ನಾಗರಿಕ ಸಮಾಜ ಗುಂಪುಗಳ ಬಗ್ಗೆ ಭೀತಿ

Update: 2023-06-30 05:54 GMT

ಹಿಂದೆಯೂ ಯಾವುದೇ ರಾಜಕೀಯ ಪಕ್ಷಗಳು ನಾಗರಿಕ ಸಮಾಜ ಸಂಸ್ಥೆಗಳು ಸಂಪೂರ್ಣ ಸ್ವತಂತ್ರವಾಗಿರುವುದನ್ನು ಇಷ್ಟಪಟ್ಟಿರಲಿಲ್ಲ ಎಂಬುದು ನಿಜವಾಗಿದ್ದರೂ, ಬಿಜೆಪಿ ಇಂದು ಕೇವಲ ಅಸಡ್ಡೆ ಅಥವಾ ಅನುಮಾನದಿಂದ ನೋಡುವುದಷ್ಟೇ ಅಲ್ಲ, ಬದಲಾಗಿ ಅವುಗಳ ಮೇಲೆ ಹಗೆ ಸಾಧಿಸುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿವಿಲ್ ಸೊಸೈಟಿ ಫೋರಂನ ಸಭೆಗೆ ಪ್ರತಿನಿಧಿಯನ್ನು ಕಳುಹಿಸದಿರುವುದು ಮರೆವು ಅಥವಾ ಅಜಾಗರೂಕತೆ ಮಾತ್ರವಲ್ಲ, ಅದು ಉದ್ದೇಶಪೂರ್ವಕ ನಡೆ. ತನ್ನ ಸಿದ್ಧಾಂತದ ಪ್ರಚಾರ ಮತ್ತು ತನ್ನ ಆಡಳಿತದ ನಿರಂತರತೆಗೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಉತ್ಸಾಹಿ ನಾಗರಿಕ ಸಮಾಜ ಗುಂಪುಗಳು ವಿರುದ್ಧವೆಂದು ಬಿಜೆಪಿ ಭಾವಿಸುವುದು ಹೆಚ್ಚಾಗುತ್ತಿದೆ.



ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳಿಗಾಗಿ ರಾಜ್ಯದ 36 ಸ್ವಯಂಸೇವಾ ಸಂಸ್ಥೆಗಳು ಸೇರಿ ಈ ತಿಂಗಳ ಶುರುವಿನಲ್ಲೊಂದು ಪ್ರಣಾಳಿಕೆ ಸಿದ್ಧಪಡಿಸಿದವು. ಈ 'ಸಿವಿಲ್ ಸೊಸೈಟಿ ಫೋರಮ್' ದಲಿತರು, ಮಹಿಳೆಯರು ಮತ್ತು ಕೊಳೆಗೇರಿ ನಿವಾಸಿಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಗುಂಪುಗಳು, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಗುಂಪುಗಳು, ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿಗಳ ಸಂಪೂರ್ಣ ಅನ್ವಯಿಸುವಿಕೆ ಮೂಲಕ ರಾಜಕೀಯ ವಿಕೇಂದ್ರೀಕರಣಕ್ಕಾಗಿ ಒತ್ತಾಯಿಸುವ ಗುಂಪುಗಳನ್ನು ಒಳಗೊಂಡಿತ್ತು. 20 ಪುಟಗಳ ಪ್ರಣಾಳಿಕೆ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಇತ್ತು. ಆ ಗುಂಪುಗಳ ವಿವಿಧ ಆದ್ಯತೆಗಳು ಮತ್ತು ರಾಜ್ಯದ ಜನರು ಎದುರಿಸುತ್ತಿರುವ ವಿಭಿನ್ನ ಸವಾಲುಗಳನ್ನು ಬಿಂಬಿಸುವ ವ್ಯಾಪಕ ವಿಚಾರಗಳನ್ನು ಅದು ಒಳಗೊಂಡಿತ್ತು. ಈ ಬೇಡಿಕೆಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಲು ಮತ್ತು ಅವುಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳನ್ನು ಸಿವಿಲ್ ಸೊಸೈಟಿ ಫೋರಂ ಕೇಳಿಕೊಂಡಿತು.

