ಇದು ನಮ್ಮ ಕೇರಳ ಕತೆಯಲ್ಲ: 'ದಿ ಕೇರಳ ಸ್ಟೋರಿ' ಸಿನಿಮಾ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಆಕ್ರೋಶ

Update: 2023-05-01 08:18 GMT

ಹೊಸದಿಲ್ಲಿ: 'ದಿ ಕೇರಳ ಸ್ಟೋರಿ' ಸಿನಿಮಾ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ವಿವಾದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, 'ಇದು ನಿಮ್ಮ ಕೇರಳದ ಕತೆಯಿರಬಹುದು, ಆದರೆ, ನಮ್ಮ ಕೇರಳದ ಕತೆಯಲ್ಲ' ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನ್ನ ಟ್ರೈಲರ್‌ನಲ್ಲಿ ಉತ್ಪ್ರೇಕ್ಷಿತ ಅಂಕಿ-ಸಂಖ್ಯೆಗಳನ್ನು ನಮೂದಿಸಿರುವುದರಿಂದ 'ದಿ ಕೇರಳ ಸ್ಟೋರಿ' ಸಿನಿಮಾ ಚರ್ಚೆಯ ವಿಷಯವಾಗಿ ಬದಲಾಗಿದೆ.

ಸುದೀಪ್ತೊ ಸೇನ್ ನಿರ್ದೇಶಿಸಿರುವ, ವಿಪುಲ್ ಅಮೃತ್‌ಪಾಲ್ ಶಾ ನಿರ್ಮಿಸಿರುವ 'ದ ಕೇರಳ ಸ್ಟೋರಿ' ಮೇ 5, 2023ರಂದು ದೇಶಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗಿದೆ. 'ದಿ ಕೇರಳ ಸ್ಟೋರಿ' ಚಿತ್ರದ ತಾರಾಗಣದಲ್ಲಿ ಅಧಾ ಶರ್ಮ, ಯೋಗಿತ ಬಿಹಾನಿ, ಸಿದ್ಧಿ ಇದ್ನಾನಿ ಹಾಗೂ ಸೋನಿಯಾ ಬಲಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಸುದೀಪ್ತೊ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ'ಯ ಟ್ರೈಲರ್‌ನಲ್ಲಿ ಕೇರಳ ರಾಜ್ಯದಿಂದ 32,000 ಯುವತಿಯರು ಕಾಣೆಯಾಗಿ, ನಂತರ ಉಗ್ರಗಾಮಿ ಸಂಘಟನೆಯಾದ ಐಸಿಸ್ ಸೇರ್ಪಡೆಯಾಗಿದ್ದರು ಎಂದು ಪ್ರತಿಪಾದಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಸಿನಿಮಾದ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಇತ್ತೀಚೆಗೆ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್ ಆಗ್ರಹಿಸಿದ್ದರು.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, "'ದಿ ಕೇರಳ ಸ್ಟೋರಿ' ಸಿನಿಮಾವು ಕೇರಳದಲ್ಲಿನ 32,000 ಯುವತಿಯರು ಮತಾಂತರಗೊಂಡು ನಂತರ ಐಸಿಸ್ ಸದಸ್ಯರಾಗಿದ್ದಾರೆ ಎಂದು ತಪ್ಪಾಗಿ ಪ್ರತಿಪಾದಿಸಿದೆ. ಈ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಬಾರದು. ಸಿನಿಮಾ ಏನು ಹೇಳಲು ಬಯಸುತ್ತಿದೆ ಎಂಬುದನ್ನು ಅದರ ಟ್ರೈಲರ್ ಸ್ಪಷ್ಟವಾಗಿ ಹೇಳುತ್ತಿದೆ" ಎಂದು ಬರೆದುಕೊಂಡಿದ್ದಾರೆ.

"ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಸಮಸ್ಯೆಯಲ್ಲ; ಆದರೆ, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸಂಶಯದ ನೆರಳನ್ನು ಚಾಚಿ, ಸಮಾಜದಲ್ಲಿ ಒಡಕನ್ನುಂಟು ಮಾಡುವ ಸಂಘ ಪರಿವಾರದ ಕಾರ್ಯಸೂಚಿಯನ್ನು ಜಾರಿಗೊಳಿಸುವ ಪ್ರಯತ್ನದ ಭಾಗವಾಗಿದೆ" ಎಂದೂ ಟೀಕಿಸಿದ್ದಾರೆ.

Similar News