'ದಿ ಕೇರಳ ಸ್ಟೋರಿ' ಪ್ರತಿಪಾದನೆ ಸಾಬೀತುಪಡಿಸಿದರೆ 1 ಕೋಟಿ ರೂ. ಬಹುಮಾನ: ಮುಸ್ಲಿಂ ಯೂತ್ ಲೀಗ್ ಸವಾಲು

Update: 2023-05-01 15:50 GMT

ತಿರುವನಂತಪುರಂ: ಒಂದು ವೇಳೆ 'ದಿ ಕೇರಳ ಸ್ಟೋರಿ' ಚಿತ್ರದ ಟ್ರೈಲರ್‌ನಲ್ಲಿ ಪ್ರತಿಪಾದಿಸಿರುವಂತೆ ಕೇರಳದ 32,000 ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿ, ನಂತರ ಉಗ್ರವಾದಿ ಸಂಘಟನೆಯಾದ ಐಸಿಸ್‌ಗೆ ಸೇರ್ಪಡೆ ಮಾಡಲಾಗಿದೆ ಎಂಬ ವಿವಾದಾತ್ಮಕ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು ಸಾಬೀತುಪಡಿಸಿದರೆ ರೂ. ಒಂದು ಕೋಟಿ ನಗದು ಬಹುಮಾನ ನೀಡುವುದಾಗಿ ರಾಜಕೀಯ ಸಂಘಟನೆಯಾದ ಮುಸ್ಲಿಂ ಯೂತ್ ಲೀಗ್ ಸವಾಲು ಹಾಕಿದೆ ಎಂದು thenewsminute.com ವರದಿ ಮಾಡಿದೆ.

ಈ ಅಭಿಯಾನದ ಭಾಗವಾಗಿ, ಕೇರಳದ ಇನ್ನಿಬ್ಬರು ನಾಗರಿಕರೂ ಚಿತ್ರ ತಂಡವು ಈ ಸವಾಲನ್ನು ಸ್ವೀಕರಿಸಿದರೆ ನಗದು ಬಹುಮಾನ ನೀಡಲಾಗುವುದು ಎಂದು ಮುಂದೆ ಬಂದಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ 'ದಿ ಕೇರಳ ಸ್ಟೋರಿ' ಚಿತ್ರದ ಪ್ರಥಮ ಟ್ರೈಲರ್‌ನಲ್ಲಿ ಕೇರಳದ 32,000 ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿ, ನಂತರ ಉಗ್ರವಾದಿ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂದು ಪ್ರತಿಪಾದಿಸುವುದನ್ನು ತೋರಿಸಲಾಗಿತ್ತು. 

ಈ ನಡುವೆ, ಬ್ಲಾಗರ್ ಹಾಗೂ ಲೇಖಕ ನಝೀರ್ ಹುಸೇನ್ ಕಿಳಕ್ಕೇಡತ್ತ್ ಕೂಡಾ ವಲಸೆ ಹೋಗಿರುವ 32,000 ಯುವತಿಯರ ಪೈಕಿ ಕನಿಷ್ಠ 10 ಯುವತಿಯರನ್ನಾದರೂ ಬಲವಂತವಾಗಿ ಮತಾಂತರಗೊಳಿಸಿ, ಐಸಿಸ್‌ಗೆ ಸೇರ್ಪಡೆ ಮಾಡಲಾಗಿದೆ ಎಂಬ ಬಗ್ಗೆ ಪುರಾವೆ ಒದಗಿಸಿದರೆ ರೂ. 10 ಲಕ್ಷ ಬಹುಮಾನ ನೀಡುವೆ ಎಂದು ಸವಾಲು ಹಾಕಿದ್ದಾರೆ.

ನಝೀರ್ ಅವರನ್ನು ಪ್ರೇರಣೆ ಎಂದು ಉಲ್ಲೇಖಿಸಿರುವ ಮಲಯಾಳಂ ನಟ ಹಾಗೂ ವಕೀಲ ಎಸ್.ಶುಕ್ಕೂರ್, ಬಲವಂತವಾಗಿ ಮತಾಂತರಿಸಿ, ಐಸಿಸ್ ಸದಸ್ಯರನ್ನಾಗಿಸಿರುವ ಕನಿಷ್ಠ 32 ಕೇರಳ ಯುವತಿಯರ ಬಗ್ಗೆ ಯಾರಾದರೂ ಮಾಹಿತಿ ಪ್ರಕಟಿಸಿದರೆ, ಅಂಥವರಿಗೆ ರೂ. 11 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಸವಾಲು ಹಾಕಿದ್ದಾರೆ.

Similar News