IPL2023: ಕೇದಾರ್‌ ಜಾಧವ್‌ಗೆ ಒಂದು ಕೋಟಿ ರೂ. ನೀಡಿ ತಂಡಕ್ಕೆ ಸೇರ್ಪಡೆಗೊಳಿಸಿದ ಆರ್‌ಸಿಬಿ

Update: 2023-05-01 14:00 GMT

ಹೊಸ ದಿಲ್ಲಿ: ಐಪಿಎಲ್2023 ಋತುವಿನ ಉಳಿದ ಪಂದ್ಯಗಳಿಗೆ ಡೇವಿಡ್ ವಿಲ್ಲಿಗೆ ಬದಲಿ ಆಟಗಾರನನ್ನಾಗಿ ಕೇದಾರ್ ಜಾಧವ್‌ರನ್ನು ಆರ್‌ಸಿಬಿ ತಂಡ ಹೆಸರಿಸಿದೆ ಎಂದು timesofindia.com ವರದಿ ಮಾಡಿದೆ.

ಈ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಐಪಿಎಲ್ ಮಾಧ್ಯಮ ಕೇಂದ್ರವು, "ಈ ಹಿಂದೆ ಆರ್‌ಸಿಬಿ ತಂಡದ ಪರವಾಗಿ 17 ಪಂದ್ಯಗಳನ್ನು ಪ್ರತಿನಿಧಿಸಿದ್ದ ಬಲಗೈ ಬ್ಯಾಟರ್ ಕೇದಾರ್ ಜಾಧವ್‌ಗೆ ಒಂದು ಕೋಟಿ ರೂಪಾಯಿ ಪಾವತಿಸಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ" ಎಂದು ಹೇಳಿದೆ.

ಈ ಬಾರಿಯ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ಪರ ನಾಲ್ಕು ಪಂದ್ಯಗಳನ್ನಾಡಿದ್ದ ಇಂಗ್ಲೆಂಡಿನ ಆಲ್‌ರೌಂಡರ್ ವಿಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. 2010ರಲ್ಲಿ ಐಪಿಎಲ್ ಪಂದ್ಯಾವಳಿಗೆ ಪದಾರ್ಪಣೆ ಮಾಡಿದ್ದ ಕೇದಾರ್ ಜಾಧವ್, ಈವರೆಗೆ 93 ಐಪಿಎಲ್ ಪಂದ್ಯಗಳನ್ನಾಡಿದ್ದು, ಒಟ್ಟು 1196 ರನ್ ಗಳಿಸಿದ್ದಾರೆ.

38 ವರ್ಷದ ಮಹಾರಾಷ್ಟ್ರ ಆಲ್‌ರೌಂಡರ್ ಕೇದಾರ್ ಜಾಧವ್, ಭಾರತ ತಂಡದ ಪರ 73 ಏಕದಿನ ಪಂದ್ಯಗಳನ್ನಾಡಿದ್ದು, 1,389 ರನ್ ಕಲೆ ಹಾಕಿದ್ದಾರೆ ಮತ್ತು ತಮ್ಮ ಆಫ್ ಸ್ಪಿನ್ ಬೌಲಿಂಗ್‌ನಿಂದ 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಏಳು ಟಿ-20 ಪಂದ್ಯಗಳನ್ನಾಡಿರುವ ಅವರು, ಕೇವಲ 58 ರನ್ ಗಳಿಸಿದ್ದಾರೆ. ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ ಮತ್ತು ಅವರು ಮರಾಠಿ ಭಾಷೆಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

Similar News