೈದ್ಯಕೀಯ ತಜ್ಞ ಅಜಯ ಗುಪ್ತಾ ಮಾ.29ರಂದು ಹೇಳಿದ್ದರು. ಈ ವಿಷಯದಲ್ಲಿ ತನಿಖೆ ನಡೆಸುವಂತೆ ನ್ಯಾಯಾಲಯವು ಅವರಿಗೆ ಸೂಚಿಸಿತ್ತು.

ವರದಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳು ಮತ್ತು ಮರಣೋತ್ತರ ಪರೀಕ್ಷೆಯ ವಿಡಿಯೋ ಸಾವಿನ ಕಾರಣ ಮತ್ತು ರೀತಿಯ ಕುರಿತು ನಿಖರವಾದ ನಿರ್ಧಾರಕ್ಕೆ ಬರಲು ಸಾಕಾಗುವುದಿಲ್ಲ ಎಂದು ಗುಪ್ತಾ ನ್ಯಾಯಾಲಯಕ್ಕೆ ತಿಳಿಸಿದ್ದರು.

ಅಹ್ಮದ್ರ ಹೆತ್ತವರು ಕೊಲೆಯನ್ನು ಆರೋಪಿಸಿ ಅಕ್ಟೋಬರ್ನಲ್ಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಈ ಹಿಂದೆ ಪರೀಕ್ಷೆಯನ್ನು ನಡೆಸಿದ್ದ ವೈದ್ಯರ ಉಪಸ್ಥಿತಿಯಲ್ಲಿ ಅಹ್ಮದ್ ಶವದ ಎರಡನೇ ಪರೀಕ್ಷೆ ನಡೆಸುವಂತೆ ಮಂಗಳವಾರ ನ್ಯಾ.ರಾಜಶೇಖರ ಮಂಥಾ ಅವರು ಗುಪ್ತಾರಿಗೆ ಸೂಚಿಸಿದರು.

ಶವಪರೀಕ್ಷೆಯನ್ನು ಕಲ್ಕತ್ತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಬಹುದು. ಫೈಝಾನ್ ಅಹ್ಮದ್ ಸಾವಿನ ಹಿಂದಿನ ಸತ್ಯವನ್ನು ತಿಳಿದುಕೊಳ್ಳಲು ಶವಪರೀಕ್ಷೆಯು ನಿರ್ಣಾಯಕ ಮತ್ತು ಅಗತ್ಯವಾಗಿದೆ ಎಂದು ನ್ಯಾ.ಮಂಥಾ ಹೇಳಿದರು.

Similar News