ರಾಜೀನಾಮೆ ನೀಡುವುದಿಲ್ಲ, ನಾನು ನಿರಪರಾಧಿ: ಬ್ರಿಜ್ ಭೂಷಣ್ ಸಿಂಗ್
ಹೊಸದಿಲ್ಲಿ: ಸುಪ್ರೀಂಕೋರ್ಟ್ ಆದೇಶದ ನಂತರ ದಿಲ್ಲಿ ಪೊಲೀಸರು ತನ್ನ ವಿರುದ್ಧ ಎರಡು ಎಫ್ ಐಆರ್ ದಾಖಲಿಸಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan) “ನಾನು ರಾಜೀನಾಮೆ ನೀಡುವುದಿಲ್ಲ, ನಾನು ತಪ್ಪಿತಸ್ಥನಲ್ಲ" ಎಂದು ಹೇಳಿದ್ದಾರೆ.
"ನಾನು ನಿರಪರಾಧಿ. ತನಿಖೆ ಎದುರಿಸಲು ಸಿದ್ಧನಿದ್ದೇನೆ. ನಾನು ತನಿಖಾ ಸಂಸ್ಥೆಯೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ ಹಾಗೂ ಸುಪ್ರೀಂ ಕೋರ್ಟ್‌ನ ಆದೇಶವನ್ನು ನಾನು ಗೌರವಿಸುತ್ತೇನೆ'' ಎಂದು ಬಿಜೆಪಿ ನಾಯಕ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಸೇರಿದಂತೆ ಏಳು ಮಂದಿ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಿದ್ದರು.
ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಮಾಡಿರುವ ಆರೋಪದ ಬಗ್ಗೆ ಪೋಕ್ಸೊ ಕಾಯ್ದೆಯಡಿ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದ ಸಂಬಂಧದ ಭಾರತೀಯ ದಂಡಸಂಹಿತೆಯ ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಎರಡನೇ ಎಫ್‌ಐಆರ್‌ನಲ್ಲಿ ಇತರ ಮಹಿಳಾ ಕುಸ್ತಿಪಟುಗಳು ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.
ದಿಲ್ಲಿ ಪೊಲೀಸರು ಸುಪ್ರೀಂಕೋರ್ಟ್‌ಗೆ ಈ ಸಂಬಂಧ ಮಾಹಿತಿ ನೀಡಿ ಎಫ್‌ಐಆರ್ ದಾಖಲಿಸುವ ಭರವಸೆ ನೀಡಿದ್ದರು.