×
Ad

ಸಿದ್ಧಾಪುರದಲ್ಲಿ ಅಮಿತ್ ಶಾರಿಂದ ರೋಡ್ ಶೋ

Update: 2023-04-29 21:45 IST

ಕುಂದಾಪುರ, ಎ.29: ರಾಜ್ಯದಲ್ಲಿ ವಿಕಾಸ ಹಾಗೂ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರಕಾರದ ಅವಶ್ಯಕತೆ ಇದೆ. 2024ರಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಮತ್ತೆ ಬರಬೇಕು ಎಂದಾದರೆ ರಾಜ್ಯದಲ್ಲಿಯೂ ಬಿಜೆಪಿ ಸರಕಾರ ರಚನೆಯಾಗಬೇಕು. ಕರಾವಳಿ ಜಿಲ್ಲೆಗಳು ಸುರಕ್ಷಿತವಾಗಿರಬೇಕು ಎಂದಾದರೆ ಬಿಜೆಪಿ ಪಕ್ಷದ ಅಭ್ಯರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಂಪಾರು-ಸಿದ್ದಾಪುರ  ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ರೋಡ್ ಶೋ ನಡೆಸಿದ ಅಮಿತ್ ಶಾ ಸಿದ್ದಾಪುರ ಸರ್ಕಲ್‌ನಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಬೈಂದೂರಿನ  ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ 25,000ಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಷ್ಟ್ರದ ಶಾಂತಿ - ಸುವ್ಯವಸ್ಥೆಗೆ ಧಕ್ಕೆ ತರುವ ಪಿಎಫ್‌ಐ ಸಂಘಟನೆಯ ಕಾರ್ಯ ಕರ್ತರ ಮೇಲಿನ ಕೇಸುಗಳನ್ನು ತೆಗೆಯುವ ಕೆಲಸ ಕಾಂಗ್ರೆಸ್‌ನಿಂದ ಆದರೆ, ಬಿಜೆಪಿ ಅವರನ್ನು ದಿಲ್ಲಿಯ ತಿಹಾರ್ ಜೈಲಿಗೆ ಕಳುಹಿಸುವ ಕೆಲಸ ಮಾಡಿದೆ ಎಂದರು.

ಸಂವಿಧಾನದಲ್ಲಿ ಹೇಳಲಾದ ಮೀಸಲಾತಿ ನಿಯಮಾವಳಿಗಳನ್ನು ಮೀರಿ ಮುಸ್ಲಿಮರಿಗೆ ನೀಡಲಾದ ಮೀಸಲಾತಿ ಯನ್ನು ರದ್ದು ಮಾಡುವ ಮೂಲಕ ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮತ್ತೆ ಮೀಸಲಾತಿ ತರುವ ಬಗ್ಗೆ ಮಾತನಾಡುತ್ತಿದೆ ಎಂದರು. 

ರಾಷ್ಟ್ರದಲ್ಲಿ ರೈತ ಪರವಾದ ಕಾರ್ಯಕ್ರಮವನ್ನು ಜಾರಿಗೊಳಿಸಿರುವ ಬಿಜೆಪಿ ಸರಕಾರ, ರಾಷ್ಟ್ರ ವಿರೋಧಿಗಳ ಚಟುವಟಿಕೆಗಳ ಕಣ್ಗಾವಲು ನಡೆಸಲು ಬೆಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆ ಮಾಡಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವ ಕೆಲಸ ಬಿಜೆಪಿ ಸರಕಾರದಿಂದ ಅಗಿದೆ ಎಂದರು.

ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕ್ಷೇತ್ರದ ಉಸ್ತುವಾರಿ ಬ್ರಿಜೇಶ್ ಚೌಟ, ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ ಶೆಟ್ಟಿ ಉಪ್ಪುಂದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

Similar News