ಪ್ರಣಾಳಿಕೆ ಹಂಚಿಕೆ ಬಳಿಕ ನಡೆದ ಸಭೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಯಿತು. ನಾನು ಕೂಡ ಸಭೆಗೆ ಹಾಜರಾಗಿದ್ದೆ. ಎಲ್ಲವನ್ನೂ ಆಸಕ್ತಿಯಿಂದ ಗಮನಿಸಿದೆ. ಆಡಳಿತ, ಆರೋಗ್ಯ, ಶಿಕ್ಷಣ, ಕೃಷಿ, ಸಾಮಾಜಿಕ ನ್ಯಾಯ ಕುರಿತು ನಾಗರಿಕ ಸಮಾಜ ಗುಂಪುಗಳ ಕಾರ್ಯಕರ್ತರು ವಿಚಾರ ಮಂಡಿಸಿದರು. ಹಾಜರಿದ್ದ ರಾಜಕಾರಣಿಗಳು ಅದಕ್ಕೆ ಪ್ರತಿಕ್ರಿಯೆ ನೀಡಿದರಲ್ಲದೆ, ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚೆಗಳು ರಚನಾತ್ಮಕವಾಗಿದ್ದವು. ಸಹನೆ ಮತ್ತು ತಿಳಿದುಕೊಳ್ಳುವ ಮನಃಸ್ಥಿತಿಯಿತ್ತು. ಆದರೆ, ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳ ಪೈಕಿ ಜೆಡಿಎಸ್ ಮತ್ತು ಬಿಜೆಪಿ ಈ ಸಭೆಯಲ್ಲಿರಲಿಲ್ಲ. ಕಾಂಗ್ರೆಸ್ ತನ್ನ ಪ್ರತಿನಿಧಿಯನ್ನು ಕಳಿಸಿತ್ತು. ರಾಜ್ಯದಲ್ಲಿ ಛಾಪು ಮೂಡಿಸಲು ಯತ್ನಿಸುತ್ತಿರುವ ಆಪ್ ಮತ್ತು ಕಾರ್ಮಿಕ ವರ್ಗ ಬೆಂಬಲಿತ ಸಿಪಿಐಎಂ ಪ್ರತಿನಿಧಿಗಳಿದ್ದರು.

ಸಂಘಟಕರು ಜೆಡಿಎಸ್ ಮತ್ತು ಬಿಜೆಪಿಗೆ ಪದೇ ಪದೇ ಕರೆ ಮಾಡಿದರು. ವಕ್ತಾರರನ್ನು ಕಳುಹಿಸುವುದಾಗಿ ಅವು ಭರವಸೆ ನೀಡಿದವಾದರೂ ಕಳಿಸಲಿಲ್ಲ. ಏಕೆ? ನನ್ನ ಊಹೆಯಂತೆ, ಜೆಡಿಎಸ್‌ಗೆ ಅದರ ಬಗ್ಗೆ ಬಹುಶಃ ಅಸಡ್ಡೆ. ಅದಕ್ಕೆ ನಾಗರಿಕ ಸಮಾಜ ಸಂಸ್ಥೆಗಳ ಬಗ್ಗೆ ಕಾಳಜಿಯಿಲ್ಲ. ಇನ್ನು ಬಿಜೆಪಿಗೆ ಸ್ವತಂತ್ರ ಧೋರಣೆಯ ನಾಗರಿಕ ಸಮಾಜ ಗುಂಪುಗಳ ಬಗ್ಗೆ ತೀವ್ರ ಅಸಮ್ಮತಿ.

