×
Ad

ಬೆಂಗಳೂರು: ಆನ್ ಲೈನ್ ನಲ್ಲಿ ಮತದಾರರ ವೈಯಕ್ತಿಕ ಮಾಹಿತಿ ಮಾರಾಟ ಮಾಡುತ್ತಿದ್ದ ಸಂಸ್ಥೆ!

ಪಕ್ಷೇತರ ಅಭ್ಯರ್ಥಿಯಿಂದ ಬೆಳಕಿಗೆ ಬಂತು ಬೃಹತ್ ಹಗರಣ ►ಖಾಸಗಿ ಕಂಪೆನಿ ಕೈಗೆ ಹೋಗಿದ್ದು ಹೇಗೆ ವೈಯಕ್ತಿಕ ಮಾಹಿತಿ?

Update: 2023-04-27 12:03 IST

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಖಾಸಗಿ ಸಂಸ್ಥೆಗಳಿಂದ ಮತದಾರರ ವೈಯಕ್ತಿ ಮಾಹಿತಿ ಕಳವು ಹಾಗೂ ಅವುಗಳ ದುರ್ಬಳಕೆ ಕಳವಳಕಾರಿ ಸ್ವರೂಪ ಪಡೆದಿದ್ದು, ಮತ್ತೊಂದು ವಂಚಕ ಖಾಸಗಿ ಸಂಸ್ಥೆಯು ಲಕ್ಷಾಂತರ ಮತದಾರರ ವೈಯಕ್ತಿ ಮಾಹಿತಿಗಳನ್ನು ಸ್ಪರ್ಧಾಕಣದಲ್ಲಿರುವ ಅಭ್ಯರ್ಥಿಗಳಿಗೆ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ಈ ಸಂಸ್ಥೆಯ ಮಾಲಕರನ್ನು ಇನ್ನೂ ಪತ್ತೆ ಹಚ್ಚಬೇಕಿದ್ದು, ಈ ಸಂಸ್ಥೆಯು ಬಹಿರಂಗವಾಗಿ ಮತದಾರರ ಮೊಬೈಲ್ ಸಂಖ್ಯೆ ಹಾಗೂ ವಾಟ್ಸ್ ಆ್ಯಪ್ ಸಂಖ್ಯೆಯಂಥ ಸೂಕ್ಷ್ಮ ಮಾಹಿತಿಗಳು ತನ್ನ ಬಳಿ ಇರುವುದಾಗಿ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿತ್ತು. ಈ ಅಂತರ್ಜಾಲ ತಾಣವನ್ನು ಪ್ರವೇಶಿಸಲು ಹಾಗೂ ತಮಗೆ ಬೇಕಾದ ಮಾಹಿತಿ ಮತ್ತು ಸೇವೆಯನ್ನು ಪಡೆಯಲು ಪ್ರಭಾವಿ ಅಭ್ಯರ್ಥಿಗಳಿಗೆ  ಕೇವಲ ರೂ. 25,000 ಶುಲ್ಕ ವಿಧಿಸಲಾಗಿತ್ತು ಎಂದು thenewsminute.com ವರದಿ ಮಾಡಿದೆ.

ಈ ಕುರಿತು ತನಿಖೆ ಆರಂಭಿಸಿರುವ ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳು, ಈ ಸಂಸ್ಥೆಯೇನಾದರೂ ಮತದಾರರಿಗೆ ಹಣವನ್ನು ಜಮಾ ಮಾಡಿ ಆಮಿಷ ಒಡ್ಡಲು ಏಕೀಕೃತ ಪಾವತಿ ಸಾಧನ(UPI)ದ ಬಳಕೆ ಮಾಡಿತ್ತೆ ಎಂದು ಪರಿಶೀಲಿಸುತ್ತಿದ್ದಾರೆ. ಇದು ಕರ್ನಾಟಕ ಚುನಾವಣಾ ಸಂದರ್ಭದಲ್ಲಿ ಅಪ್ಪಳಿಸಿರುವ ಮತ್ತೊಂದು ಮತದಾರರ ಹಗರಣವಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ತಾವು ಬಿಬಿಎಂಪಿ ಅಧಿಕಾರಿಗಳು ಎಂದು ಬಿಂಬಿಸಿಕೊಂಡು ಚಿಲುಮೆ ಎಂಬ ಖಾಸಗಿ ಸಂಸ್ಥೆಯು ಲಕ್ಷಾಂತರ ಮತದಾರರ ವೈಯಕ್ತಿಕ ದತ್ತಾಂಶ ಸಂಗ್ರಹಿಸಿದ್ದ ಸಂಗತಿಯನ್ನು thenewsminute.com ಸುದ್ದಿ ಸಂಸ್ಥೆ ಬಯಲಿಗೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಗರಣ ಬೆಳಕಿಗೆ ಬಂದಿದ್ದು ಹೇಗೆ?

