ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರಜತ ಸಂಭ್ರಮಾಚರಣೆ
ಉಡುಪಿ, ಮೇ 1: ಮಂಗಳೂರು ಹಾಗೂ ಮುಂಬೈ ಮಧ್ಯೆ ಓಡಾಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು 1998ರ ಮೇ 1ರಂದು ತನ್ನ ಪ್ರಪ್ರಥಮ ಓಡಾಟ ಆರಂಭಿಸಿ 25 ವರ್ಷ ಪೂರ್ಣಗೊಳಿಸಿದ ಸಂದರ್ಭ ಸೋಮವಾರ ಉಡುಪಿ ರೈಲ್ವೆ ಯಾತ್ರಿ ಸಂಘವು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಮಂಗಳೂರಿನಿಂದ ಉಡುಪಿಗೆ ಆಗಮಿಸಿದ ರೈಲನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿ ಮತ್ಸ್ಯಗಂಧ ರಜತ ಸಂಭ್ರಮವನ್ನು ಆಚರಿಸಲಾಯಿತು.
ಈ ಸಂದರ್ಭ ರೈಲಿನ ಚಾಲಕರು ಮತ್ತು ನಿರ್ವಾಹಕರನ್ನು ಅಭಿನಂದಿಸಿ ಹಾಗು ರೈಲ್ವೆ ಯಾತ್ರೀಕರಿಗೆ ಸಿಹಿ ತಿಂಡಿ ಹಂಚಲಾಯಿತು. ರೈಲು ಆರಂಭವಾಗಿ ಕಾಲು ಶತಮಾನ ಕಳೆದರೂ ಅದೇ ಹಳೆಯ ಬೋಗಿಗಳಲ್ಲಿ ಸಂಚಾರ, ಸುಧಾರಣೆ ಕಾಣದ ಮೂಲಭೂತ ಸೌಕರ್ಯಗಳು, ಹೆಚ್ಚುತ್ತಿರುವ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಪ್ರಯಾಣಿಕರಿಗೆ ನಿರಾಸೆ ತಂದಿದೆ ಎಂದು ಸಂಘ ಅಭಿಪ್ರಾಯ ವ್ಯಕ್ತಪಡಿಸಿತು.
ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಶೇಖರ್ ಎವ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಜಿತ್ ಶೆಣೈ, ಕೋಶಾಧಿಕಾರಿ ರಾಮಚಂದ್ರ ಆಚಾರ್ಯ, ನಿರ್ದೇಶಕರಾದ ಧೀರಜ್, ನಾರಾಯಣ್ ಕಾಂಚನ್, ಜಾನ್ ರೆಬೆಲ್ಲೊ, ಸದಾನಂದ್ ಅಮೀನ್, ಪದಾಧಿಕಾರಿಗಳಾದ ಅಪ್ರಾಯ ಶೆಟ್ಟಿಗಾರ್, ಸತೀಶ್, ದಿನೇಶ್, ರವೀಂದ್ರ, ಮೋಹನ್ ಕಲ್ಮಾಡಿ, ಸ್ಟೇಷನ್ ಮಾಸ್ಟರ್ ನಾಗರಾಜ್ ಶೆಟ್ಟಿ, ರೈಲ್ವೆ ಸುರಕ್ಷಾ ದಳದ ಉಪನಿರೀಕ್ಷಕ ಸುಧೀರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಎ.ಎರ್.ಕೊಡಂಚ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಕಾರ್ಯಕ್ರಮ ನಿರೂಪಿಸಿದರು.