ಛತ್ತಿಸ್‌ಗಢ ಚುನಾವಣೆಗೆ ಮುನ್ನ ಬಿಜೆಪಿ ತೊರೆದ ಹಿರಿಯ ಬುಡಕಟ್ಟು ಮುಖಂಡ
ರಾಯಪುರ: ಅವಿಭಜಿತ ಮಧ್ಯಪ್ರದೇಶ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಬುಡಕಟ್ಟು ಜನಾಂಗದ ಮುಖಂಡ ಹಾಗೂ ಹಿರಿಯ ಮುತ್ಸದ್ಧಿ ನಂದ ಕುಮಾರ್ ಸಾಯಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಇದು ದೊಡ್ಡ ಹೊಡೆತವಾಗಿದೆ. ಆತ್ಮಗೌರವಕ್ಕೆ ಆದ್ಯತೆ ನೀಡಿ, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ.
ಛತ್ತೀಸ್‌ಗಢ ರಾಜ್ಯ ಘೋಷಣೆ ಬಳಿಕ 77 ವರ್ಷ ವಯಸ್ಸಿನ ಸಾಯಿ ವಿರೋಧ ಪಕ್ಷದ ಮುಖಂಡರಾಗಿ ಕಾರ್ಯ ನಿರ್ವಹಿಸಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಿಎಂ ಹುದ್ದೆಯ ರೇಸ್‌ನಲ್ಲಿದ್ದರು. ಇಂಥ ಹಿರಿಯ ಮುಖಂಡ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಆಘಾತಕ್ಕೆ ಕಾರಣವಾಗಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಸಾಯಿ, "ಪಕ್ಷದೊಳಗೆಯೇ ನನ್ನ ಘನತೆ ಹಾಗೂ ವರ್ಚಸ್ಸಿಗೆ ಆಗಿರುವ ಧಕ್ಕೆಯ ಹಿನ್ನೆಲೆಯಲ್ಲಿ, ನನ್ನ ಆತ್ಮಗೌರವಕ್ಕೇ ಮೊದಲ ಆದ್ಯತೆ ನಿಡದೇ ನನಗೆ ಬೇರೆ ಆಯ್ಕೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಅವರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಗೆ ಪಕ್ಷವನ್ನು ಕಟ್ಟಿ ಬೆಳೆಸಿ ಪಕ್ಷದ ನೇತಾರರಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರನ್ನು ಹೇಗೆ ಗೌರವದಿಂದ ಕಾಣುತ್ತಿದ್ದರು ಎನ್ನುವುದನ್ನು ವಿವರಿಸಿದ್ದಾರೆ.
ಸಾಯಿ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿರುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಸಾವೊ ಸ್ಪಷ್ಟಪಡಿಸಿದ್ದಾರೆ. "ಸಾಯಿ ಅವರು ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರ ಸಂಪರ್ಕ ಸಾಧ್ಯವಾದಾಗ ತಪ್ಪು ತಿಳಿವಳಿಕೆ ಹೋಗಲಾಡಿಸುವ ಪ್ರಯತ್ನ ಮಾಡುತ್ತೇವೆ: ಎಂದು ಅವರು ಹೇಳಿದ್ದಾರೆ.