ಬಿಜೆಪಿಯ ಈ ಅಸಮ್ಮತಿಗೆ ಮೂಲ ಭಾಗಶಃ ಆರೆಸ್ಸೆಸ್‌ನ ಸೈದ್ಧಾಂತಿಕ ದೃಷ್ಟಿಕೋನದಲ್ಲಿದೆ. ಮೂಲತಃ ನಿರಂಕುಶವಾದಿ ಮನಃಸ್ಥಿತಿಯ ಆರೆಸ್ಸೆಸ್, ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಎಲ್ಲವನ್ನೂ ನಿಯಂತ್ರಿಸಲು ಯತ್ನಿಸುತ್ತದೆ. ರೈತರು, ಬುಡಕಟ್ಟುಗಳು, ಮಹಿಳೆಯರು, ವಿದ್ಯಾರ್ಥಿಗಳು, ಸುತ್ತಲಿನ ಗುಂಪುಗಳು ಎಲ್ಲಿಯೂ ಅದು ತನ್ನ ಕೆಲಸಕ್ಕೆ ಮತ್ತೊಂದು ಪೈಪೋಟಿಯನ್ನು ಇಷ್ಟಪಡುವುದಿಲ್ಲ.
ನಾಗರಿಕ ಸಮಾಜ ಗುಂಪುಗಳ ಕುರಿತ ಬಿಜೆಪಿಯ ಅಸಮ್ಮತಿಗೆ ಮತ್ತೊಂದು, ಬಹುಶಃ ಅತಿ ಪ್ರಮುಖ ಕಾರಣ, ಈಗಿನ ಪ್ರಧಾನಿಯ ವ್ಯಕ್ತಿತ್ವ. ಸ್ವಾಭಾವಿಕವಾಗಿ ಸರ್ವಾಧಿಕಾರಿಯಾಗಿದ್ದು, ಅಧಿಕಾರದಲ್ಲಿರುವಾಗ ಆಡಳಿತದ ಮೇಲೆ ಪೂರ್ತಿ ನಿಯಂತ್ರಣ ಹೊಂದಲು ನರೇಂದ್ರ ಮೋದಿ ಯತ್ನಿಸುತ್ತಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ಅವರು ರಾಜ್ಯದ ನಾಗರಿಕ ಸಮಾಜ ಗುಂಪುಗಳನ್ನು ತೀವ್ರವಾಗಿ ದಮನಿಸಿದರು. ವಾಸ್ತವವಾಗಿ, ಆ ಸಮಯದಲ್ಲಿ ಅವರು ಆರೆಸ್ಸೆಸ್‌ನ ಗುಜರಾತ್ ಘಟಕವನ್ನೂ ತಮ್ಮ ಅಧಿಕಾರಕ್ಕೆ ಪ್ರತಿಸ್ಪರ್ಧಿ ಎಂಬ ಅನುಮಾನದಿಂದ ನೋಡುತ್ತಿದ್ದರು. ಪ್ರಧಾನಿಯಾಗಿ ದಿಲ್ಲಿಗೆ ಹೋದ ಬಳಿಕ ಆರೆಸ್ಸೆಸ್‌ನೊಂದಿಗಿನ ಮೋದಿ ಸಂಬಂಧಗಳು ಸುಧಾರಿಸಿವೆ. ಸಂಘವೇ ತಾನು ಮೋದಿಗಿಂತ ಹಿಂದಿರಲು ಒಪ್ಪಿಕೊಂಡಿರುವುದು ಅದಕ್ಕೆ ಕಾರಣ.

