ಬಿಲ್ಕಿಸ್ ಬಾನು ಕುಟುಂಬದವರ ಮೇಲೆ ಹಲ್ಲೆ; ಆರೋಪ
ವಡೋದರ: ಬಿಲ್ಕಿಸ್ ಬಾನು ಅವರ ಭಾವ ಹಾಗೂ ಭಾವನ ಮಗನ ಮೇಲೆ ಭಾನುವಾರ ಗುಜರಾತ್‌ನ ದಾಹೋದ್‌ನಲ್ಲಿರುವ ಲಿಮ್‌ಖೇಡಾ ಮಾರುಕಟ್ಟೆಯಲ್ಲಿ ಹಲ್ಲೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಅಜಿತ್ ಗಂಚಿ ಹಾಗೂ ಮಗ ಆಸೀಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿ ಉಳಿದುಕೊಂಡ ಗೋಧ್ರೋತ್ತರ ಗಲಭೆ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್ ಅವರ ಸಂಬಂಧಿಕರು ಎಂಬ ಕಾರಣಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎನ್ನುವುದು ಸಂತ್ರಸ್ತರ ಆರೋಪ.
"ರಾಧಿಕಪುರದ ನಿವಾಸಿಯಾಗಿರುವ ನಾನು ಮಗನ ಜತೆ ಲಿಮ್‌ಖೇಡಾ ಮಾರಕಟ್ಟೆಗೆ ಆಡುಗಳನ್ನು ಮಾರಾಟ ಮಾಡಲು ಹೋಗಿದ್ದ ಸಂದರ್ಭದಲ್ಲಿ ಉಮೇಶ್ ಎಂಬಾತ ಎಂಟ್ರಿ ಫೀ ಕೇಳಿದ. ಗಂಚಿ 500 ರೂಪಾಯಿಗಳನ್ನು ನೀಡಿದಾಗ ಆತನ ಬಳಿ ಚಿಲ್ಲರೆ ಇರಲಿಲ್ಲ. ಇದು ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು. ಆತ ನನ್ನ ಊರು ಯಾವುದು ಎಂದು ಕೇಳಿದ. ರಾಧಿಕಪುರ ಎಂದಾಗ, ನನ್ನನ್ನು ಕುರಿತು ನೀನು ಬಿಲ್ಕಿಸ್ ಬಾನೊ ಕುಟುಂಬದವನು ಎಮದು ಹೇಳಿದ. ಬಳಿಕ ಆತ ಹಾಗು ಮತ್ತೆ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿದರು" ಎಂದು ಗಂಚಿ ವಿವರಿಸಿದ್ದಾರೆ.
ಗಂಚಿಯವರ ಕಾಲು ಮುರಿದಿದ್ದು, ಆಸೀಫ್ ತಲೆಗೆ ಗಾಯಗಳಾಗಿವೆ. ರಾಧಿಕಪುರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಲಿಮ್‌ಖೇಡಾ ಠಾಣೆಯಲ್ಲೇ ದೂರು ನೀಡುವಂತೆ ಅಧಿಕಾರಿಗಳು ಸೂಚಿಸಿದರು ಎನ್ನಲಾಗಿದೆ. ಹಣದ ವಿವಾದದಿಂದ ಇಬ್ಬರ ಮೇಲೆ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಬಿಲ್ಕಿಸ್ ಸಂಬಂಧಿಕರಾದರೂ, ಜಗಳ ನಡೆದಿರುವುದಕ್ಕೂ ಬಿಲ್ಕಿಸ್ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ, ಅವರು ಬಿಲ್ಕಿಸ್ ಸಂಬಂಧಿಕರು ಅಥವಾ ಕಾನೂನು ಹೋರಾಟದ ಕಾರಣಕ್ಕೆ ಹಲ್ಲೆ ನಡೆದಿಲ್ಲ. ಈ ಕುರಿತು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಲ್ಕಿಸ್ ಕುಟುಂಬದ ಒಂಬತ್ತು ಮಂದಿಯನ್ನು ಹತ್ಯೆ ಮಾಡಿ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ 2002ರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಹನ್ನೊಂದು ಮಂದಿಗೆ ಶಿಕ್ಷೆಯಾಗಿತ್ತು. ಗುಜರಾತ್ ಸರ್ಕಾರದ ಕ್ಷಮಾದಾನ ನೀತಿಯ ಅನ್ವಯ ಕಳೆದ ವರ್ಷ ಬಂಧಿತರನ್ನು ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು.