×
Ad

ಮೋದಿ ಪ್ರಚಾರ ಮಾಡಿದ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿಲ್ಲವೇ? : ಕಾಂಗ್ರೆಸ್ ಪ್ರಶ್ನೆ

Update: 2023-04-28 20:50 IST
ಉಡುಪಿ : ರಾಹುಲ್ ಗಾಂಧಿ ಚುನಾವಣಾ ಪ್ರಚಾರಕ್ಕೆ ಹೋದ ಕಡೆ ಕಾಂಗ್ರೆಸ್ ಸೋತ ಇತಿಹಾಸವಿದೆ ಎಂದು ಹೇಳಿಕೆ ನೀಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಹೇಳಿಕೆ ಅವರ ಜಾಣ ಮರೆವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದ ಮೋದಿಯವರು ಹಲವು ರಾಜ್ಯಗಳ ಚುನಾವಣೆಗಳಲ್ಲಿ ಪ್ರಚಾರಕ್ಕೆ ಹೋದರೂ ಅಲ್ಲಿ ಅಧಿಕಾರವನ್ನು ಗಳಿಸುವಲ್ಲಿ ವಿಫಲರಾಗಿಲ್ಲವೇ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಪ್ರಶ್ನಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಈ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕೊಡವೂರು, ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಈ ವಿಷಯ ನೆನಪಿಸಿರಬೇಕಿತ್ತು ಎಂದು ಹೇಳಿದ್ದಾರೆ. ರಾಜಸ್ಥಾನ, ಹಿಮಾಚಲ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಗೆ ಮೋದಿಯವರು ಪ್ರಚಾರಕ್ಕೆ ತೆರಳಿದ್ದರೂ ಆ ರಾಜ್ಯಗಳಲ್ಲಿ ಬಿಜೆಪಿ ಸೋಲಲು ಮೋದಿ ಕಾರಣರೇ ಎಂಬುದನ್ನು ಅಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಹುಲ್ ಗಾಂಧಿ, ಅದಾನಿ ಕುರಿತ ಹಗರಣವನ್ನು ಲೋಕಸಭೆಯಲ್ಲಿ ಎತ್ತಿದ ಕೆಲವೇ ದಿನಗಳಲ್ಲಿ ಅವರ ವಿರುದ್ಧ ಕೋರ್ಟ್ ತೀರ್ಪು ಬಂತು. 24 ಗಂಟೆ ಒಳಗೆ ಅವರನ್ನು ಸದಸ್ಯತನದಿಂದ ಅನರ್ಹಗೊಳಿಸಲಾಯಿತು. ಹಗರಣವನ್ನು ಮುನ್ನಲೆಗೆ ತರದಂತೆ ತಡೆಯಲಾಯಿತು. ವಿದ್ಯಾವಂತ ಹಾಗೂ ದೇಶ-ವಿದೇಶಗಳ ಆಗುಹೋಗುಗಳ ಸ್ವಷ್ಟ ಅರಿವಿರುವ, ಎಲ್ಲರೊಂದಿಗೆ ಬೆರೆಯುವ ರಾಹುಲ್ ಅವರ ವ್ಯಕ್ತಿತ್ವವನ್ನು ಹಾಳುಗೆಡವಲು ಹಲವಾರು ಕೋಟಿ ಖರ್ಚು ಮಾಡಲಾಯಿತು. ಅಂದರೆ ಇದು ರಾಹುಲ್ ಬಗ್ಗೆ ಬಿಜೆಪಿಗೆ ಇರುವ ಭಯವಲ್ಲದೆ ಮತ್ತೇನು ಎಂದು ಅಶೋಕ್ ಕುಮಾರ್ ಕೊಡವೂರು ಪ್ರಶ್ನಿಸಿದ್ದಾರೆ. ಬಿಜೆಪಿ ಗೆಲ್ಲುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಹತಾಶರಾಗಿ ಈ ಹೇಳಿಕೆ ನೀಡುತ್ತಿದ್ದಾರೆ. ಭ್ರಷ್ಟ ರಾಜ್ಯ ಸರಕಾರದ ಬಗ್ಗೆ ಜನರು ಭ್ರಮ ನಿರಸನ ಗೊಂಡಿದ್ದಾರೆ ಎಂದು ಕೊಡವೂರು ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

Similar News