ನರೇಂದ್ರ ಮೋದಿಯ ಈ ಒಂಭತ್ತು ವರ್ಷಗಳ ಆಡಳಿತ ಸ್ವಯಂಸೇವಾ ಸಂಸ್ಥೆಗಳ ವಿರುದ್ಧ ಘೋರ ಹಗೆತನ ತೋರಿಸಿದೆ. ಯಾವುದೇ ರಾಜಕೀಯ ಪಕ್ಷ ಅಥವಾ ಧಾರ್ಮಿಕ ಸಂಸ್ಥೆಗಳೊಂದಿಗೆ ಸಂಬಂಧವಿರದೆ, ಶಿಕ್ಷಣ, ಆರೋಗ್ಯ, ನೀತಿ ಸಂಶೋಧನೆ ಮತ್ತು ಸಮಾಜ ಕಲ್ಯಾಣದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಗುಂಪುಗಳಿಗೆ ತೆರಿಗೆ ದಾಳಿ ಮೂಲಕ ಕಿರುಕುಳ ಕೊಡಲಾಗಿದೆ. ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಅಡಿಯಲ್ಲಿ ಅವು ದೇಣಿಗೆ ಪಡೆಯುವುದಕ್ಕಿದ್ದ ಅನುಮತಿ ಹಿಂಪಡೆಯಲಾಗಿದೆ. ಅನೇಕ ಸಂಸ್ಥೆಗಳು ಇಂಥ ಕಿರುಕುಳಕ್ಕೆ ತುತ್ತಾಗಿವೆ. ಆಕ್ಸ್‌ಫಾಮ್ ಮತ್ತು ನೀತಿ ಸಂಶೋಧನಾ ಕೇಂದ್ರ ಅತ್ಯುತ್ತಮ ಉದಾಹರಣೆಗಳು. ಇದೇ ವೇಳೆ, ಈ ಸರಕಾರದ ಬಗ್ಗೆ ಸಹಾನುಭೂತಿ ಹೊಂದಿರುವ ಹಿಂದುತ್ವ ಗುಂಪುಗಳು ವಿದೇಶಿ ಹಣ ಪಡೆಯುವುದಕ್ಕೆ ಯಾವ ನಿರ್ಬಂಧವೂ ಇಲ್ಲ. ಎರಡು ವರ್ಷಗಳ ಹಿಂದೆ, ಅನಿವಾಸಿ ಹಿಂದೂಗಳು ಆರೆಸ್ಸೆಸ್ ಸಂಯೋಜಿತ ಸಂಸ್ಥೆಗಳಿಗೆ ಮುಕ್ತವಾಗಿ ಹಣ ನೀಡುತ್ತಿರುವಾಗ ಧಾರ್ಮಿಕೇತರ ಸಂಸ್ಥೆಗಳ ಎಫ್‌ಸಿಆರ್‌ಎ ನೋಂದಣಿ ರದ್ದುಗೊಳಿಸಿದ ವರದಿಯಿತ್ತು. ಕನ್ನಡದ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್ ಅವರು ವ್ಯಂಗ್ಯವಾಗಿ ಅದನ್ನು ದಾಖಲಿಸಿದ್ದರು: ಮೋದಿಜಿ ಹೇಳುತ್ತಾರೆ, ''ಒಂದು ರಾಷ್ಟ್ರ, ಒಂದು ಎನ್‌ಜಿಒ''

ಸತ್ಯವೆಂದರೆ, 2004ರಿಂದ 2014ರ ಅವಧಿಯಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕೂಡ ತನಗೆ ತೊಂದರೆಯಿದೆ ಎಂಬ ಭಯದಲ್ಲಿ, ವಿಶೇಷವಾಗಿ ಪರಿಸರ ಮತ್ತು ಮಾನವ ಹಕ್ಕುಗಳ ಮೇಲೆ ಕೆಲಸ ಮಾಡುವ ಎನ್‌ಜಿಒಗಳಿಗೆ ಕಿರುಕುಳ ನೀಡಲು ಎಫ್‌ಸಿಆರ್‌ಎ ದುರುಪಯೋಗ ಮಾಡಿಕೊಂಡಿತ್ತು. ಅದೇ ಹೊತ್ತಿನಲ್ಲಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂತಹ ಸಮಾಜ ಕಲ್ಯಾಣ ನೀತಿಗಳಿಗೆ ಸಂಬಂಧಿಸಿ ನಾಗರಿಕ ಸಮಾಜ ಗುಂಪುಗಳಿಂದ ಕಾಂಗ್ರೆಸ್ ಸಲಹೆ ಕೇಳಿತ್ತು. ಎನ್‌ಜಿಒಗಳ ವಿಚಾರವಾಗಿ ಯುಪಿಎ ಸರಕಾರದ ಧೋರಣೆಯಲ್ಲಿ ದ್ವಂದ್ವವಿತ್ತು. ಇನ್ನೊಂದೆಡೆ, ಈಗ ಅಧಿಕಾರದಲ್ಲಿರುವ ಬಿಜೆಪಿ, ಬಹುಸಂಖ್ಯಾತ ಹಿಂದುತ್ವದ ಅಜೆಂಡಾ ಮತ್ತು ಪ್ರಧಾನಿಯ ವ್ಯಕ್ತಿತ್ವ ಆರಾಧನೆಗೆ ವಿರುದ್ಧವಿರುವ ಎಲ್ಲಾ ನಾಗರಿಕ ಸಮಾಜ ಸಂಸ್ಥೆಗಳನ್ನು ಅಪನಂಬಿಕೆಯಿಂದ ನೋಡುತ್ತದೆ.

