×
Ad

ಕ್ರಿಶ್ಚಿಯನ್ ಮಿಷನರಿಗಳಿಗೆ ತಮ್ಮ ಧರ್ಮ ಪ್ರಚಾರ ಮಾಡಲು ಕಾನೂನಾತ್ಮಕ ಹಕ್ಕಿದೆ: ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ

Update: 2023-05-01 12:01 IST

ಹೊಸದಿಲ್ಲಿ: ಅಕ್ರಮ ಮಾರ್ಗದಲ್ಲಿ ತಮ್ಮ ಚಟುಟಿಕೆಯನ್ನು ನಡೆಸುವುದನ್ನು ಹೊರತುಪಡಿಸಿ ಕ್ರಿಶ್ಚಿಯನ್ ಮಿಷನರಿಗಳಿಗೆ ತಮ್ಮ ಧರ್ಮವನ್ನು ಪ್ರಚಾರ ಮಾಡುವ ಕಾನೂನಾತ್ಮಕ ಹಕ್ಕಿದೆ ಎಂದು ಸೋಮವಾರ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ತಿಳಿದಿದೆ ಎಂದು Hindustan Times ವರದಿ ಮಾಡಿದೆ.

ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಸಂವಿಧಾನದ 25ನೇ ವಿಧಿಯನ್ವಯ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮವನ್ನು ಪ್ರಚಾರ ಮಾಡುವ ಹಕ್ಕನ್ನು ಖಾತ್ರಿಗೊಳಿಸುತ್ತದೆ ಎಂದು ಹೇಳಿದೆ. "ಹೀಗಾಗಿ ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಚಟುವಟಿಕೆಗಳನ್ನು ಕಾನೂನಿಗೆ ವಿರುದ್ಧ ಎಂದು ನೋಡಲಾಗುವುದಿಲ್ಲ" ಎಂದು ಪ್ರತಿಪಾದಿಸಲಾಗಿದೆ.

ಬಲವಂತದ ಮತಾಂತರ ಆರೋಪದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ಆಡಳಿತಾರೂಢ ಡಿಎಂಕೆ ಸರ್ಕಾರವು ಮೇಲಿನಂತೆ ಪ್ರಮಾಣ ಪತ್ರ ಸಲ್ಲಿಸಿದೆ. ಇದಲ್ಲದೆ ಮತಾಂತರ ನಿಷೇಧ ಕಾಯ್ದೆಯ ಕರಡು ಸಿದ್ಧಪಡಿಸುವಂತೆ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದೂ ಅಶ್ವಿನಿ ಉಪಾಧ್ಯಾಯ ಕೋರಿದ್ದರು.

ಮತಾಂತರ ನಿಷೇಧ ಕಾಯ್ದೆಯು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ ಹೊಂದಿದ್ದು, ಪ್ರತಿ ವ್ಯಕ್ತಿಯೂ ತನ್ನಿಷ್ಟದ ಧರ್ಮವನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಬೇಕು ಎಂದು ತಮಿಳುನಾಡು ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಪ್ರತಿಪಾದಿಸಲಾಗಿದೆ.

ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಬಲವಂತದ ಮತಾಂತರ ಘಟನೆಗಳು ಜರುಗಿಲ್ಲ ಎಂದೂ ತನ್ನ ಪ್ರಮಾಣ ಪತ್ರದಲ್ಲಿ ತಮಿಳುನಾಡು ಸರ್ಕಾರ ಹೇಳಿಕೊಂಡಿದೆ.

ಈ ಮಧ್ಯೆ, ಜನವರಿಯಲ್ಲಿ ಸುಪ್ರೀಂಕೋರ್ಟ್ ಹಾಗೂ ದಿಲ್ಲಿ ಹೈಕೋರ್ಟ್‌ನ ವಿವಿಧ ಪೀಠಗಳೆದುರು ಬಲವಂತದ ಮತಾಂತರ ಕುರಿತು ಹಲವಾರು ಅರ್ಜಿ ಸಲ್ಲಿಸಿರುವ ಅಶ್ವಿನಿ ಉಪಾಧ್ಯಾಯಗೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿತ್ತು. "ನೀವು ಅರ್ಜಿಯನ್ನು ಹಿಂಪಡೆಯುವುದು ಹಾಗೂ ಹೊಸ ಅರ್ಜಿಗಳನ್ನು ಸಲ್ಲಿಸುತ್ತಲೇ ಇರಲಾಗುವುದಿಲ್ಲ" ಎಂದು ಅವರ ವಿರುದ್ಧ ಕಿಡಿ ಕಾರಿತ್ತು.

Similar News