ಮತದಾರರ ದತ್ತಾಂಶದ ಮಾರಾಟಗಾರರು ಸ್ವತಂತ್ರ ಅಭ್ಯರ್ಥಿಯಾದ ರಾಜು ಎಂಬುವವರನ್ನು ಸಂಪರ್ಕಿಸಿದಾಗ, ಈ ಕುರಿತು ಅವರು ಭಾರತೀಯ ಚುನಾವಣಾ ಆಯೋಗವನ್ನು ಎಚ್ಚರಿಸಿದ್ದರಿಂದ ಈ ಹಗರಣ ಬೆಳಕಿಗೆ ಬಂದಿದೆ. ಒಂದು ನಿರ್ದಿಷ್ಟ ಬೆಲೆಗೆ ಮತದಾರರ ದತ್ತಾಂಶವನ್ನು ನಿಮಗೆ ಮಾರಾಟ ಮಾಡಲಾಗುವುದು ಎಂಬ ಕರೆ ಸ್ವೀಕರಿಸಿದ್ದ ರಾಜು, ಈ ಕುರಿತು ಚುನಾವಣಾ ನೀತಿ ಸಂಹಿತೆ ಜಾರಿಯ ಮೇಲುಸ್ತುವಾರಿ ಅಧಿಕಾರಿಯಾದ ಶ್ರೀನಿವಾಸ್ ಅವರ ಗಮನಕ್ಕೆ ತಂದಿದ್ದರು. ನಂತರ ಶ್ರೀನಿವಾಸ್ ಈ ಕುರಿತು ಪೊಲೀಸರನ್ನು ಸಂಪರ್ಕಿಸಿ, ಎಪ್ರಿಲ್ 24ರಂದು ದೂರು ದಾಖಲಿಸಿದ್ದರು.

ಅಭ್ಯರ್ಥಿ ರಾಜು ಅವರಿಗೆ ಖಾಸಗಿ ಸಂಸ್ಥೆಯು ಒದಗಿಸಿದ್ದ ಲಾಗಿನ್ ಅನ್ನು ಬಳಸಿಕೊಂಡು thenewsminute.com ಆ ಅಂತರ್ಜಾಲ ತಾಣವನ್ನು ಪ್ರವೇಶಿಸಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಆ ಅಂತರ್ಜಾಲದ ಮುಖ ಪುಟದಲ್ಲೇ ತನ್ನ ಬಳಿ 6.5 ಲಕ್ಷ ಮತದಾರರ ದತ್ತಾಂಶವಿದ್ದು, ಈ ಪೈಕಿ 3,45,089 ಪುರುಷರು, 2,93,000 ಮಹಿಳೆಯರು ಹಾಗೂ 5,630 ಇತರೆ ಮತದಾರರ ದತ್ತಾಂಶವಿದೆ ಎಂದು ಪ್ರಕಟಿಸಲಾಗಿದೆ. ಆದರೆ, ಅವರ ಬಳಿ ಇರುವ ಒಟ್ಟಾರೆ ದತ್ತಾಂಶವು ಇಷ್ಟೇನಾ ಅಥವಾ ನಿರ್ದಿಷ್ಟ ಕ್ಷೇತ್ರಗಳಿಗೆ ಮಾತ್ರ ಸೇರಿದ್ದಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಭಾರತೀಯ ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಮಾರಾಟಕ್ಕಿರುವ ಮತದಾರರ ದತ್ತಾಂಶಗಳು ಭಾರತೀಯ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುವ ERONET ಸಂಗ್ರಹಣಾ ಕೋಶದಲ್ಲಿನ ಮತದಾರರ ಮಾಹಿತಿಯಂತೆಯೇ ಇವೆ ಎಂದು ತಿಳಿಸಿವೆ.

ಆದರೆ ಆ ವೆಬ್ ಸೈಟ್ ಗೆ ಆಕ್ಸೆಸ್ ಇರೋದು ಕೇವಲ ಚುನಾವಣಾ ಅಧಿಕಾರಿಗಳಿಗೆ ಮಾತ್ರ.  ಹಾಗಾದರೆ ಅದೇ ರೀತಿಯ ಮಾಹಿತಿ ಖಾಸಗಿ ಕಂಪೆನಿ ಕೈಗೆ ಹೇಗೆ ಹೋಯಿತು? ಎಂಬ ಪ್ರಶ್ನೆ ಚುನಾವಣಾ ಆಯೋಗಕ್ಕೆ ತಲೆ ನೋವುಂಟು ಮಾಡಿದೆ*. 

ಅಂತರ್ಜಾಲ ತಾಣದ ವಿವರಗಳನ್ನು ಪರಿಶೀಲಿಸಿದಾಗ ಈ ಅಂತರ್ಜಾಲ ತಾಣವು ದಿಲ್ಲಿಯಲ್ಲಿ ಎಪ್ರಿಲ್ 2023ರಲ್ಲಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ಈ ಅಂತರ್ಜಾಲದ ಉಳಿದೆಲ್ಲ ವಿವರಗಳನ್ನು ಸಂಸ್ಥೆಯು ನಿಷ್ಕ್ರಿಯಗೊಳಿಸಿದೆ ಎಂದು thenewsminute.com ವರದಿ ಮಾಡಿದೆ.

Similar News