ನಾಗರಿಕ ಸಮಾಜ ಗುಂಪುಗಳೆಡೆಗಿನ ಈ ಭಯ ಸಾಮಾನ್ಯವಾಗಿ ಸ್ವತಂತ್ರ ಪರಿಶೀಲನೆ ಕುರಿತ ಪ್ರಸಕ್ತ ಸರಕಾರಕ್ಕಿರುವ ಭಯದ್ದೇ ಒಂದು ಭಾಗ. ಹಾಗಾಗಿಯೇ, ಎರಡು ಅವಧಿಯ ಅಧಿಕಾರಾವಧಿಯಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿಯನ್ನೂ ಪ್ರಧಾನಿ ನಡೆಸಿಲ್ಲ. ಮುಕ್ತ ನಿಲುವಿನ ಪತ್ರಿಕೋದ್ಯಮದ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ. ಪತ್ರಕರ್ತರು ಮತ್ತು ವಿದ್ಯಾರ್ಥಿ ಹೋರಾಟಗಾರರನ್ನು ಯುಎಪಿಎ ಅಡಿಯಲ್ಲಿ ಜೈಲಿನಲ್ಲಿರಿಸಲಾಗುತ್ತಿದೆ. ಸಿಎಎ ಮತ್ತು ಕೃಷಿ ಕಾನೂನುಗಳ ವಿರುದ್ಧದ ಪ್ರಶಂಸನೀಯ ಶಾಂತಿಯುತ ಪ್ರತಿಭಟನೆಗಳ ವಿರುದ್ಧ ವಿಷಮಯ ಪ್ರಚಾರ ನಡೆದಿದೆ. ವಿದೇಶಿ ವಿದ್ವಾಂಸರಿಗೆ ಸಂಶೋಧನಾ ವೀಸಾಗಳ ನಿರಾಕರಣೆ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳು ನಡೆಸುತ್ತಿರುವ ವಿಚಾರ ಸಂಕಿರಣಗಳ ಮೇಲಿನ ನಿರ್ಬಂಧಕ್ಕೂ ಇದೇ ಕಾರಣ.

