×
Ad

ಮೋದಿ ಉಪನಾಮ ಪ್ರಕರಣ ವಿಚಾರಣೆಯಲ್ಲಿ ಗಂಭೀರ ಲೋಪ: ರಾಹುಲ್‌ ಗಾಂಧಿ ಪರ ವಕೀಲ

Update: 2023-04-29 20:51 IST

ಅಹ್ಮದಾಬಾದ್: ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧದ ವಿಚಾರಣಾ ಪ್ರಕ್ರಿಯೆಯಲ್ಲಿ ತುಂಬಾ ಗಂಭೀರ ಲೋಪಗಳಿದ್ದವು, ಇದು ಅವರನ್ನು ದೋಷಿಯೆಂದು ಘೋಷಿಸಲು ಕಾರಣವಾಯಿತು, ಎಂದು ಗುಜರಾತ್‌ ಹೈಕೋರ್ಟ್‌ ಮುಂದೆ ಇಂದು ರಾಹುಲ್‌ ಪರ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ ಹೇಳಿದರು.

ಈ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಗೀತಾ ಗೋಪಿ ಹಿಂದೆ ಸರಿದ ನಂತರ ಇಂದು ವಿಚಾರಣೆಯನ್ನು ಜಸ್ಟಿಸ್‌ ಹೇಮಂತ್‌ ಪ್ರಾಚ್ಚಕ್‌ ಕೈಗೆತ್ತಿಕೊಂಡರು.

ರಾಹುಲ್‌ ಗಾಂಧಿ ತಮ್ಮ ಹೇಳಿಕೆಯಲ್ಲಿ ದೂರುದಾರ ಪೂರ್ಣೇಶ್‌ ಮೋದಿ ಅವರ ಹೆಸರನ್ನೆತ್ತದೇ ಇರುವುದರಿಂದ ರಾಹುಲ್‌ ವಿರುದ್ಧದ ದೂರನ್ನು ಮುಂದುವರಿಸುವುದು ಸಾಧ್ಯವಿಲ್ಲ. ನನ್ನ ಕಕ್ಷಿಗಾರರು ಪೂರ್ಣೇಶ್‌ ಮೋದಿ ಎಂದು ಹೇಳಿದ್ದರೆ ಪ್ರಕರಣ ಮುಂದುವರಿಸಬಹುದಾಗಿತ್ತು. ಆದರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಸರಿಸಿದ್ದರು. ಆದುದರಿಂದ ಕಾನೂನಿನ ಪ್ರಕಾರ ಪ್ರಧಾನಿ ಮೋದಿ ದೂರು ದಾಖಲಿಸಬೇಕೇ ಹೊರತು ಈ ಸಮುದಾಯದ 13 ಕೋಟಿ ಮಂದಿಯಲ್ಲಿ ಯಾರಾದರೊಬ್ಬರಲ್ಲ,” ಎಂದು ಸಿಂಘ್ವಿ ಹೇಳಿದರು.

“ರಾಹುಲ್‌ ವಿರುದ್ಧದ ತೀರ್ಪು ಪ್ರಕಟಗೊಂಡ ನಂತರ ದೂರುದಾರನ ಪಾತ್ರ ಅಂತ್ಯಗೊಂಡಿದೆ ಹಾಗೂ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ಕುರಿತು ಯಾವುದೇ  ಆಸಕ್ತಿ ಇರಬಾರದು. ಅಧಿಕಾರಿ ಅಥವಾ ಶಾಸಕರಾಗಿದ್ದರೆ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ, ಆ ವ್ಯಕ್ತಿಗೆ ಕ್ಷೇತ್ರಕ್ಕೆ ಮತ್ತು ಮರುಚುನಾವಣೆಯ ಪರಿಣಾಮಗಳೂ ಉಂಟಾಗುತ್ತವೆ,” ಎಂದು ಸಿಂಘ್ವಿ ಹೇಳಿದರು.

ಮೋದಿ ಉಪನಾಮೆ ಕುರಿತಂತೆ ಮಾನನಷ್ಟ ಪ್ರಕರಣ ಎದುರಿಸುತ್ತಿದ್ದ ರಾಹುಲ್‌ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ್ದ ಸೂರತ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಹುಲ್‌ ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ಸೆಷನ್ಸ್‌ ಕೋರ್ಟ್‌ ವಜಾಗೊಳಿಸಿದ ನಂತರ ರಾಹುಲ್‌ ಗಾಂಧಿ ಎಪ್ರಿಲ್‌ 25ರಂದು ಹೈಕೋರ್ಟ್‌ ಕದ ತಟ್ಟಿದ್ದರು.

Similar News