ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಿಯಾಂಕಾ ಗಾಂಧಿ, ಎಫ್‌ಐಆರ್ ಪ್ರತಿ ತೋರಿಸಲು ಪೊಲೀಸರಿಗೆ ಒತ್ತಾಯ

Update: 2023-04-29 14:57 GMT

ಹೊಸದಿಲ್ಲಿ: ಮಹಿಳಾ ಅತ್ಲೀಟ್‌ಗಳ ಮೇಲೆ ಲೈಂಗಿಕ ಶೋಷಣೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಿಲ್ಲಿಯ  ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ(Priyanka Gandhi) ಇಂದು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.

 ಲೈಂಗಿಕ ಕಿರುಕುಳದ ದೂರುಗಳ ಆಧಾರದ  ಮೇಲೆ  ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ಪ್ರತಿಯನ್ನು ನೀಡದ ದಿಲ್ಲಿ ಪೊಲೀಸರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ತರಾಟೆಗೆ ತೆಗೆದುಕೊಂಡರು.

"ಪ್ರಧಾನಿ (ನರೇಂದ್ರ ಮೋದಿ) ಅವರಿಂದ ನನಗೆ ಯಾವುದೇ ನಿರೀಕ್ಷೆಗಳಿಲ್ಲ, ಏಕೆಂದರೆ ಅವರು ಈ ಕುಸ್ತಿಪಟುಗಳ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಅವರೊಂದಿಗೆ ಏಕೆ ಮಾತನಾಡಿಲ್ಲ ಅಥವಾ ಅವರನ್ನು ಭೇಟಿ ಮಾಡಿಲ್ಲ. ಅವರನ್ನು( ಬ್ರಿಜ್ ಭೂಷಣ್ ಶರಣ್ ಸಿಂಗ್) ಉಳಿಸಲು ಸರಕಾರ ಏಕೆ ಪ್ರಯತ್ನಿಸುತ್ತಿದೆ'' ಎಂದು ಪ್ರಿಯಾಂಕಾ ಪ್ರಶ್ನಿಸಿದರು.   

ಸುಪ್ರೀಂ ಕೋರ್ಟ್ ಆದೇಶದ ನಂತರ ದಿಲ್ಲಿ  ಪೊಲೀಸರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್  ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಪೊಲೀಸ್ ಕ್ರಮದ ಭರವಸೆಯ ಹೊರತಾಗಿಯೂ, ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರನ್ನು "ತಕ್ಷಣವೇ ಬಂಧಿಸಬೇಕು''  ಎಂದು   ಒತ್ತಾಯಿಸಿ ತಮ್ಮ ಧರಣಿಯನ್ನು ಮುಂದುವರೆಸುವುದಾಗಿ ಹೇಳಿದರು.

Similar News