ಹಾಗೆಂದು, ಬಿಜೆಪಿಯೇತರ ರಾಜ್ಯ ಸರಕಾರಗಳು ತಮ್ಮ ನೀತಿಗಳ ಸ್ವತಂತ್ರ ಮೌಲ್ಯಮಾಪನವನ್ನು ಹೆಚ್ಚು ಇಷ್ಟಪಡುತ್ತವೆ ಎಂದೇನೂ ಅಲ್ಲ. ಪಕ್ಷದಾಚೆಗೆ ರಚನಾತ್ಮಕ ಕೆಲಸ ಮಾಡುವ ತಳಮಟ್ಟದ ಸಂಘಟನೆಗಳನ್ನು ಪ್ರೋತ್ಸಾಹಿಸುವ ಇಚ್ಛೆ ಅವಕ್ಕೂ ಇಲ್ಲ. ಸಿಪಿಐಎಂ ಮತ್ತು ಟಿಎಂಸಿ ಆಡಳಿತದಲ್ಲಿನ ಪಶ್ಚಿಮ ಬಂಗಾಳ, ಎಐಎಡಿಎಂಕೆ ಮತ್ತು ಡಿಎಂಕೆ ಆಡಳಿತದಲ್ಲಿನ ತಮಿಳುನಾಡು, ವೈಆರ್‌ಎಸ್ ಕಾಂಗ್ರೆಸ್ ಆಡಳಿತದ ಆಂಧ್ರ ಮತ್ತು ಟಿಆರ್‌ಎಸ್ ಆಡಳಿತದ ತೆಲಂಗಾಣದಲ್ಲಿ ಇದು ಸಾಬೀತಾಗಿದೆ. ಅದೇನೇ ಇದ್ದರೂ, ಬಿಜೆಪಿ ನಾಗರಿಕ ಸಮಾಜ ಗುಂಪುಗಳು ಮತ್ತು ಸ್ವತಂತ್ರ ಚಿಂತನೆ ಕುರಿತ ಹಗೆತನವನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. ಅಲ್ಲದೆ, ಸಿಪಿಐಎಂ, ಟಿಎಂಸಿ, ಡಿಎಂಕೆ ಮೊದಲಾದವುಗಳಿಗಿಂತ ಬೇರೆಯಾಗಿ, ಬಿಜೆಪಿ ಕೇಂದ್ರದಲ್ಲಿ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ನಾಗರಿಕ ಸಮಾಜ ಸಂಘಟನೆಗಳನ್ನು ಹತ್ತಿಕ್ಕಲು ಮತ್ತು ಬೆದರಿಸಲು ಅಧಿಕಾರದ ಸನ್ನೆಗಳನ್ನು ಬಳಸುವುದಕ್ಕೆ ಬಹಳ ಬಲಶಾಲಿಯಾಗಿದೆ.

1830ರ ಸುಮಾರಿನಲ್ಲಿ ಫ್ರೆಂಚ್ ಚಿಂತಕ ಅಲೆಕ್ಸಿಸ್ ಡಿ ಟೊಕ್ವಿಲ್ಲೆ, ಅಮೆರಿಕ ಪ್ರಜಾಪ್ರಭುತ್ವ ಅದರ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ವಯಂಸೇವಾ ಸಂಘಗಳಿಂದ ಪೋಷಿತವಾಗಿದೆ ಎಂದು ವಾದಿಸಿದ್ದ. ಆ ವೇಳೆ ಶ್ರೀಮಂತ ಯುರೋಪ್ ಹಿಂದುಳಿದಿದ್ದರೂ, 19ನೇ ಶತಮಾನದ ಕೊನೆಯ ವೇಳೆಗೆ ಅದು ತನ್ನದೇ ಆದ ಅನೇಕ ಅಭಿವೃದ್ಧಿಶೀಲ ಸ್ವಯಂಸೇವಾ ಸಂಘಗಳನ್ನು ಹೊಂದಿತ್ತು. ಅವು ವಿಮರ್ಶಾತ್ಮಕ ಮತ್ತು ರಚನಾತ್ಮಕ ಎಂದು ಎರಡು ವಿಧವಾಗಿದ್ದವು. ಮೊದಲನೆಯವು ನಾಗರಿಕರಿಗೆ ಬಯಕೆ ಅಥವಾ ಭಯದಿಂದ ಸ್ವಾತಂತ್ರ್ಯ ಖಾತರಿಪಡಿಸುವಲ್ಲಿ ಸರಕಾರದ ವೈಫಲ್ಯ ಕುರಿತು ಬೆಳಕು ಚೆಲ್ಲಿದರೆ, ಎರಡನೆಯವು ಶಾಲೆ, ಆಸ್ಪತ್ರೆ ಇತ್ಯಾದಿಗಳ ಸ್ಥಾಪನೆ ಮೂಲಕ ಆ ವೈಫಲ್ಯಗಳನ್ನು ನಿವಾರಿಸಲು ಯತ್ನಿಸಿದವು.

ಟೋಕ್ವಿಲ್ಲೆ ಆ ಮಾತು ಹೇಳಿದ ಸುಮಾರು ಎರಡು ಶತಮಾನಗಳ ನಂತರ ಬರೆಯುತ್ತಿರುವ ನಾನು, ದೇಶದ ನಾಗರಿಕ ಸಮಾಜ ಸಂಸ್ಥೆಗಳ ಆರೋಗ್ಯ ಒಟ್ಟಾರೆಯಾಗಿ ಅದರ ರಾಜಕೀಯ ವ್ಯವಸ್ಥೆಯ ಆರೋಗ್ಯದ ಸೂಚಕ ಎಂಬ ಆತನ ದೃಷ್ಟಿಕೋನವನ್ನು ಒಪ್ಪುತ್ತೇನೆ. ಈ ನಿಟ್ಟಿನಲ್ಲಿ, ಭಾರತ ತುರ್ತು ಪರಿಸ್ಥಿತಿ ನಂತರದ ದಶಕಗಳಲ್ಲಿ ಬಹುಶಃ ಅತ್ಯಂತ ಪ್ರಜಾಸತ್ತಾತ್ಮಕವಾಗಿತ್ತು. ಆಗ ವಿಮರ್ಶಾತ್ಮಕ ಮತ್ತು ರಚನಾತ್ಮಕ ಎರಡೂ ಬಗೆಯ ಸ್ವಯಂಸೇವಾ ಸಂಸ್ಥೆಗಳು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಮತ್ತು ಒಟ್ಟಾರೆಯಾಗಿ ಸಮಾಜದ ಮೇಲೆ ಉಪಯುಕ್ತ ಪರಿಣಾಮ ಬೀರುತ್ತ ಬೆಳೆಯಲು ಅವಕಾಶವಿತ್ತು.

2014ರಿಂದಲೂ ಸರಕಾರ ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಗುಂಪುಗಳು ಮತ್ತು ಸಂಸ್ಥೆಗಳ ವಿರುದ್ಧ ತನ್ನ ಬಲ ಪ್ರಯೋಗಕ್ಕೆ ಪ್ರಯತ್ನಿಸಿದೆ. ಹಿಂದೆಯೂ ಯಾವುದೇ ರಾಜಕೀಯ ಪಕ್ಷಗಳು ನಾಗರಿಕ ಸಮಾಜ ಸಂಸ್ಥೆಗಳು ಸಂಪೂರ್ಣ ಸ್ವತಂತ್ರವಾಗಿರುವುದನ್ನು ಇಷ್ಟಪಟ್ಟಿರಲಿಲ್ಲ ಎಂಬುದು ನಿಜವಾಗಿದ್ದರೂ, ಬಿಜೆಪಿ ಇಂದು ಕೇವಲ ಅಸಡ್ಡೆ ಅಥವಾ ಅನುಮಾನದಿಂದ ನೋಡುವುದಷ್ಟೇ ಅಲ್ಲ, ಬದಲಾಗಿ ಅವುಗಳ ಮೇಲೆ ಹಗೆ ಸಾಧಿಸುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿವಿಲ್ ಸೊಸೈಟಿ ಫೋರಂನ ಸಭೆಗೆ ಪ್ರತಿನಿಧಿಯನ್ನು ಕಳುಹಿಸದಿರುವುದು ಮರೆವು ಅಥವಾ ಅಜಾಗರೂಕತೆ ಮಾತ್ರವಲ್ಲ, ಅದು ಉದ್ದೇಶಪೂರ್ವಕ ನಡೆ. ತನ್ನ ಸಿದ್ಧಾಂತದ ಪ್ರಚಾರ ಮತ್ತು ತನ್ನ ಆಡಳಿತದ ನಿರಂತರತೆಗೆ ಪತ್ರಿಕಾ ಸ್ವಾತಂತ್ರ್ಯ ಮತ್ತು ಉತ್ಸಾಹಿ ನಾಗರಿಕ ಸಮಾಜ ಗುಂಪುಗಳು ವಿರುದ್ಧವೆಂದು ಬಿಜೆಪಿ ಭಾವಿಸುವುದು ಹೆಚ್ಚಾಗುತ್ತಿದೆ.

Similar News